ಬಳ್ಳಾರಿ(ಏ.30): ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ನಗರದ ರೋಗಿಯೊಬ್ಬರಿಗೆ ಬೆಂಗಳೂರು ಉತ್ತರ-ಪೂರ್ವ ವಲಯದ ಕಚೇರಿಯಲ್ಲಿ ಸ್ಥಾಪಿಸಿದ ಸಹಾಯವಾಣಿಗೆ ಮಾಡಿದ ಕರೆಯಿಂದ ನೇರವಾಗಿ ಮನೆ ಬಾಗಿಲಿಗೆ ಔಷಧಿ ತಲುಪಿದೆ.

ಬೆಂಗಳೂರು ರೈಡ​ರ್ಸ್‌ ರಿಪಬ್ಲಿಕ್‌ ಮೋಟಾರ್‌ ಸೈಕಲ್‌ ಕ್ಲಬ್‌ನ ಸದಸ್ಯರಾದ ಮೋಹನ್‌, ಮಲ್ಲಪ್ಪ, ಶ್ರೀಧರ್‌, ಮೋಹನ್‌ ಕೃಷ್ಣ ಅವರು ಬಳ್ಳಾರಿಗೆ ಬೈಕ್‌ನಲ್ಲಿ ಆಗಮಿಸಿ ನೇರವಾಗಿ ರೋಗಿಯ ಮನೆಗೆ ತೆರಳಿ ಔಷಧಿ ನೀಡಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ರೋಗಿಯೊಬ್ಬರಿಗೆ ಕ್ಯಾನ್ಸರ್‌ ರೋಗದ ಔಷಧಿ ಸಿಗದೆ ಒದ್ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರಿನ ಉತ್ತರ-ಪೂರ್ವ ವಲಯದ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿ, ತಮ್ಮ ಅಳಲು ತೋಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಹಾಯವಾಣಿಯವರು ಬೆಂಗಳೂರು ರೈಡ​ರ್‍ಸ್ ರಿಪಬ್ಲಿಕ್‌ ಮೋಟಾರ್‌ ಸೈಕಲ್‌ ಕ್ಲಬ್‌ನ ಸದಸ್ಯರ ಮೂಲಕ ಔಷಧಿ ಕಳಿಸಿಕೊಟ್ಟಿದ್ದಾರೆ.

ಲಾಕ್‌​ಡೌ​ನ್‌​ನಿಂದ ಜೀವನ ನಿರ್ವ​ಹಣೆ ಕಷ್ಟ: ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಕಂಗಾಲು

ಮೋಟಾರ್‌ ಸೈಕಲ್‌ ಕ್ಲಬ್‌:

ಕರ್ನಾಟಕ ಪೊಲೀಸ್‌ ಹಾಗೂ ರೈಡ​ರ್ಸ್‌ ರಿಪಬ್ಲಿಕ್‌ ಮೋಟಾರ್‌ ಸೈಕಲ್‌ ಕ್ಲಬ್‌ ಬೆಂಗಳೂರು ಸೇವೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಸಹಾಯವಾಣಿಗೆ ಕರೆ ಬಂದಾಗ ರೋಗಿಗಳಿಗೆ ಅತ್ಯವಶ್ಯಕವಿರುವ ಔಷಧಿ ಹೆಸರು ಬರೆದುಕೊಂಡು, ನಂತರ ನಮ್ಮಲ್ಲಿಯೇ ಇರುವ ವೈದ್ಯರ ತಂಡವೊಂದಕ್ಕೆ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಈ ಔಷಧಿ ಬೆಂಗಳೂರು ಹೊರತುಪಡಿಸಿ ಬೇರೆಡೆ ಸಿಗುವುದಿಲ್ಲ ಎಂದು ವೈದ್ಯರ ತಂಡ ತಿಳಿಸಿದ ಹಿನ್ನೆಲೆಯಲ್ಲಿ ರೈಡ​ರ್ಸ್‌ ರಿಪಬ್ಲಿಕ್‌ ಮೋಟಾರ್‌ ಸೈಕಲ್‌ ಕ್ಲಬ್‌ ಸದಸ್ಯರ ಮೂಲಕ ಸಂಬಂಧಿಸಿದ ರೋಗಿಯ ವಿಳಾಸಕ್ಕೆ ಔಷಧಿ ತಲುಪಿಸಿದ್ದಾರೆ. ಮಂಗಳವಾರ ಸಂಜೆ ಬೆಂಗಳೂರಿನಿಂದ ಹೊರಟ ಮೋಟಾರ್‌ ಕ್ಲಬ್‌ ಸದಸ್ಯರು, ಬುಧವಾರ ಮಧ್ಯಾಹ್ನ ಬಳ್ಳಾರಿ ತಲುಪಿದ್ದಾರೆ. ರೋಗಿಗೆ ಔಷಧಿ ತಲುಪಿಸಿದ ಬಳಿಕ ಇಲ್ಲಿನ ಐಜಿಪಿ ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ತೆರಳಿದ್ದಾರೆ.