ಸಬ್‌ಅರ್ಬನ್‌ ರೈಲ್ವೆ ಯೋಜನೆಯ 2ನೇ ಕಾರಿಡಾರ್‌ಗಾಗಿ ಹೆಬ್ಬಾಳದಿಂದ ಪೈಲ್‌ಟೆಸ್ಟ್‌ ಆರಂಭ, ಅಂದಾಜು 25.1 ಕಿಮೀ ಉದ್ದದ ಕಾರಿಡಾರ್‌, 2.1 ಮೀಟರ್‌ ವ್ಯಾಸದ ಸುತ್ತಳತೆಯಲ್ಲಿ ನೆಲ ಕೊರೆದು ತಪಾಸಣೆ, 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣ ಬಳಿಕ ಪಿಲ್ಲರ್‌ ಅಳವಡಿಕೆ ಕಾರ್ಯ. 

ಮಯೂರ್‌ ಹೆಗಡೆ

ಬೆಂಗಳೂರು(ಮಾ.08): ಬಹು ನಿರೀಕ್ಷಿತ ಬೆಂಗಳೂರು ಉಪ ನಗರ ರೈಲು ಯೋಜನೆಯ 2ನೇ ಕಾರಿಡಾರ್‌ ಮಲ್ಲಿಗೆಯ ಎಲಿವೇಟೆಡ್‌ ಮಾರ್ಗದ ಪಿಲ್ಲರ್‌ ನಿರ್ಮಾಣ ಕಾಮಗಾರಿ ಶೀಘ್ರ ಶುರುವಾಗಲಿದೆ. ಇದಕ್ಕಾಗಿ ಮಂಗಳವಾರದಿಂದ ಹೆಬ್ಬಾಳದಲ್ಲಿ ಪೈಲ್‌ಟೆಸ್ಟ್‌ (ಪಿಲ್ಲರ್‌ ಅಡಿಪಾಯ ಭದ್ರಪಡಿಸುವ ಕಾಂಕ್ರಿಟ್‌ ಸ್ತಂಭಾಕೃತಿ) ಪ್ರಾರಂಭವಾಗಿದೆ.

ಬೈಯಪ್ಪನಹಳ್ಳಿಯಿಂದ ಯಶವಂತಪುರ, ಹೆಬ್ಬಾಳ, ಬೈಯಪ್ಪನಹಳ್ಳಿ, ನಾಗವಾರ ಮೂಲಕ ಚಿಕ್ಕಬಾಣಾವರದವರೆಗಿನ ಒಟ್ಟಾರೆ 25.1ಕಿಮೀ ಉದ್ದದ ಮಲ್ಲಿಗೆ ಕಾರಿಡಾರ್‌ ರೂಪುಗೊಳ್ಳಲಿದೆ. ಈ ಮಾರ್ಗದಲ್ಲಿ ನಡುವೆ 8 ಕಿಮೀ ಉದ್ದ ಮೇಲ್ಸೇತುವೆ ಹಾದು ಹೋಗಲಿದ್ದು, ಸುಮಾರು 250 ಪಿಲ್ಲರ್‌ಗಳು ನಿರ್ಮಾಣವಾಗಲಿವೆ.

Suburban railway: ಉಪನಗರ ರೈಲ್ವೆ ಯೋಜನೆ: ಕನಕ ಮಾರ್ಗಕ್ಕೆ ಟೆಂಡರ್‌

ಇದಕ್ಕಾಗಿ ಈಗಾಗಲೇ ಮೊದಲ ಹಂತದ ಮಣ್ಣು ಪರೀಕ್ಷೆ ಪೂರ್ಣಗೊಂಡಿದ್ದು, ನೂರು ಮೀಟರ್‌ ಭೂಮಿಯಾಳದಲ್ಲಿ ಪದರಗಳು ಯಾವ ಸ್ವರೂಪದಲ್ಲಿದೆ ಎಂಬುದನ್ನು ತಿಳಿಯಲಾಗಿದೆ. ಇದೀಗ ಎರಡನೇ ಹಂತದಲ್ಲಿ ಎಲ್‌ ಆ್ಯಂಡ್‌ ಟಿ ಸಂಸ್ಥೆಯಿಂದ ಪೈಲ್‌ಟೆಸ್ಟ್‌ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಿಲ್ಲರ್‌ ನಿರ್ಮಾಣ ಆರಂಭವಾಗಲಿದೆ ಎಂದು ಕರ್ನಾಟಕ ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಂಪನಿ (ಕೆÜ-ರೈಡ್‌) ಅಧಿಕಾರಿಗಳು ತಿಳಿಸಿದ್ದಾರೆ.

ಹೆಬ್ಬಾಳ, ಯಶವಂತಪುರ, ಬೆನ್ನಿಗಾನಹಳ್ಳಿ, ಲೊಟ್ಟೆಗೊಲ್ಲನಹಳ್ಳಿ ಜಾಲಹಳ್ಳಿಗಳಲ್ಲಿ ಮೇಲ್ಸೇತುವೆಯಿಂದ ಸಬ್‌ ಅರ್ಬನ್‌ ರೈಲು ಹಾದು ಹೋಗಲಿದೆ. ಹೆಬ್ಬಾಳದಿಂದ ಜಾಲಹಳ್ಳಿವರೆಗೆ ಪ್ರತಿ 1ಕಿ.ಮೀ. ಪೈಲ್‌ಟೆಸ್ಟ್‌ ಆರಂಭ ವಾಗಿದೆ. ಪಿಲ್ಲರ್‌ ಭದ್ರಪಡಿಸಲು ಭೂಮಿಯಾಳದಲ್ಲಿ ನಾಲ್ಕು ಕಡೆಯ ಪೈಲ್‌ ನಿರ್ಮಾಣಕ್ಕೆ ಎಷ್ಟುಆಳಕ್ಕೆ ಗುಂಡಿ ತೆಗೆಯಬೇಕು? ಮೇಲಿನ ಭಾರವನ್ನು ತಡೆದುಕೊಳ್ಳುವಂತೆ ಅಡಿಪಾಯ ಹೇಗಿರಬೇಕು? ಎಂಬುದನ್ನು ವಿನ್ಯಾಸ ರೂಪಿಸಿಕೊಳ್ಳಲು ಪರೀಕ್ಷೆ ನಡೆಸಲಾಗುತ್ತಿದೆ. 2.1 ಮೀ ವ್ಯಾಸದ ಸುತ್ತಳತೆಯಲ್ಲಿ ನೆಲ ಕೊರೆದು ಈ ತಪಾಸಣೆ ಮಾಡಿಕೊಳ್ಳಲಾಗುತ್ತಿದೆ. ಸುಮಾರು 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಳಿಕ ಇತರೆ ತಾಂತ್ರಿಕ ಪ್ರಕ್ರಿಯೆ ನಡೆಸಿ ಪಿಲ್ಲರ್‌ ಅಳವಡಿಕೆ ಮುಂದಾಗಲಿದ್ದೇವೆ ಎಂದು ಕೆ-ರೈಡ್‌ ಮಾಹಿತಿ ನೀಡಿದೆ.

53 ಕಿರು ಸೇತುವೆ

ಉಳಿದಂತೆ ಮಲ್ಲಿಗೆ ಕಾರಿಡಾರ್‌ನ 17 ಕಿ.ಮೀ. ಮಾರ್ಗದಲ್ಲಿ ಸೈಡ್‌ವಾಲ್‌, ಹಳಿ ನಿರ್ಮಾಣದ ಕಾಮಗಾರಿಯೂ ಪ್ರಾರಂಭವಾಗಲಿದೆ. ಇಲ್ಲಿ 53 ಕಿರು ಸೇತುವೆ, 1 ದೊಡ್ಡ ಸೇತುವೆ ನಿರ್ಮಾಣ ವಾಗಲಿದ್ದು, ಅದರ ಪ್ರಕ್ರಿಯೆಯೂ ನಡೆಯುತ್ತಿದೆ. 2025ರ ಅಂತ್ಯದ ವೇಳೆಗೆ ಈ ಮಾರ್ಗ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಪ್ರತಿನಿತ್ಯ 2 ಲಕ್ಷ ಜನ ಪ್ರಯೋಜನ ಪಡೆದುಕೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು ಸಬ್‌ ಅರ್ಬನ್‌ ರೈಲಿಗೆ ಅನಂತಕುಮಾರ್‌ ಹೆಸರು: ಸಚಿವ ಸೋಮಣ್ಣ

ಮಲ್ಲಿಗೆ ಮಾರ್ಗದ ನಿಲ್ದಾಣಗಳು

ಜಾಲಹಳ್ಳಿಯಲ್ಲಿ ಡಿಪೋ ನಿರ್ಮಾಣವಾಗಲಿದೆ. ಚಿಕ್ಕಬಾಣಾವರ, ಮ್ಯಾದರಹಳ್ಳಿ, ಶೆಟ್ಟಿಹಳ್ಳಿ, ಯಶವಂತಪುರ (ಇಂಟರ್‌ ಚೇಂಜ್‌), ಲೊಟ್ಟೆಗೊಲ್ಲನಹಳ್ಳಿ, ಹೆಬ್ಬಾಳ, ಕನಕನಗರ, ನಾಗವಾರ, ಕಾವೇರಿ ನಗರ, ಬಾಣಸವಾಡಿ, ಸೇವಾ ನಗರ, ಕಸ್ತೂರಿ ನಗರ, ಬೈಯಪ್ಪನಹಳ್ಳಿಯಲ್ಲಿ ನಿಲ್ದಾಣಗಳು ತಲೆ ಎತ್ತಲಿವೆ. ಇದರ ಜೊತೆಗೆ ಆರು ಎಲಿವೇಟೆಡ್‌ ನಿಲ್ದಾಣಗಳು ನಿರ್ಮಾಣ ಆಗಲಿವೆ.

ಉಳಿದ ಭೂಸ್ವಾಧೀನ ಶೀಘ್ರ

ಒಟ್ಟಾರೆ ಸಬ್‌ಅರ್ಬನ್‌ ರೈಲ್ವೆಗಾಗಿ ಕಳೆದ ಜನವರಿಯಲ್ಲಿ ನೈಋುತ್ಯ ರೈಲ್ವೆ ಇಲಾಖೆ 157 ಎಕರೆಯನ್ನು ಕೆ-ರೈಡ್‌ಗೆ ಹಸ್ತಾಂತರಿಸಿದೆ. ಎಕರೆಗೆ 1ರು.ನಂತೆ 35 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಖಾಸಗಿ ಜಾಗ 5.11 ಎಕರೆಯನ್ನು ಕೆಐಎಡಿಬಿ ಭೂಸ್ವಾದೀನ ಪಡಿಸಿಕೊಂಡು ನೀಡಿದೆ. ಇನ್ನು, ರಕ್ಷಣಾ ಇಲಾಖೆಗೆ ಸೇರಿರುವ ಒಂದಿಷ್ಟುಎಕರೆ ಹಸ್ತಾಂತರ ಆಗಬೇಕಿದೆ. ಇದರ ಪ್ರಕ್ರಿಯೂ ಶೀಘ್ರವೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ 15,767 ಕೋಟಿ ಮೊತ್ತದ ಕಾಮಗಾರಿಯಲ್ಲಿ ಗುತ್ತಿಗೆ ಪಡೆದಿರುವ ಎಲ್‌ ಆ್ಯಂಡ್‌ ಟಿ ಕಂಪನಿಗೆ ಈಗಾಗಲೇ ಕರ್ನಾಟಕ ರೈಲ್ವೆ ಇನ್ಫ್ರಾಸ್ಟ್ರಕ್ಚರ್‌ ಡೆವಲೆಪ್‌ಮೆಂಟ್‌ ಕಂಪನಿ (ಕೆ-ರೈಡ್‌) . 859 ಕೋಟಿ ಎಂದು ಕೆ-ರೈಡ್‌ ಅಧಿಕಾರಿಗಳು ತಿಳಿಸಿದರು.