ಬೆಂಗಳೂರು ಗ್ರಾಮಾಂತರದ ಬಾಗಲೂರು ಬಳಿ ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದು, ಆಟವಾಡುತ್ತಿದ್ದ ಐದು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ದುರಂತದಲ್ಲಿ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಗೋಡೆಯ ಮಾಲೀಕರ ನಿರ್ಲಕ್ಷ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಕಾಂಪೌಂಡ್ ಗೋಡೆಯೊಂದು ಮುರಿದು ಬಿದ್ದ ಪರಿಣಾಮ, ಆಟವಾಡುತ್ತಿದ್ದ ಐದು ವರ್ಷದ ಮುಗ್ಧ ಮಗುವೊಂದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮತ್ತೊಂದು ಮಗು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಟವಾಡುತ್ತಿದ್ದಾಗ ಅಪ್ಪಳಿಸಿದ ಸಾವು

ಮಾಹಿತಿಯ ಪ್ರಕಾರ, ಬೆಂಗಳೂರು ಉತ್ತರ ತಾಲೂಕಿನ ಬಾಗಲೂರಿನ ಸಮೀಪವಿರುವ ಬಂಡಿಕೊಡಿಗೇಹಳ್ಳಿಯಲ್ಲಿ ನಿನ್ನೆ ಸಂಜೆ ಸುಮಾರು 6:30ರ ವೇಳೆಗೆ ಈ ದುರಂತ ಸಂಭವಿಸಿದೆ. ಸಂಜೆಯ ಸಮಯವಾಗಿದ್ದರಿಂದ ಸ್ಥಳೀಯ ನಿವಾಸಿಗಳ ಮೂವರು ಮಕ್ಕಳು ಮನೆಯ ಸಮೀಪವಿರುವ ಕಾಂಪೌಂಡ್ ಒಂದರ ಗೇಟ್ ಬಳಿ ಎಂದಿನಂತೆ ಆಟವಾಡುತ್ತಿದ್ದರು. ದುರದೃಷ್ಟವಶಾತ್, ಮೃತ ಮಗು ಅಫೀನ್ (5 ವರ್ಷ) ತಲೆಯ ಮೇಲೆ ಕಾಂಪೌಂಡ್ ಗೋಡೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದೆ. ಸಮನ್ವಿ - ಗೋಡೆ ಕುಸಿತದಿಂದ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೊದಲೇ ಬಿರುಕು ಬಿಟ್ಟಿತ್ತು ಕಾಂಪೌಂಡ್ ಗೋಡೆ: ನಿರ್ಲಕ್ಷ್ಯವೇ ಕಾರಣವಾಯ್ತಾ?

ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಈ ಅವಘಡ ಸಂಭವಿಸಿದ ಕಾಂಪೌಂಡ್ ಗೋಡೆಯು ಮೊದಲೇ ಜರ್ಜರಿತಗೊಂಡು, ದೊಡ್ಡದಾಗಿ ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಹಂತದಲ್ಲಿದ್ದ ಈ ಗೋಡೆಯನ್ನು ದುರಸ್ತಿ ಮಾಡದೆ ಹಾಗೇ ಬಿಟ್ಟಿರುವುದು ಈ ಭೀಕರ ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಗೋಡೆಯ ಭಾರೀ ಇಟ್ಟಿಗೆ ಹಾಗೂ ಸಿಮೆಂಟ್ ಚಪ್ಪಡಿಗಳ ಅಡಿಯಲ್ಲಿ ಸಿಲುಕಿದ ಮಕ್ಕಳು ಕಿರುಚಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮಕ್ಕಳನ್ನು ರಕ್ಷಿಸಲು ಮುಂದಾದರಾದರೂ, ಅಷ್ಟರಲ್ಲೇ 5 ವರ್ಷದ ಬಾಲಕ ಅಫೀನ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಸ್ಥಳಕ್ಕೆ ಧಾವಿಸಿದ ಬಾಗಲೂರು ಪೊಲೀಸರು

ಘಟನೆ ನಡೆದ ಬೆನ್ನಲ್ಲೇ ಬಾಗಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಾಳು ಬಾಲಕಿಯ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ಜರ್ಜರಿತವಾಗಿದ್ದ ಕಾಂಪೌಂಡ್ ಗೋಡೆಯ ಮಾಲೀಕರ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಹೆತ್ತವರ ಆಕ್ರಂದನ

ಕಣ್ಣೆದುರೇ ಆಟವಾಡುತ್ತಿದ್ದ ಮಗು ಹೆಣವಾಗಿ ಮಲಗಿರುವುದನ್ನು ಕಂಡು ಹೆತ್ತ ಕರುಳು ಒಡೆದು ಹೋಗಿದೆ. ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬಂಡಿಕೊಡಿಗೇಹಳ್ಳಿ ಗ್ರಾಮದಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಹಳೆಯ ಹಾಗೂ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.