Asianet Suvarna News Asianet Suvarna News

ಬೆಂಗಳೂರಿನಲ್ಲಿ ಮಳೆ ಅನಾಹುತಕ್ಕೆ ಸ್ಪಂದಿಸಲು ಗುದ್ದಲಿ, ಮಚ್ಚು ಹಿಡಿದ ಟ್ರಾಫಿಕ್‌ ಪೊಲೀಸರು!

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ಅಗತ್ಯ ಸಲಕರಣೆಗಳನ್ನು ಖರೀದಿಸಿದ್ದಾರೆ.

Bengaluru Traffic Police unique plan to help public during rain gvd
Author
First Published May 29, 2023, 7:42 AM IST

ಬೆಂಗಳೂರು (ಮೇ.29): ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ಅಗತ್ಯ ಸಲಕರಣೆಗಳನ್ನು ಖರೀದಿಸಿದ್ದಾರೆ. ಇತ್ತೀಚೆಗೆ ನಗರದ ಕೆ.ಆರ್‌.ವೃತ್ತದ ಬಳಿ ಅಂಡರ್‌ ಪಾಸ್‌ನಲ್ಲಿ ಮಳೆ ನೀರಿನಲ್ಲಿ ಕಾರು ಮುಳುಗಿ ಮಹಿಳಾ ಟೆಕ್ಕಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ನಗರ ಸಂಚಾರ ಪೊಲೀಸರು ಮಳೆಯಿಂದ ಅನಾಹುತಗಳಾದಾಗ ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳ ತುರ್ತು ತಂಡಗಳು ಬರುವವರೆಗೂ ಕಾಯದೆ, ತಾವೇ ಸ್ಥಳಕ್ಕೆ ತೆರಳಿ ಸ್ಪಂದಿಸಲು ಅಗತ್ಯ ಸಲಕರಣೆಗಳ ಖರೀದಿಸಿ ತಮ್ಮ ವಾಹನಗಳಲ್ಲಿ ಇರಿಸಿಕೊಂಡಿದ್ದಾರೆ.

ನಗರದಲ್ಲಿ ಜೋರು ಮಳೆಯಾದ ಸಂದರ್ಭಗಳಲ್ಲಿ ಹಲವು ರಸ್ತೆಗಳಲ್ಲಿ ನೀರು ತುಂಬಿ ಹೊಳೆಯಂತಾಗುತ್ತವೆ. ರಸ್ತೆ ಬದಿಯ ಮರಗಳ ಬೇರುಗಳು ಸಡಿಲಗೊಂಡು ಮರಗಳೇ ಧರೆಗೆ ಉರುವುದು, ರೆಂಬೆ-ಕೊಂಬೆಗಳು ಮುರಿದು ರಸ್ತೆಗೆ ಬೀಳುವುದು ಸಾಮಾನ್ಯವಾಗಿದೆ. ಇನ್ನು ರಸ್ತೆ ಗುಂಡಿಗಳಲ್ಲಿ ಮಳೆ ನೀರು ತುಂಬಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಮಳೆ ಅನಾಹುತಗಳ ಸಂದರ್ಭಗಳಲ್ಲಿ ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆಗಳ ತುರ್ತು ಸ್ಪಂದನಾ ತಂಡಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಸ್ಪದಿಸಲು ಸಮಯ ಹಿಡಿಯುತ್ತದೆ. ಇದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಮಳೆ ಬಿದ್ದ ಸಂದರ್ಭದಲ್ಲಿ ಸಮಸ್ಯೆಗಳಾದರೆ, ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಪಂದಿಸಲು ನಗರ ಸಂಚಾರ ಪೊಲೀಸರು ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಪ್ರಕಟ: ಯಾವ ಸಚಿವರಿಗೆ ಯಾವ ಖಾತೆ ಗೊತ್ತಾ?

ನಗರದ ಸಂಚಾರ ಪೊಲೀಸ್‌ ಠಾಣೆಗಳ ಪ್ರತಿ ಠಾಣೆಯ ವಾಹನದಲ್ಲಿ ಗುದ್ದಲಿ, ಮಚ್ಚುಗಳು, ಹಾರೆ, ಸಲಾಕೆಗಳು, ಮೋಟರ್‌, ಪೈಪ್‌ಗಳು, ತಂತಿಗಳು, ಮರ ಕತ್ತರಿಸುವ ಯಂತ್ರ, ಗರಗಸ, ಪಿಕಾಸಿ, ಹಗ್ಗ ಸೇರಿದಂತೆ ಅಗತ್ಯ ಸಲರಣೆಗಳು ಇರಲಿವೆ. ಮಳೆ ಸಂದರ್ಭದಲ್ಲಿ ಏನಾದರೂ ಸಮಸ್ಯೆಗಳು ಉಂಟಾದಲ್ಲಿ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ತಕ್ಷಣಕ್ಕೆ ಸ್ಪಂದಿಸಲಿದ್ದಾರೆ. ಬಿಬಿಎಂಪಿ ತುರ್ತು ತಂಡಗಳೂ ಸ್ಥಳಕ್ಕೆ ಬಂದಲ್ಲಿ ವೇಗವಾಗಿ ಪರಿಹಾರ ಕಾರ್ಯಾಚರಣೆ ನಡೆಸಬಹುದಾಗಿದೆ. ಇದರಿಂದ ಸಮಸ್ಯೆಗಳ ಪರಿಹಾರದ ಜತೆಗೆ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಸಂಚಾರ ವಿಭಾಗ ಪೊಲೀಸರು ಹೇಳುತ್ತಾರೆ.

Follow Us:
Download App:
  • android
  • ios