15 ಸಾವಿರ ರೂ. ಗೌರವಧನಕ್ಕೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಟಿ ತಾರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಸಚಿವ ನರೇಂದ್ರ ಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ, ಶೀಘ್ರವೇ ಬೇಡಿಕೆ ಈಡೇರಿಸಲು ಒತ್ತಾಯಿಸಿದ್ದಾರೆ.

ಬೆಂಗಳೂರು (ನ.25): 15 ಸಾವಿರ ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ 9 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಹಿರಿಯ ನಟಿ ತಾರಾ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಸರ್ಕಾರದ ನಡೆ ಮತ್ತು ಸಚಿವ ನರೇಂದ್ರ ಸ್ವಾಮಿ ಅವರ ಹೇಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

'ಕೇಳಿಸಿಕೊಳ್ಳುವ ಕಿವಿಗಳು ಇರಬೇಕು':

"ನಾವೆಲ್ಲಾ ಹೆಣ್ಣುಮಕ್ಕಳು ಸೇರಿದಾಗ ಹೇಗಿದ್ದೀರಾ ಅಂತ ಮೊದಲು ಕೇಳುತ್ತೇವೆ. ನೀವು ಕಳೆದ 9 ದಿನಗಳಿಂದ ಹೋರಾಟ ಮಾಡುತ್ತಿದ್ದೀರಿ. ಗೌರವದಿಂದ ಬದುಕಲು, ಗೌರವಧನ ನೀಡುವಂತೆ ಕೇಳುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಹೆಣ್ಣುಮಕ್ಕಳು ಸುಮ್ಮನೆ ಖರ್ಚು ಮಾಡುವುದಿಲ್ಲ, ಒಂದು ರೂಪಾಯಿ ಖರ್ಚು ಮಾಡಬೇಕಾದರೂ ಯೋಚನೆ ಮಾಡುತ್ತೇವೆ. ಒಂದು ಹೆಣ್ಣು ಮಗು ಸಂಸಾರದ ಬಗ್ಗೆ ಕಾಳಜಿ ವಹಿಸುತ್ತಾಳೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಪ್ರತಿಭಟನೆ ಮಾಡುತ್ತಿದ್ದೀರಾ, ಇದನ್ನು ಕೇಳಿಸಿಕೊಳ್ಳುವ ಕಿವಿಗಳು ಸರ್ಕಾರಕ್ಕೆ ಇರಬೇಕು" ಎಂದು ತಾರಾ ಹೇಳಿದರು.

ಸರ್ಕಾರದ ನಡೆ ನಾಚಿಕೆಗೇಡಿನ ಸಂಗತಿ:

"ಎಲ್ಲಿ ಹೆಣ್ಣನ್ನು ಪೂಜಿಸುತ್ತೇವೆಯೋ ಅಲ್ಲಿ ದೇವರು ಇರುತ್ತಾನೆ, ಎಲ್ಲಿ ಹೆಣ್ಣನ್ನು ಜರಿಯುತ್ತಾರೋ ಅಲ್ಲಿ ಕೆಡಕು ಇರುತ್ತದೆ. ಹೆಣ್ಣು ಮನೆ ಹಾಗೂ ಹೊರಗೆಲಸವನ್ನು ನಿಭಾಯಿಸುತ್ತಾಳೆ, ತಾಯಿ ಯಾವುದೇ ಪ್ರತಿಫಲ ಇಲ್ಲದೆ ಕೆಲಸ ಮಾಡುತ್ತಾಳೆ. ಆದರೂ ಪ್ರತಿ ಹಂತದಲ್ಲೂ ಸಮಾಜ ಹೆಣ್ಣುಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಿದೆ. ಆಶಾ ಕಾರ್ಯಕರ್ತೆಯರನ್ನು 9 ದಿನದವರೆಗೂ ಹೋರಾಟ ಮಾಡಲು ಬಿಡಬಾರದಿತ್ತು. ಹೋರಾಟಕ್ಕೂ ಮುನ್ನ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ. ಮೊದಲು ಇವರನ್ನು ಕಾರ್ಮಿಕ ಇಲಾಖೆಯಲ್ಲಿ ಸೇರಿಸುವ ಕೆಲಸ ಆಗಲಿ" ಎಂದು ಒತ್ತಾಯಿಸಿದರು.

ಪ್ರತಿ ತಿಂಗಳ 1 ರಂದು ವೇತನಕ್ಕೆ ಮನವಿ:

11 ತಿಂಗಳಲ್ಲಿ ಕೇವಲ 5 ಬಾರಿ ಮಾತ್ರ ಗೌರವಧನ ಬಂದಿರುವುದನ್ನು ಪ್ರಸ್ತಾಪಿಸಿದ ತಾರಾ, "ತಿಂಗಳಿಗೆ ಸರಿಯಾಗಿ ವೇತನ ಬರುತ್ತಿಲ್ಲ ಎಂದ ಮೇಲೆ ಯಾಕೆ ಕೆಲಸ ಮಾಡುತ್ತೀರಿ? ಪ್ರತಿ ತಿಂಗಳ 1 ರಂದು ವೇತನ ಬರುವ ರೀತಿ ಆಗಲಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನನ್ನ ಬಾಯಲ್ಲಿ ಏನಾದರೂ ಹೇಳಿದರೆ ಅದು ಒಳ್ಳೆಯದಾಗುತ್ತದೆ ಎಂಬ ಮಾತಿದೆ, ಇನ್ನೆರಡು ದಿನದ ಒಳಗೆ ಒಳ್ಳೆಯ ಸುದ್ದಿ ಬಂದೇ ಬರುತ್ತದೆ" ಎಂದು ಭರವಸೆ ನೀಡಿದರು.

ಸಚಿವ ನರೇಂದ್ರ ಸ್ವಾಮಿ ವಿರುದ್ಧ ಕಿಡಿ:

ಆಶಾ ಕಾರ್ಯಕರ್ತೆಯರು ಬಂದು ಕೇಳಿದಾಗಲೆಲ್ಲಾ ಕಂಠೀಹಾರ ಕಿತ್ತುಕೊಡುತ್ತಾರಾ ಎಂದಿದ್ದ ಕೃಷಿ ಸಚಿವ ನರೇಂದ್ರ ಸ್ವಾಮಿ ವಿರುದ್ಧ ತಾರಾ ಆಕ್ರೋಶ ವ್ಯಕ್ತಪಡಿಸಿದರು. "ನೀನೇನ್ ರಾಜನಾ? ಜನ ಮತ ಹಾಕಲಿಲ್ಲ ಅಂದರೆ ನೀನು ಗೆಲ್ಲುವುದಿಲ್ಲ. ಸಚಿವರು ಬಂದು ಆಶಾ ಕಾರ್ಯಕರ್ತೆಯರ ಕಾಲಿಗಾದರೂ ಬಿದ್ದರೂ ತಪ್ಪಿಲ್ಲ. ಇಡೀ ಕುಟುಂಬ ಬಿಟ್ಟು ಇವರು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಿಂದೆ 10 ಸಾವಿರ ಘೋಷಣೆ ಮಾಡಿದ್ದರು, ಅವರು ಕೊಟ್ಟ ಆಶ್ವಾಸನೆಯನ್ನಾದರೂ ಮೊದಲು ಈಡೇರಿಸಿ. ಬೇಡಿಕೆ ಈಡೇರಲಿಲ್ಲ ಅಂದರೆ ಇದು ರಾಜ್ಯದ ಹೋರಾಟವಾಗಿ ಉಳಿಯದೆ, ರಾಷ್ಟ್ರದ ಹೋರಾಟವಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.