ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ನಿ ಭುವನೇಶ್ವರಿಯನ್ನು ಗುಂಡಿಕ್ಕಿ ಕೊಂದ ಪತಿ ಬಾಲಮುರುಗನ್, ಪೊಲೀಸರ ವಿಚಾರಣೆಯಲ್ಲಿ 3ನೇ ವ್ಯಕ್ತಿಯ ಹಸ್ತಕ್ಷೇಪ ಇರುವುದನ್ನೂ ಬಾಯಿ ಬಿಟ್ಟಿದ್ದಾನೆ. ಈ ಕೊಲೆ ಕೇಸ್ ಗಂಡ ಹೆಂಡತಿಗೆ ಮಾತ್ರ ಸೀಮಿತವಾಗಿದೆ ಎಂದುಕೊಂಡಿದ್ದ ಪೊಲೀಸರಿಗೆ ಇದು ಶಾಕ್ ಆಗಿದೆ.
ಬೆಂಗಳೂರು (ಜ.10): ಸಿಲಿಕಾನ್ ಸಿಟಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಪತ್ನಿಯನ್ನು ಪಿಸ್ತೂಲ್‌ನಿಂದ ಶೂಟ್ ಮಾಡಿ ಕೊಂದಿದ್ದ ಪ್ರಕರಣದಲ್ಲಿ ಈಗ ಆಘಾತಕಾರಿ ಸತ್ಯಾಂಶಗಳು ಹೊರಬಂದಿವೆ. ಪತ್ನಿಯನ್ನು ಕೊಲ್ಲಲು ಪತಿ ಬಾಲಮುರುಗನ್ ಎಂಬಾತ ತಮಿಳುನಾಡಿನ ಪುಡಿರೌಡಿಯೊಬ್ಬನಿಗೆ ಲಕ್ಷ ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎಂಬ ವಿಚಾರ ಪೊಲೀಸ್ ವಿಚಾರಣೆಯಲ್ಲಿ ಬಯಲಾಗಿದೆ. ಈ ಸಂಬಂಧ ಪೊಲೀಸರು ತಮಿಳುನಾಡಿನ ಸೇಲಂ ಮೂಲದ ಮೌಳೇಶ್ ಎಂಬ ರೌಡಿ ಶೀಟರ್‌ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಕಳೆದ ಡಿಸೆಂಬರ್ 23 ರ ಸಂಜೆ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಮುರುಗನ್ ತನ್ನ ಪತ್ನಿ ಭುವನೇಶ್ವರಿ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಆರೋಪಿ ಬಾಲಮುರುಗನ್ ನೀಡಿದ ಹೇಳಿಕೆ ಬೆಚ್ಚಿಬೀಳಿಸುವಂತಿದೆ. ಪತ್ನಿಯನ್ನು ಮುಗಿಸಲು ಈತ ಮೊದಲೇ ವ್ಯವಸ್ಥಿತ ಸ್ಕೆಚ್ ಹಾಕಿದ್ದ ಎಂಬುದು ಸಾಬೀತಾಗಿದೆ.
ಸೇಲಂ ರೌಡಿ ಜೊತೆ ಡೀಲ್
ಕೊಲೆಗೂ ಮುನ್ನ ತಮಿಳುನಾಡಿನ ಸೇಲಂಗೆ ಹೋಗಿದ್ದ ಬಾಲಮುರುಗನ್, ಅಲ್ಲಿನ ತನ್ನ ಸಂಬಂಧಿಕರ ಹೋಟೆಲ್‌ನಲ್ಲಿ ಪುಡಿರೌಡಿ ಮೌಳೇಶ್‌ನನ್ನು ಭೇಟಿಯಾಗಿದ್ದ. ಪತ್ನಿಯನ್ನು ಕೊಲ್ಲಲು ಲಕ್ಷಾಂತರ ರೂಪಾಯಿ ಆಫರ್ ನೀಡಿದ್ದಲ್ಲದೆ, ಆತನ ಕೈಗೆ ಪಿಸ್ತೂಲೊಂದನ್ನು ಕೂಡ ನೀಡಿದ್ದ ಎನ್ನಲಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗದಲ್ಲಿ ಭುವನೇಶ್ವರಿಯನ್ನು ಮುಗಿಸಬೇಕು ಎಂದು ಇಬ್ಬರು ಪ್ಲಾನ್ ಮಾಡಿದ್ದರು.
ರೆಕ್ಕಿ ಮಾಡಿದ್ದ ಸುಪಾರಿ ಕಿಲ್ಲರ್
ಬಾಲಮುರುಗನ್ ಸೂಚನೆಯಂತೆ ಮೌಳೇಶ್ ಬೆಂಗಳೂರಿಗೆ ಬಂದು, ಭುವನೇಶ್ವರಿ ಕೆಲಸ ಮಾಡುತ್ತಿದ್ದ ಸ್ಥಳ ಮತ್ತು ಆಕೆ ಓಡಾಡುವ ರಸ್ತೆಗಳ ಬಗ್ಗೆ ಹಲವು ದಿನಗಳ ಕಾಲ ರೆಕ್ಕಿ ನಡೆಸಿದ್ದ. ಆದರೆ, ಕೊಲೆ ಮಾಡಲು ಇನ್ನಷ್ಟು ಸಮಯ ಮತ್ತು ಹಣ ಬೇಕೆಂದು ಮೌಳೇಶ್ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಬಾಲಮುರುಗನ್, ‘ಬೇರೆಯವರಿಗೆ ಹಣ ಕೊಟ್ಟು ಕಾಯುವ ಬದಲು ನಾನೇ ಕೆಲಸ ಮುಗಿಸುತ್ತೇನೆ’ ಎಂದು ನಿರ್ಧರಿಸಿ ತಾನೇ ಪಿಸ್ತೂಲ್ ಹಿಡಿದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ.
ಹತ್ಯೆಯ ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದ ಬಾಲಮುರುಗನ್, ವಿಚಾರಣೆ ವೇಳೆ ಸುಪಾರಿ ನೀಡಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಸದ್ಯ ಮಾಗಡಿ ರೋಡ್ ಪೊಲೀಸರು ಮೌಳೇಶ್ ಮತ್ತು ಬಾಲಮುರುಗನ್ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.


