24 ಕ್ಯಾರೆಟ್ ಚಿನ್ನದಲ್ಲಿ ಮಿನಿ ವಿಶ್ವಕಪ್ ಕೆತ್ತಿದ ಸ್ವರ್ಣಶಿಲ್ಪಿ! ಸಮುದ್ರದಾಳದಲ್ಲಿ ಭಾರತಕ್ಕೆ ವಿಶ್ ಮಾಡಿದ ಅಭಿಮಾನಿ!
ಮಂಗಳೂರು (ನ.19): ಇಡೀ ದೇಶಾದ್ಯಂತ ಒಂದೇ ಕೂಗು ಗೆದ್ದು ಬಾ ಇಂಡಿಯಾ ಎಂಬ ಆಶಯ ಮೊಳಗುತ್ತಿದೆ. ರಾಜ್ಯ ಹಾಗೂ ದೇಶಾದ್ಯಂತ ವಿವಿಧ ಪೂಜೆ, ಪುನಸ್ಕಾರ ಮಾಡಲಾಗುತ್ತಿದ್ದು ಹೊಸ ಹೊಸ ಪ್ರಯತ್ನಗಳ ಮೂಲಕ ಶುಭಾಶಯ ಕೋರಲಾಗುತ್ತಿದೆ. ಮೂಡಬಿದರೆಯ ಅಕ್ಕಸಾಲಿಗ ಅಭಿಮಾನಿಯೊಬ್ಬ ಚಿನ್ನದಲ್ಲಿ ಮಿನಿ ವಿಶ್ವಕಪ್ ನಿರ್ಮಿಸಿ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ, ಕಾರವಾರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಅಭಿಮಾನಿಗಳು ವಿಶ್ ಮಾಡಿದ್ದಾರೆ.
ಮೂಡುಬಿದಿರೆ ಸ್ವರ್ಣಶಿಲ್ಪಿಯೊಬ್ಬರು ಚಿನ್ನದಲ್ಲಿ ಮಿನಿ ವಿಶ್ವಕಪ್ ಕೆತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಕುಂಡದಬೆಟ್ಟು ಸತೀಶ ಆಚಾರ್ಯ ಕೈ ಚಳಕವಾಗಿದೆ. ಮೂಡುಬಿದಿರೆ ದೊಡ್ಮನೆ ರಸ್ತೆ ವಠಾರದಲ್ಲಿ ಸ್ವರ್ಣ ಶಿಲ್ಪಿಯಾಗಿರುವ ಸತೀಶ ಆಚಾರ್ಯ ಅವರು, ಕೇವಲ 50 ಮಿಲಿಗ್ರಾಂ ತೂಕದ 24 ಕ್ಯಾರೆಟ್ ಚಿನ್ನದಲ್ಲಿ ವಿಶ್ವಕಪ್ ಕೆತ್ತನೆ ಮಾಡಿದ್ದಾರೆ. 916 ಹಾಲ್ ಮಾರ್ಕ್ ನ 1.1 ಇಂಚು ಎತ್ತರದ ಚಿನ್ನದ ವಿಶ್ವಕಪ್ ಪ್ರತಿಕೃತಿಯಾಗಿದೆ.
ಸತೀಶ ಆಚಾರ್ಯರು 24 ವರ್ಷಗಳಿಂದ ಚಿನ್ನದ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ 4 ವಿಶ್ವಕಪ್ ಗಳ ಮಿನಿ ಪ್ರತಿಕೃತಿ ತಯಾರಿಸಿರುವ ಸತೀಶ್ ಆಚಾರ್ಯ ಅವರು, 2007ರ ಟಿ20 ವರ್ಲ್ಡ್ ಕಪ್ ವೇಳೆ ಒಂದು ಗ್ರಾಂ, 200 ಮಿಲಿಗ್ರಾಂ ಚಿನ್ನ ಬಳಸಿ ವಿಶ್ವಕಪ್ ನಿರ್ಮಿಸಿದ್ದರು.
2011ರಲ್ಲಿ 3 ಗ್ರಾಂ ಬೆಳ್ಳಿಯಲ್ಲಿ 2 ಇಂಚು ಎತ್ತರದ ವಿಶ್ವಕಪ್ ರಚನೆ ಮಾಡಿದ್ದರು. ನಂತರ, 2013ರಲ್ಲಿ 500 ಮಿಲಿಗ್ರಾಂ ಚಿನ್ನದಲ್ಲಿ ಒಂದು ಇಂಚು ಎತ್ತರದ ಚಾಂಪಿಯನ್ ಶಿಪ್ ಟ್ರೋಫಿ ನಿರ್ಮಿಸಿದ್ದರು. ಇದೀಗ 10 ವರ್ಷಗಳ ಬಳಿಕ ಮಗದೊಮ್ಮೆ ಚಿನ್ನದ ಟ್ರೋಫಿ ರಚನೆ ಮಾಡಿದ್ದಾರೆ.
ಮತ್ತೊಂದೆಡೆ ಸಮುದ್ರದ ಆಳದಲ್ಲಿಯೂ ಭಾರತ ಕ್ರಿಕೆಟ್ ತಂಡಕ್ಕೆ ಗೆದ್ದು ಬಾ ಇಂಡಿಯಾ ಎಂದು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್ ಮಾಡಿ ಇಂಡಿಯಾ ತಂಡಕ್ಕೆ ಅಭಿಮಾನಿಗಳು ವಿಶ್ ಮಾಡಿದರು.
ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್‌ನ ತಜ್ಞ ಡೈವರ್‌ಗಳಾದ ಅನೀಶ್, ನವೀನ್ ಹಾಗೂ ಲೋಕಿ ಎಂಬವರಿಂದ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಮುದ್ರದಡಿಯಲ್ಲಿ ಆಲ್ ದ ಬೆಸ್ಟ್ ಟೀಂ ಇಂಡಿಯಾ ಎಂಬ ಪೋಸ್ಟರ್ ಹಿಡಿದುಕೊಂಡು ವಿಶ್ ಮಾಡಿದ್ದಾರೆ.
ವರ್ಲ್ಡ್ ಕಪ್‌ನಲ್ಲಿ ಭಾರತ ಗೆಲ್ಲುತ್ತೆ ಅನ್ನೋ ಭರವಸೆಯೊಂದಿಗೆ ಜನರಿಗೆ ಸ್ಪೆಷಲ್ ಆಫರ್ ನೀಡಿದ ನೇತ್ರಾಣಿ ಅಡ್ವೆಂಚರ್ಸ್ ಒಂದು ವಾರಗಳ ಕಾಲ ಕೇವಲ 1999ರೂ. ಗೆ ಸ್ಕೂಬಾ ಡೈವಿಂಗ್ ಪ್ಯಾಕೇಜ್ ಘೋಷಿಸಿದ್ದಾರೆ. ವರ್ಲ್ಡ್ ಕಪ್ ಹಿನ್ನೆಲೆಯಲ್ಲಿ ನೇತ್ರಾಣಿ ಅಡ್ವೆಂಚರ್ಸ್ ಸ್ಕೂಬಾ ಡೈವಿಂಗ್‌ಗೆ ಅರ್ಧಕ್ಕರ್ಧ ದರ ಕಡಿಮೆ ಮಾಡಿದ್ದಾರೆ.