ಕುತ್ತಿಗೆಗೆ ಚಾಕು ಇಟ್ಟು ಮಹಿಳೆಯ ಅಶ್ಲೀಲ ವಿಡಿಯೋ ಮಾಡಿದ!| ಒಬ್ಬಂಟಿ ಮಹಿಳೆಯ ಮೇಲೆ ಕೃತ್ಯ| ಚಿನ್ನಾಭರಣ ದೋಚಿ ಪರಾರಿ

ಬೆಂಗಳೂರು[ಆ.04]: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೊಬ್ಬ, ಏಕಾಂಗಿಯಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

28 ವರ್ಷದ ಹೋಟೆಲ್‌ ಉದ್ಯೋಗಿ ದೌರ್ಜನ್ಯಕ್ಕೆ ತುತ್ತಾಗಿದ್ದು, ಎರಡು ದಿನಗಳ ಹಿಂದೆ ಒಬ್ಬರೇ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಮನೆಗೆ ಮುಂಜಾನೆ 3.30ರಲ್ಲಿ ಆಗುಂತಕ ನುಗ್ಗಿದ್ದ. ಆ ವೇಳೆ ನಿದ್ರೆ ಮಾಡುತ್ತಿದ್ದ ತನಗೆ ಶಬ್ದ ಕೇಳಿ ಎಚ್ಚರವಾಯಿತು. ಕಣ್ಣು ತೆರೆದಾಗ ಎದುರಿಗೆ ಆಪರಿಚಿತ ವ್ಯಕ್ತಿ ಚಾಕು ಹಿಡಿದು ನಿಂತು ಜೋರಾಗಿ ಕೂಗಿದರೆ ಪ್ರಾಣ ತೆಗೆಯುವುದಾಗಿ ಆತ ಬೆದರಿಸಿದ. ಬಳಿಕ ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಹಲ್ಲೆ ನಡೆಸಿದ ಆತ, ಕೊನೆಗೆ 36 ಗ್ರಾಂ ಚಿನ್ನದ ಸರ ಹಾಗೂ 5 ಗ್ರಾಂ ಕಿವಿ ಓಲೆ, ಉಂಗುರ ಸೇರಿ ಚಿನ್ನಾಭರಣ ಕಸಿದುಕೊಂಡ. ಕೊನೆಗೆ ಆತನಿಂದ ಬಿಡಿಸಿಕೊಂಡು ಜೋರಾಗಿ ಕಿರುಚಿದೆ. ಇದರಿಂದ ಭಯಗೊಂಡ ಆತ ಬಾಗಿಲು ತೆಗೆದು ಓಡಿ ಹೋದ ಎಂದು ಸಂತ್ರಸ್ತೆ ಹೇಳಿದ್ದಾರೆ ಎನ್ನಲಾಗಿದೆ.

ದುಷ್ಕರ್ಮಿ ವಯಸ್ಸು 25 ರಿಂದ 30 ವರ್ಷದವನಾಗಿದ್ದು, ಕಪ್ಪು ಪ್ಯಾಂಟ್‌ ಮತ್ತು ಕಪ್ಪು ಟಿ ಶರ್ಟ್‌ ಧರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಾಹಿತಿ ಮೇರೆಗೆ ಆರೋಪಿ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಆಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದು, ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಆಪ್‌ಲೋಡ್‌ ಮಾಡುವುದಾಗಿ ಸಹ ಶೋಷಿತ ಮಹಿಳೆಗೆ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.