ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ವಿಜಯ್ ರಾಜ್ ಗೌಡ ಎಂಬ ವಂಚಕ, ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬರಿಗೆ ನಕಲಿ ದಾಖಲೆಗಳನ್ನು ತೋರಿಸಿ ನಂಬಿಸಿದ್ದಾನೆ. ತನ್ನ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿ, ಒಂದೂವರೆ ವರ್ಷದಲ್ಲಿ ಹಂತ ಹಂತವಾಗಿ ಬರೋಬ್ಬರಿ 1.56 ಕೋಟಿ ರೂಪಾಯಿ ದೋಚಿದ್ದಾನೆ.

ಬೆಂಗಳೂರು (ಜ.18) : 'ನಾನು ಮ್ಯಾಟ್ರಿಮೋನಿಯಲ್ಲಿ ಒಳ್ಳೆಯ ಸಂಬಂಧ ಹುಡುಕುತ್ತಿದ್ದೆ, ಆದರೆ ನನಗೆ ಸಿಕ್ಕಿದ್ದು ಮನುಷ್ಯ ರೂಪದ ಮೃಗ. ಅವನು ಮಾಡಿರೋದು ಕೇವಲ ಹಣದ ವಂಚನೆಯಲ್ಲ, ನನ್ನ ಒಂದೂವರೆ ವರ್ಷದ ಬದುಕು ಮತ್ತು ನಂಬಿಕೆಯನ್ನು ಕೊಲೆ ಮಾಡಿದ್ದಾನೆ' ಎಂದು ವಂಚಕ ವಿಜಯ್ ರಾಜ್ ಗೌಡನಿಂದ ಮೋಸ ಹೋದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯ ಆಕ್ರೋಶದ ನುಡಿಗಳು.

ರಿಜೆಕ್ಟ್ ಮಾಡಿದ್ದರೂ ಬಿಡದೆ ಬೆನ್ನತ್ತಿದ್ದ ವಂಚಕ

ಯುವತಿ ನೀಡಿದ ಹೇಳಿಕೆಯಂತೆ, ಒಕ್ಕಲಿಗ ಮ್ಯಾಟ್ರಿಮೋನಿಯಲ್ಲಿ ಇವರ ಪ್ರೊಫೈಲ್ ನೋಡಿ ವಿಜಯ್ ಪರಿಚಯ ಮಾಡಿಕೊಂಡಿದ್ದ. 'ಆರಂಭದಲ್ಲಿ ಆತ ತೋರಿಸಿದ ಹೈ ಪ್ರೊಫೈಲ್ ಮತ್ತು ಅದ್ದೂರಿ ಜೀವನ ಕಂಡು, ಇವನು ನನಗೆ ಬೇಡ ಎಂದು ನಾನು ರಿಜೆಕ್ಟ್ ಮಾಡಿದ್ದೆ. ಆದರೆ ಅವನೇ ಮತ್ತೆ ಸಂಪರ್ಕಿಸಿ, ಯಾಕೆ ರಿಜೆಕ್ಟ್ ಮಾಡುತ್ತೀರಿ? ಮೊದಲು ನನ್ನ ಬಗ್ಗೆ ತಿಳಿದುಕೊಳ್ಳಿ ಎಂದು ನಂಬಿಸಿದ' ಎಂದು ಯುವತಿ ಹೇಳಿದ್ದಾರೆ.

ನಕಲಿ ದಾಖಲೆಗಳ ಮಾಯಾಜಾಲ

ತನ್ನ ಮೇಲೆ ಇಡಿ (ED) ಕೇಸ್‌ಗಳಿವೆ, ಕೋರ್ಟ್‌ನಲ್ಲಿ ಅಕೌಂಟ್ ಫ್ರೀಜ್ ಆಗಿದೆ ಎಂದು ನಂಬಿಸಲು ಅವನು ನೀಡಿದ ದಾಖಲೆಗಳು ಎಷ್ಟು ನಿಖರವಾಗಿದ್ದವೆಂದರೆ, ಯುವತಿ ವಕೀಲರ ಮೂಲಕ ಪರಿಶೀಲಿಸಿದರೂ ಅವು ಅಸಲಿ ಎಂದೇ ತೋರಿದ್ದವು. 'ನಾನು ವಕೀಲರ ಬಳಿ ತೋರಿಸಿದ್ದೆ, ಎಲ್ಲವೂ ಒರಿಜಿನಲ್ ತರಹವೇ ಇತ್ತು. ಆದರೆ ಈಗ ಕೇಸ್ ಆದ ಮೇಲೆ ಗೊತ್ತಾಗುತ್ತಿದೆ ಅವೆಲ್ಲವೂ ಪೇಕ್ ಅಂತ' ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ.

ಅಕ್ಕ ಅಂತ ಕರೆಸಿಕೊಂಡಿದ್ದ ಹೆಂಡತಿ

ವಂಚನೆಯ ಪರಾಕಾಷ್ಠೆ ಎಂದರೆ, ವಿಜಯ್ ತನ್ನ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ. ತನ್ನ ತಂದೆಗೆ ಕಾಯಿಲೆ ಇದೆ ಎಂದು ಎಮೋಷನಲ್ ಆಗಿ ಮಾತನಾಡುತ್ತಿದ್ದ. 'ಊಟಕ್ಕೂ ದುಡ್ಡಿಲ್ಲ ಎಂಬ ಹಂತಕ್ಕೆ ನಾಟಕವಾಡಿ ನನ್ನಿಂದ ಹಣ ಪಡೆದಿದ್ದಾನೆ. ಹೀಗೆ ಒಂದೂವರೆ ವರ್ಷದಿಂದ ಹಂತಹಂತವಾಗಿ ಒಟ್ಟು 1.56 ಕೋಟಿ ರೂಪಾಯಿ ದೋಚಿದ್ದಾನೆ' ಎಂದು ಯುವತಿ ವಿವರಿಸಿದ್ದಾರೆ.

ಕಳೆದುಹೋದ ಅಮೂಲ್ಯ ಸಮಯ

ಹಣ ಹೋಗಿದ್ದಕ್ಕಿಂತ ಹೆಚ್ಚಾಗಿ ನನ್ನ ಸಮಯ ವ್ಯರ್ಥವಾಗಿದೆ. ನಾನು ಬೇರೆ ಯಾರನ್ನಾದರೂ ಮದುವೆಯಾಗಿದ್ದರೆ ಇಷ್ಟೊತ್ತಿಗೆ ನನಗೆ ಮಗು ಇರುತ್ತಿತ್ತು. ಮದುವೆಯಾಗಿ ಮಗು ಇದ್ದರೂ ನನಗೂ ಮದುವೆ ಆಮಿಷ ಒಡ್ಡಿ ಮೋಸ ಮಾಡಿದ್ದಾನೆ. ಈ ಇಡೀ ಕುಟುಂಬವೇ ಸೇರಿ ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಾನಿ ಮಾಡಿದೆ' ಎಂದು ಹೇಳಿದ್ದಾರೆ. ಪ್ರಸ್ತುತ ಯುವತಿ ನೀಡಿದ ಎಲ್ಲಾ ನಕಲಿ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.