ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವಿಜಯ್ ರಾಜ್ ಗೌಡ ಎಂಬಾತ, ತಾನು ಕೋಟ್ಯಾಧಿಪತಿ ಉದ್ಯಮಿ ಎಂದು ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 1.53 ಕೋಟಿ ರೂ. ವಂಚಿಸಿದ್ದಾನೆ. ತನ್ನ ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ, ಇಡಿ ಕೇಸ್ ನೆಪದಲ್ಲಿ ಹಣ ಪಡೆದಿದ್ದ ಈತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜ.19): ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್ (Bengaluru Techie) ಯುವತಿಗೆ ಬರೋಬ್ಬರಿ 1.53 ಕೋಟಿ ರೂಪಾಯಿ ವಂಚಿಸಿದ ಕಿರಾತಕನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ವಿಜಯ್ ರಾಜ್ ಗೌಡ (Vijay Raj Gowda) ಬಂಧಿತ ಆರೋಪಿ. ಈ ವಂಚನೆ ಜಾಲದಲ್ಲಿ ಆರೋಪಿಯ ತಂದೆ ಬೋರೆಗೌಡ ಮತ್ತು ಪತ್ನಿ ಸೌಮ್ಯ ಕೂಡ ಭಾಗಿಯಾಗಿದ್ದು, ಇಡೀ ಕುಟುಂಬವೇ ಸೇರಿ ಯುವತಿಗೆ ನಾಮ ಹಾಕಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಮ್ಯಾಟ್ರಿಮೋನಿಯಲ್ಲಿ ಶುರುವಾದ ಗಾಳ

ವೈಟ್‌ಫೀಲ್ಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ಮೂಲಕ ವಿಜಯ್ ರಾಜ್ ಗೌಡ ಪರಿಚಯವಾಗಿದ್ದ. ತಾನು ದೊಡ್ಡ ಉದ್ಯಮಿ, ತನಗೆ 715 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದ. ಅಷ್ಟೇ ಅಲ್ಲದೆ, ತನ್ನ ತಂದೆ ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿ ವಿಶ್ವಾಸ ಗಳಿಸಿದ್ದ.

ಹೆಂಡತಿಯನ್ನೇ 'ಅಕ್ಕ' ಎಂದ ಪಾಪಿ!

ವಂಚನೆಯ ಸಂಚು ಎಷ್ಟು ಭೀಕರವಾಗಿತ್ತೆಂದರೆ, ವಿಜಯ್ ರಾಜ್ ಗೌಡ ತನಗೆ ಈಗಾಗಲೇ ಮದುವೆಯಾಗಿ ಮಗು ಇದ್ದರೂ ಸಹ, ತನ್ನ ಪತ್ನಿ ಸೌಮ್ಯಳನ್ನು (Vijay Raj Gowda wife Sowmya) ಟೆಕ್ಕಿ ಯುವತಿಗೆ 'ಅಕ್ಕ' ಎಂದು ಪರಿಚಯಿಸಿದ್ದ. ಕೆಂಗೇರಿ ಬಳಿ ಯುವತಿಯನ್ನು ಕರೆಸಿಕೊಂಡಿದ್ದ ಆರೋಪಿ, ತನ್ನ ಪತ್ನಿ ಮತ್ತು ತಂದೆಯನ್ನೇ ಭೇಟಿ ಮಾಡಿಸಿ ಮದುವೆಯ (Marriage Fraud) ನಾಟಕವಾಡಿದ್ದ. 'ನಿಮ್ಮ ಹಣಕ್ಕೆ ನಾನೇ ಗ್ಯಾರೆಂಟಿ' ಎಂದು ವಂಚಕನ ತಂದೆ ಬೋರೆಗೌಡ ಕೂಡ ಯುವತಿಯನ್ನು ನಂಬಿಸಿದ್ದರು.

ಇಡಿ (ED) ಕೇಸ್ ಹೆಸರಲ್ಲಿ ಕೋಟಿ ಕೋಟಿ ಲೂಟಿ

ಪರಿಚಯ ಬೆಳೆದಂತೆಲ್ಲಾ ಆರೋಪಿ ವಿಜಯ್ ರಾಜ್ ತನ್ನ ಅಸಲಿ ಆಟ ಶುರು ಮಾಡಿದ್ದ. 'ನನ್ನ ಆಸ್ತಿ ವಿಷಯವಾಗಿ ಜಾರಿ ನಿರ್ದೇಶನಾಲಯ (ED) ಕೇಸ್ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ' ಎಂದು ನಕಲಿ ಕೋರ್ಟ್ ದಾಖಲೆಗಳನ್ನು (Court Fake Documents) ತೋರಿಸಿದ್ದನು. ತುರ್ತು ಹಣದ (Emergency Money) ಅವಶ್ಯಕತೆ ಇದೆ ಎಂದು ಮೊದಲು 15 ಸಾವಿರ ರೂಪಾಯಿ ಪಡೆದಿದ್ದ ಈತ, ನಂತರ ಯುವತಿ ಹೆಸರಿನಲ್ಲಿ ಲೋನ್ ಮಾಡಿಸಿ ಹಾಗೂ ಆಕೆಯ ಸ್ನೇಹಿತರಿಂದಲೂ ಬ್ಯುಸಿನೆಸ್ ಹೆಸರಿನಲ್ಲಿ ಹಂತಹಂತವಾಗಿ ಒಟ್ಟು 1.75 ಕೋಟಿ ರೂಪಾಯಿ ಪೀಕಿದ್ದ. ಇದರಲ್ಲಿ 22 ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿದ್ದ ಎನ್ನಲಾಗಿದೆ. ಇದಾದ ಬಳಿಕ ಸ್ವಲ್ಪ ದಿನ ನಿಮ್ಮ ಹಣವನ್ನು ಕೊಡುತ್ತೇನೆ ಎಂದು ಯುವತಿಗೆ ನಂಬಿಸಿದ್ದನು. ಜೊತೆಗೆ, ಮತ್ತಷ್ಟು ಹಣಕ್ಕೂ ಬೇಡಿಕೆ ಇಟ್ಟಿದ್ದನು. ಆದರೆ, ವಂಚನೆಯ ಅನುಮಾನ ಬಂದ ನಂತರ ಯುವತಿ ಹಣ ಕೊಟ್ಟಿರಲಿಲ್ಲ.

ಸೀಕ್ರೆಟ್ ಬಯಲಾಗಿದ್ದು ಹೇಗೆ?

ತನ್ನ ಬಾಕಿ ಹಣವನ್ನು ವಾಪಸ್ ಕೇಳಿದಾಗ ಆರೋಪಿ ಬೆದರಿಕೆ ಹಾಕಲು ಶುರು ಮಾಡಿದ್ದಾನೆ. ಅನುಮಾನಗೊಂಡ ಯುವತಿ ಈತನ ಹಿನ್ನೆಲೆ ತಪಾಸಣೆ ಮಾಡಿದಾಗ, ಈತನಿಗೆ ಈಗಾಗಲೇ ಮದುವೆಯಾಗಿರುವುದು ಮತ್ತು ಆತ ಪರಿಚಯಿಸಿದ್ದ 'ಅಕ್ಕ' ಬೇರೆ ಯಾರೂ ಅಲ್ಲ, ಈತನ ಪತ್ನಿಯೇ ಎಂಬ ಅಸಲಿ ವಿಷಯ ಬಯಲಾಗಿದೆ. ಕೂಡಲೇ ಯುವತಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ (Bengaluru whitefield Police Station) ದೂರು ದಾಖಲಿಸಿದ್ದು, ನಂತರ ಪ್ರಕರಣ ಕೆಂಗೇರಿಗೆ (Kengeri Police Station) ವರ್ಗಾವಣೆಯಾಗಿದೆ. ಸದ್ಯ ಕೆಂಗೇರಿ ಪೊಲೀಸರು ವಿಜಯ್ ರಾಜ್ ಗೌಡನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಈತನ ತಂದೆ ಮತ್ತು ಪತ್ನಿಗಾಗಿ ಹುಡುಕಾಟ ಮುಂದುವರಿದಿದೆ.