- Home
- Karnataka Districts
- Lakkundi: ನಾಲ್ಕನೇ ದಿನದ ಉತ್ಖನನ ಕಾರ್ಯಕ್ಕೆ ಎದುರಾಯ್ತು ಮತ್ತೊಂದು ವಿಘ್ನ; ಆಯುಧ ಮಾದರಿಯ ಕಲ್ಲು ಪತ್ತೆ
Lakkundi: ನಾಲ್ಕನೇ ದಿನದ ಉತ್ಖನನ ಕಾರ್ಯಕ್ಕೆ ಎದುರಾಯ್ತು ಮತ್ತೊಂದು ವಿಘ್ನ; ಆಯುಧ ಮಾದರಿಯ ಕಲ್ಲು ಪತ್ತೆ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಕಾರ್ಮಿಕರ ಸಂಬಳ ಹೆಚ್ಚಳದ ಬೇಡಿಕೆಯಿಂದಾಗಿ ವಿಳಂಬವಾಯಿತು. ಈ ವಿಘ್ನದ ನಡುವೆಯೂ, ಶಿಲಾಯುಗದಲ್ಲಿ ಬಳಸುತ್ತಿದ್ದ ಆಯುಧವನ್ನು ಹೋಲುವ ಕಲ್ಲಿನ ವಸ್ತುವೊಂದು ಪತ್ತೆಯಾಗಿದ್ದು, ತಜ್ಞರು ಅದನ್ನು ವಶಕ್ಕೆ ಪಡೆದಿದ್ದಾರೆ.

ಲಕ್ಕುಂಡಿಯಲ್ಲಿ 4ನೇ ದಿನ ಉತ್ಖನನ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿಂದು ನಡೆಯಬೇಕಿದ್ದ ಉತ್ಖನನ ಕಾರ್ಯಕ್ಕೆ ವಿಘ್ನವೊಂದು ಎದುರಾಗಿದೆ. ಮೂರು ದಿನಗಳಿಂದ ಉತ್ಖನನ ಕಾರ್ಯ ನಡೆಸುತ್ತಿರುವ ಸ್ಥಳೀಯ ಕಾರ್ಮಿಕರು ಸಂಬಳ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಇಂದು ಕಾರ್ಮಿಕರು ಕೆಲಸಕ್ಕೆ ಸೂಚಿಸಿದ ಸಮಯಕ್ಕಿಂತ ತಡವಾಗಿ ಆಗಮಿಸಿದ್ದಾರೆ.
ಉತ್ಖನನ ಕಾರ್ಯ ವಿಳಂಬ
ಕೆಲಸ ಆರಂಭಕ್ಕೂ ಮುನ್ನವೇ ತಮಗೆ ನೀಡಲಾಗುತ್ತಿರುವ ಕೂಲಿ ಮೊತ್ತವನ್ನು ಹೆಚ್ಚಳ ಮಾಡಬೇಕೆಂದು ಕಾರ್ಮಿಕರುಮ ಆಗ್ರಹಿಸಿದ್ದಾರೆ. ಸದ್ಯ ಉತ್ಖನನಕ್ಕೆ ಬರುವ ಮಹಿಳಾ, ಪುರುಷ ಕಾರ್ಮಿಕರಿಗೆ 374 ರೂಪಾಯಿ ಕೂಲಿ ನೀಡಲಾಗುತ್ತಿದೆ. ಈ ಮೊತ್ತವನ್ನು 600 ರೂ.ಗಳಿಗೆ ಹೆಚ್ಚಿಸಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ. ಕಾರ್ಮಿಕರ ಬೇಡಿಕೆ ಹಿನ್ನೆಲೆ ಬೆಳಗ್ಗೆ 8 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯ 8:40 ಕ್ಕೆ ಆರಂಭವಾಗಿದೆ.
ಮೇಲ್ವಿಚಾರಕರ ಬಳಿ ಬೇಡಿಕೆ
ಉತ್ಖನನ ಕಾರ್ಯಕ್ಕೆ ಆಗಮಿಸಿದ ಕಾರ್ಮಿಕರು ಮೇಲ್ವಿಚಾರಕರ ಬಳಿ ಬೇಡಿಕೆ ಸಲ್ಲಿಸಿದ್ದಾರೆ. ನಂತರ ಮೇಲ್ವಿಚಾರಕರ ಭರವಸೆ ಹಿನ್ನೆಲೆ ಕೆಲಸ ಆರಂಭಿಸಿದ್ದಾರೆ. ದಿನಕ್ಕೆ 8 ಗಂಟೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದ್ರೆ ಕೂಲಿ ಮಾತ್ರ ಕಡಿಮೆ ನೀಡಲಾಗುತ್ತದೆ. ಹಾಗಾಗಿ ನನಗೆ 600 ರೂಪಾಯಿ ಕೂಲಿ ನೀಡಬೇಕೆಂದು ಕಾರ್ಮಿಕರು ಹೇಳಿದ್ದಾರೆ .
ಆಯುಧ ಮಾದರಿಯ ಕಲ್ಲು ಪತ್ತೆ
ಉತ್ಖನನ ಜಾಗದಲ್ಲಿ ಶಿಲಾಯುಗದಲ್ಲಿ ಬಳಕೆಯಾಗುತ್ತಿದ್ದ ಆಯುಧ ಮಾದರಿಯ ವಸ್ತು ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು ಒಂದು ಭಾಗ ಮೊನಚಾಗಿರುವ ಆಯುಧ. ಕಲ್ಲಿನ ಆಯುಧ ಪತ್ತೆಯಾಗುತ್ತಿದ್ದಂತೆ ಉತ್ಖನನ ಮೇಲ್ವಿಚಾರಕರು ವಶಕ್ಕೆ ಪಡೆದುಕೊಂಡು, ಟ್ಯಾಗ್ ಅಳವಡಿಸಿದ್ದಾರೆ.
ಎರಡು ತಿಂಗಳು ಉತ್ಖನನ
ಮುಂದಿನ ಎರಡು ತಿಂಗಳ ಕಾಲ ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಒಟ್ಟು 38 ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕಾರ್ಮಿಕರಿಗೆ ಸರ್ಕಾರದ ಮಾರ್ಗಸೂಚಿಯಂತೆ ದಿನಕ್ಕೆ ₹374 ಕೂಲಿ ಕೂಡಾ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಐತಿಹಾಸಿಕ ಲಕ್ಕುಂಡಿಗೆ ಸರ್ಕಾರದಿಂದ ವಿಶೇಷ ರಕ್ಷಾಕವಚ: ರಿತ್ತಿ ಕುಟುಂಬಕ್ಕೆ ಗುಡ್‌ನ್ಯೂಸ್

