*  ತಿಂಗಳಾಂತ್ಯಕ್ಕೆ ಕಾರಿಡಾರ್‌-2ರ ಸಿವಿಲ್‌ ಕಾಮಗಾರಿ ಆರಂಭಿಸಲು ಚಿಂತನೆ*  ಕಾಮಗಾರಿ ಆರಂಭ ಕೊಂಚ ವಿಳಂಬವಾಗಿರುವುದು ನಿಜ*  ಕಾಮಗಾರಿಗೆ ಶೀಘ್ರವೇ ಪ್ರಧಾನಿಯಿಂದ ಶಂಕುಸ್ಥಾಪನೆ ಮಾಡಿಸಿ ಕಾಮಗಾರಿ ಆರಂಭಿಸಲಾಗುವುದು

ಬೆಂಗಳೂರು(ಮಾ.10): ರಾಜಧಾನಿ ಬೆಂಗಳೂರು(Bengaluru) ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು(Suburban Rail) ಯೋಜನೆಯನ್ನು 2026ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ (ಕಾರಿಡಾರ್‌-2) ಮಾರ್ಗದ ಸಿವಿಲ್‌ ಕಾಮಗಾರಿಯನ್ನು ಮಾರ್ಚ್‌ ಅಂತ್ಯದಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ(V Somanna) ತಿಳಿಸಿದರು.

ಕಾಂಗ್ರೆಸ್‌ನ(Congress) ಪ್ರಕಾಶ್‌ ರಾಥೋಡ್‌ ಅವರ ಪರವಾಗಿ ಯು.ಬಿ. ವೆಂಕಟೇಶ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಮಗಾರಿ ಆರಂಭ ಕೊಂಚ ವಿಳಂಬವಾಗಿರುವುದು ನಿಜ, ಕಾಮಗಾರಿಗೆ ಶೀಘ್ರವೇ ಪ್ರಧಾನ ಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಿ ಕಾಮಗಾರಿ ಆರಂಭಿಸಲಾಗುವುದು. ಉಳಿದ ಮೂರು ಕಾರಿಡಾರ್‌ಗಳ ಟೆಂಡರ್‌ ಕರೆದು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ, ಹಂತ ಹಂತವಾಗಿ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು.

Bengaluru Suburban Rail: ಹೀಲಲಿಗೆ-ಯಲಹಂಕ-ರಾಜಾನುಕುಂಟೆ ಸಬ್‌ಅರ್ಬನ್‌ ರೈಲು ಕಾಮಗಾರಿ ಶೀಘ್ರ

ಯೋಜನೆಗೆ ಕೇಂದ್ರ ಸಚಿವ ಸಂಪುಟ(Union Cabinet) ಅನುಮತಿ ನೀಡಿದ್ದು, ಯೋಜನೆಯ ಅಂದಾಜು ವೆಚ್ಚ 15,767 ಕೋಟಿ ರು. ಗಳಾಗಿದ್ದು, ಯೋಜನೆಯಲ್ಲಿನ 12,396 ಕೋಟಿ ರು.ಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಲಾ 2,479 ಕೋಟಿ ರು., 7438 ಕೋಟಿ ರು.ಗಳನ್ನು ಬಾಹ್ಯಸಾಲ ಹಾಗೂ ಉಳಿದ 3,371 ಕೋಟಿ ರು.ಗಳನ್ನು ಜಿಎಸ್‌ಟಿ ಹೊಂದಾಣಿಕೆ ಮತ್ತು ಇತರ ಮೂಲಗಳಿಂದ ಒದಗಿಸಲಾಗುವುದು. 148.17 ಕಿ.ಮೀ. ಉದ್ದದ ರೈಲ್ವೆ ಜಾಲವನ್ನು ರಾಜ್ಯ ಸರ್ಕಾರ ಹಾಗೂ ರೈಲ್ವೆ ಮಂತ್ರಾಲಯದ ಜಂಟಿ ಸಹಭಾಗಿತ್ವದ ಸಂಸ್ಥೆಯಾದ ಕೆ-ರೈಡ್‌ ಮೂಲಕ ಕಾರ್ಯಗತಗೊಳಿಸಲಾಗುವುದು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಯು.ಬಿ. ವೆಂಕಟೇಶ್‌, ಯೋಜನೆಗೆ ಅನುಮತಿ ನೀಡಿ 500 ದಿನಗಳ ಮೇಲಾದರೂ ಈವರೆಗೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿಲ್ಲ. ಹೀಗಾದರೆ ಯಾವಾಗ ಯೋಜನೆ ಜಾರಿಯಾಗುವುದು ಹೇಗೆ, ಈ ಯೋಜನೆ ಜಾರಿಯ ಬಗ್ಗೆ ಯಾಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

500 ದಿನವಾದ್ರೂ ನಿಂತಲ್ಲೇ ನಿಂತ ಸಬ್‌ ಅರ್ಬನ್‌ ರೈಲು

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ(Cennttral Government) ‘ಸಬ್‌ಅರ್ಬನ್‌ ರೈಲು ಯೋಜನೆ’ ಘೋಷಣೆ ಮಾಡಿ 500 ದಿನ ಕಳೆದಿದೆ. ಆದರೆ, ಈವರೆಗೂ ಯಾವುದೇ ರೀತಿಯ ಸಿವಿಲ್‌ ಕಾಮಗಾರಿಗಳು ಆರಂಭವಾಗಿಲ್ಲ.

ಬೆಂಗಳೂರು ನಗರಕ್ಕೆ ಸಬ್‌ಅರ್ಬನ್‌ ರೈಲು ಸೇವೆ ಒದಗಿಸುವ ಸಂಬಂಧ 2019ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅಲ್ಲದೆ, 2020ರ ಅಕ್ಟೋಬರ್‌ 21ರಂದು ರೈಲ್ವೆ ಮಂಡಳಿ ಯೋಜನೆಗೆ ಅನುಮೋದನೆ ನೀಡಿತ್ತು. ಯೋಜನೆಯ ಅನುಷ್ಠಾನವನ್ನು ನಿರ್ವಹಿಸುವಂತೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ-ರೈಡ್‌)ಕ್ಕೆ ವಹಿಸಿತ್ತು. ಜತೆಗೆ, ಮುಂದಿನ ಆರು ವರ್ಷದಲ್ಲಿ (2,190 ದಿನ) ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿತ್ತು.

ಶೀಘ್ರ ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸೇವೆ : ಮಾಸಾಂತ್ಯಕ್ಕೆ ಟೆಂಡರ್

ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮೂರು ವರ್ಷದಲ್ಲಿ (1,095 ದಿನ)ದಲ್ಲಿ ಅಂತಿಮಗೊಳಿಸಲು ಸೂಚಿಸಿತ್ತು. ಆದರೆ, ಮಾ.6ಕ್ಕೆ ಯೋಜನೆ ಘೋಷಣೆ ಮಾಡಿ 500 ದಿನಗಳ ಕಳೆದಿವೆ. ಯೋಜನೆಗೆ ಸಂಬಂಧಿಸಿದಂತೆ ಈವರೆಗೂ ಸಿವಿಲ್‌ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಬೆಳವಣಿಗೆ ಬೆಂಗಳೂರು ನಗರಕ್ಕೆ ಸಬ್‌ಅರ್ಬನ್‌ ರೈಲು ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ ಎಂದು ನಗರದ ರೈಲ್ವೆ ಪರ ಹೋರಾಟಗಾರರು ಮತ್ತು ಸಿಟಿಜನ್‌ ಫಾರ್‌ ಸಿಟಿಜನ್‌ ಸಂಘಟನೆಯ ರಾಜ್‌ಕುಮಾರ್‌ ದುಗ್ಗಾರ್‌ ಆರೋಪಿಸಿದ್ದರು.

ಸಬ್‌ಅರ್ಬನ್‌ ರೈಲು ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಂಡರೆ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗಕ್ಕೆ ಬದಲು ರೈಲು ಸೇವೆಯನ್ನು ಹೆಚ್ಚು ಪ್ರಯಾಣಿಕರು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿತ್ತು. ಆದ್ದರಿಂದ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದರು.