Asianet Suvarna News Asianet Suvarna News

ಬೆಂಗಳೂರು ಸಬ್‌ ಅರ್ಬನ್‌ ರೈಲಿಗೆ ಅನಂತಕುಮಾರ್‌ ಹೆಸರು: ಸಚಿವ ಸೋಮಣ್ಣ

ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆ ಅನಂತಕುಮಾರ್‌ ಅವರ ಕನಸಿನ ಕೂಸು, ವಾಜಪೇಯಿ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಯೋಜನೆ ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭಿಸಿದರು. ಹೀಗಾಗಿ ಯೋಜನೆಗೆ ಅವರ ಹೆಸರಿಡಬೇಕು ಎಂಬ ಬೇಡಿಕೆಯಿದೆ. 

Ananth Kumar is the Name of the Bengaluru Suburban Train Says V Somanna grg
Author
First Published Sep 22, 2022, 6:00 AM IST

ವಿಧಾನ ಪರಿಷತ್‌(ಸೆ.22):  ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆ ಜಾರಿಗೆ ಕಾರಣರಾದ ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್‌ ಅವರ ಹೆಸರಿಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ಬಿಜೆಪಿಯ ಎಚ್‌.ಎಸ್‌.ಗೋಪಿನಾಥ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆ ಅನಂತಕುಮಾರ್‌ ಅವರ ಕನಸಿನ ಕೂಸು, ವಾಜಪೇಯಿ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಯೋಜನೆ ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭಿಸಿದರು. ಹೀಗಾಗಿ ಯೋಜನೆಗೆ ಅವರ ಹೆಸರಿಡಬೇಕು ಎಂಬ ಬೇಡಿಕೆಯಿದೆ. ಆದರೆ, ಇದು ಕೇಂದ್ರದ ಯೋಜನೆ ಆಗಿರುವುದರಿಂದ ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗುತ್ತದೆ, ರೈಲ್ವೆ ಇಲಾಖೆ ಸಹ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಅನಂತ್‌ಕುಮಾರ್‌ ಪ್ರತಿಷ್ಠಾನಕ್ಕೆ 3 ಎಕರೆ ಜಾಗ: ಸಚಿವ ಸಂಪುಟ ಒಪ್ಪಿಗೆ

ಯೋಜನೆಯನ್ನು ನಾಲ್ಕು ಕಾರಿಡಾರ್‌ಗಳಲ್ಲಿ ಜಾರಿ ತರಲಾಗುವುದು. ಒಟ್ಟು 148.7 ಕಿ.ಮೀ. ಉದ್ದದ ರೈಲು ಮಾರ್ಗ ಇದಾಗಿದೆ. ಸದ್ಯ ಎರಡನೇ ಕಾರಿಡಾರ್‌ ಆಗಿರುವ ಬೈಯಪ್ಪನಹಳ್ಳಿ-ಚಿಕ್ಕಬಾಣಾವರದ 25 ಕಿ.ಮೀ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಈಗಾಗಲೇ ಶೇ.85ರಷ್ಟುಭೂಸ್ವಾಧೀನವಾಗಿದೆ. ಬಾಕಿ ಇರುವ 6 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 12 ರೈಲ್ವೆ ನಿಲ್ದಾಣ ಬರಲಿದೆ. ಒಟ್ಟು 8 ಕಿ.ಮೀ. ಎತ್ತರದ ಸೇತುವೆ ಹಾಗೂ 17.5 ಕಿ.ಮೀ. ನೆಲಮಾರ್ಗದಲ್ಲಿ ರೈಲ್ವೆ ಮಾರ್ಗ ಬರಲಿದೆ. .869 ಕೋಟಿ ವೆಚ್ಚದಲ್ಲಿ 27 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.

ಎರಡನೇ ಕಾರಿಡಾರ್‌ ಪೂರ್ಣಗೊಂಡ ನಂತರ ಉಳಿದ ಮೂರು ಕಾರಿಡಾರ್‌ಗಳ ಯೋಜನೆಯ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದ ಅವರು, ಯೋಜನೆ ಪೂರ್ಣಗೊಂಡರೆ ಸುಮಾರು 10 ಲಕ್ಷ ಪ್ರಯಾಣಿಕರು ಸಂಚರಿಸಬಹುದಾಗಿದೆ. ಹಾಗಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅನಂತಕುಮಾರ್‌ ಅಪೇಕ್ಷೆ ನಾವೆಲ್ಲಾ ಈಡೇರಿಸೋಣ: ಕಾಗೇರಿ

ಬೆಂಗಳೂರು: ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಅವರದ್ದು ಚುಂಬಕ ವ್ಯಕ್ತಿತ್ವ. ನಮಗೆಲ್ಲಾ ಪ್ರೇರಣ ಶಕ್ತಿಯಾಗಿದ್ದರು. ಭವಿಷ್ಯದ ಬಗ್ಗೆ ಅವರಿಗಿದ್ದ ಅಪೇಕ್ಷೆಗಳನ್ನು ಈಡೇರಿಸಲು ನಾವು ಕಂಕಣಬದ್ಧರಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.

ಅನಂತಕುಮಾರ್‌ ಅವರ 63ನೇ ಜನ್ಮದಿನಾಚರಣೆಯ ಅಂಗವಾಗಿ ವಿವಿ ಪುರದ ಕರ್ನಾಟಕ ಜೈನ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಅನಂತ ಪ್ರೇರಣ’ ಕಾರ್ಯಕ್ರಮದಲ್ಲಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅನಂತಕುಮಾರ್‌ ಪ್ರೇರಣ ಶಕ್ತಿಯಾಗಿದ್ದು, ನಮ್ಮೆಲ್ಲರ ಜೀವನದಲ್ಲಿ ಅವರ ಅನುಭವದ ಪಾಠ ಇದೆ. ಅನಂತಕುಮಾರ್‌ ನೆನಪು ಸದಾ ಹಸಿರಾಗಿರಲು ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳು ಹೆಚ್ಚಾಗಬೇಕು. ಅವರ ನೆನೆಪು ಎಂದರೆ ನಮ್ಮ ಕೆಲಸಕ್ಕೆ ಇನ್ನಷ್ಟುಪ್ರೇರಣೆ ಪಡೆದು ಮುನ್ನಡೆಯುವುದು. ಅವರ ಭವಿಷ್ಯದ ಅಪೇಕ್ಷೆಯನ್ನು ಈಡೇರಿಸಲು ನಾವು ಕಂಕಣಬದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಲಕ್ಷಾಂತರ ಜನರಿಗೆ ಪ್ರೇರಣೆ

ಅನಂತಕುಮಾರ್‌ ಅವರ ಹಿಂದಿನ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದವರು ತೇಜಸ್ವಿನಿ ಅವರು. ಸಮಾಜಕ್ಕೆ ಒಳ್ಳೆಯದಾಗಬೇಕು ಎನ್ನುವ ಅವರ ವ್ಯಕ್ತಿತ್ವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಎಲ್ಲಾ ರಂಗದಲ್ಲಿ ಇಂದು ಆದರ್ಶ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಇದರಿಂದ ಹೊರಬಂದು ಅನಂತಕುಮಾರ್‌ ಅವರಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾಗಿದೆ. ಲಕ್ಷಾಂತರ ಜನರಿಗೆ ಅನಂತಕುಮಾರ್‌ ಪ್ರೇರಣೆಯಾಗಿದ್ದರು ಎಂದು ಬಣ್ಣಿಸಿದರು.

ರಾಜ್ಯಕ್ಕೆ ಅನಂತ್‌ ಕೊಡುಗೆ ಅಮೂಲ್ಯ, ಸಿಎಂ ಶ್ಲಾಘನೆ

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಟ್ರಸ್ಟ್‌ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ವಿಶ್ರಾಂತ ನ್ಯಾಯಮೂರ್ತಿ ಎನ್‌.ಕುಮಾರ್‌, ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿ ಉಪಕುಲಪತಿ ವಿಷ್ಣುಕಾಂತ್‌ ಚಟ್ಪಲ್ಲಿ, ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಪಿ.ವಿ.ಕೃಷ್ಣ ಭಟ್‌ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧ ಅವರು ಪ್ರದರ್ಶಿನಿಯನ್ನು ಉದ್ಘಾಟಿಸಿದರು.

ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ಅವರ 63 ನೇ ಜನ್ಮದಿನಾಚರಣೆಯ ಅಂಗವಾಗಿ ವಿವಿ ಪುರದ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಿದ್ದ ‘ಅನಂತ ಪ್ರೇರಣ’ ಕಾರ್ಯಕ್ರಮದಲ್ಲಿ ಅನಂತಯಾನ ಪುಸ್ತಕದ ಮೊದಲ ಭಾಗವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆಗೊಳಿಸಿದರು. ಬಿ.ಸಿ.ನಾಗೇಶ್‌, ನ್ಯಾ.ಎನ್‌.ಕುಮಾರ್‌, ದೊಡ್ಡರಂಗೇಗೌಡ, ಪ್ರೊ.ಪಿ.ವಿ.ಕೃಷ್ಣ ಭಟ್‌, ಡಾ.ತೇಜಸ್ವಿನಿ ಅನಂತಕುಮಾರ್‌ ಹಾಜರಿದ್ದರು.
 

Follow Us:
Download App:
  • android
  • ios