ಲಾಕ್ಡೌನ್ನಿಂದ ಜೀವನ ನಿರ್ವಹಣೆ ಕಷ್ಟ: ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಕಂಗಾಲು
ಹಂಪಿಯ ಸ್ಮಾರಕಗಳ ಬಗ್ಗೆ ಅಗತ್ಯ ಮಾರ್ಗದರ್ಶನ, ಮಾಹಿತಿ ನೀಡುವ ಪ್ರವಾಸಿ ಗೈಡ್‌ಗಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ| ಮಾತನ್ನೇ ಬಂಡವಾಳವಾಗಿಸಿಕೊಂಡು ಸ್ವಾಭಿಮಾನದ ಜೀವನ ಸಾಗಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಅಧಿಕೃತ ಪ್ರವಾಸಿ ಮಾರ್ಗದರ್ಶಕರು ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳಿಂದ ಮನೆಯಲ್ಲೇ ಇದ್ದು, ಜೀವನ ನಿರ್ವಹಣೆ ಅವರಿಗೆ ತೀವ್ರ ಸಮಸ್ಯೆಯಾಗಿದೆ|
ಸಿ.ಕೆ. ನಾಗರಾಜ್
ಹೊಸಪೇಟೆ(ಏ.30): ಕೋವಿಡ್-19 ಭೀತಿಯಿಂದ ಇಡೀ ದೇಶವೇ ಲಾಕ್‌ಡೌನ್ ಆಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ (ಗೈಡ್ಸ್) ದೊಡ್ಡ ಹೊಡೆತ ಬಿದ್ದಿದೆ. ಲಾಕ್‌ಡೌನ್‌ನಿಂಸಸದ ಅವರು ಜೀವನ ನಡೆಸುವುದೇ ಕಷ್ಟವಾಗಿದೆ.
ಒಂದು ವೇಳೆ ಲಾಕ್‌ಡೌನ್ ಮುಗಿದರೂ ಪ್ರವಾಸೋದ್ಯಮ ಮೊದಲಿನಂತೆ ಆಗಬೇಕಾದರೆ ಇನ್ನೂ ಒಂದು ವರ್ಷವಾದರೂ ಬೇಕು. ಇದನ್ನೇ ನಂಬಿದ್ದ ಪ್ರವಾಸಿ ಮಾರ್ಗದರ್ಶಿಗಳ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ಕೊರೋನಾ ಕಾಟ: ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದ ಐಸೋಲೆಷನ್ ಕೋಚ್ ರೈಲು
ವಿಶ್ವವಿಖ್ಯಾತ ಹಂಪಿಯಲ್ಲಿ ಇಂತಹದ್ದೇ ಪರಿಸ್ಥಿತಿ ಉಂಟಾಗಿದ್ದು, ವಿಜಯನಗರ ಸಾಮ್ರಾಜ್ಯದ ಗತ ವೈಭವದ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುವಂತಹ ಮತ್ತು ಹಂಪಿಯ ಸ್ಮಾರಕಗಳ ಬಗ್ಗೆ ಅಗತ್ಯ ಮಾರ್ಗದರ್ಶನ, ಮಾಹಿತಿ ನೀಡುವ ಪ್ರವಾಸಿ ಗೈಡ್‌ಗಳು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ. ಮಾತನ್ನೇ ಬಂಡವಾಳವಾಗಿಸಿಕೊಂಡು ಸ್ವಾಭಿಮಾನದ ಜೀವನ ಸಾಗಿಸುತ್ತಿರುವ ಸುಮಾರು 200ಕ್ಕೂ ಹೆಚ್ಚು ಅಧಿಕೃತ (ಲೈಸೆನ್ಸ್ ಇರುವ) ಪ್ರವಾಸಿ ಮಾರ್ಗದರ್ಶಕರು ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳಿಂದ ಮನೆಯಲ್ಲೇ ಇದ್ದು, ಜೀವನ ನಿರ್ವಹಣೆ ಅವರಿಗೆ ತೀವ್ರ ಸಮಸ್ಯೆಯಾಗಿದೆ.
ಇವರೊಂದಿಗೆ ಹಂಪಿಯಲ್ಲಿರುವ ಹೋಟೆಲ್‌ಗಳ ಮಾಲೀಕರು, ಆಟೋರಿಕ್ಷಗಳ ಚಾಲಕರು, ಪ್ರವಾಸಿ ಕಾರುಗಳ ಚಾಲಕರು, ಮಾಲೀಕರು, ಹೂವು, ಹಣ್ಣು, ಕಾಯಿ ಮಾರುವವರ ಜೀವನ ಸಹ ಸಂಕಷ್ಟಕ್ಕೆ ಸಿಲುಕಿದೆ. ಒಂದು ವೇಳೆ ಮೇ 3ಕ್ಕೆ ಲಾಕ್‌ಡೌನ್ ಮುಗಿದರೂ ಕೊರೊನಾ ಭೀತಿಯಿಂದ ದೇಶ-ವಿದೇಶಗಳ ಪ್ರವಾಸಿಗರು ಪ್ರವಾಸಕ್ಕೆ ಬರಲು ಹಿಂದೇಟು ಹಾಕಬಹುದು. ಆದ್ದರಿಂದ ಪ್ರವಾಸೋದ್ಯಮ ಮೊದಲಿನಂತಾಗಲು 1 ವರ್ಷವಾದರೂ ಬೇಕಾಗಬಹುದು. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಪ್ರವಾಸಿ ಮಾರ್ಗದರ್ಶಿಗಳ ಕುಟುಂಬಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ.
ಕೊರೋನಾ ವೈರಸ್ ದೇಶಕ್ಕೆ ಪ್ರವೇಶಿಸುವುದಕ್ಕೂ ಮೊದಲು ಸೀಜನ್‌ನಲ್ಲಿ ಪ್ರತಿದಿನ . 500-1000 ಸಂಪಾದನೆಯಾಗುತ್ತಿತ್ತು. ಅದರಲ್ಲಿ . 200 ಊಟ, ತಿಂಡಿ, ಪೆಟ್ರೋಲ್‌ಗೆ ಖರ್ಚಾದರೂ . 600 ಉಳಿಯುತ್ತಿತ್ತು. ಇದರಲ್ಲಿ ಕುಟುಂಬ ನಿರ್ವಹಣೆಯಾಗುತ್ತಿತ್ತು. ಇಂದು ಖರ್ಚಿಗೂ ಹಣವಿಲ್ಲದೆ ಪರಿತಪಿಸುವ ಸ್ಥಿತಿ ಬಂದಿದೆ ಎಂದು ಪ್ರವಾಸಿ ಗೈಡ್‌ಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಪ್ರವಾಸೋದ್ಯಮಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಿರುವುದರಿಂದ ಹಂಪಿ ಸೇರಿದಂತೆ ರಾಜ್ಯದ ಇತರೆ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಆದರೆ, ಪ್ರವಾಸಿ ಗೈಡ್‌ಗಳು ಇದನ್ನೇ ನಂಬಿ ಬದುಕು ಕಟ್ಟಿ ಕೊಂಡವರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಗೈಡ್‌ಗಳ ಪರಿಸ್ಥಿತಿ ದುಸ್ತರವಾಗಿದೆ.
ಪ್ರವಾಸಿ ತಾಣಗಳಲ್ಲಿ ಗೈಡ್ ಮಾಡುವುದು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ನಿತ್ಯವೂ ಹಂಪಿಯಲ್ಲಿ ಮಾರ್ಗದರ್ಶನ ಮಾಡುವ ಉದ್ಯೋಗದಿಂದ ನಮ್ಮ ಕುಟುಂಬಗಳ ಜೀವನ ನಡಯುತ್ತಿವೆ. ಈಗ ಕೊರೋನಾ ವೈರಸ್ ನಮ್ಮ ಜೀವನಕ್ಕೆ ಸಾಕಷ್ಟು ಸಂಕಷ್ಟ ತಂದಿದೆ ಎಂದು ಹಂಪಿ ಪ್ರವಾಸಿ ಮಾರ್ಗದರ್ಶಿಗಳಾದ ಮಲ್ಲಿಕಾರ್ಜುನ, ತಿಪ್ಪಣ್ಣಗೌಡ, ರವಿಕುಮಾರ್, ಮಂಜುನಾಥ ಅವರು ಹೇಳಿದ್ದಾರೆ.