ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ಊಟಕ್ಕೆಂದು ರಸ್ತೆ ದಾಟುತ್ತಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಯೋಗೇಶ್ವರಿ ಅವರಿಗೆ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬೆಂಗಳೂರು (ಫೆ.17): ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಮತ್ತೊಂದು ಬಲಿ ಪಡೆದಿದೆ. ಊಟದ ವಿರಾಮದ ಸಮಯದಲ್ಲಿ ಸಹೋದ್ಯೋಗಿಯೊಂದಿಗೆ ರಸ್ತೆ ದಾಟುತ್ತಿದ್ದ ಯುವತಿಗೆ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿಯಾದ ಪರಿಣಾಮ, ಹೆಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಘಟನೆಯ ವಿವರ:

ಮೃತ ಯುವತಿಯನ್ನು ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿ ಯೋಗೇಶ್ವರಿ (27) ಎಂದು ಗುರುತಿಸಲಾಗಿದೆ. ಯೋಗೇಶ್ವರಿ ಅವರು ನಗರದ ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ಸೋಮವಾರ ಮಧ್ಯಾಹ್ನ ಸುಮಾರು 12:30ರ ಸುಮಾರಿಗೆ ಯೋಗೇಶ್ವರಿ ಅವರು ತಮ್ಮ ಸಹೋದ್ಯೋಗಿ ಸ್ನೇಹಿತೆಯೊಂದಿಗೆ ಊಟ ತರಲೆಂದು ಕಚೇರಿಯಿಂದ ಹೊರಬಂದಿದ್ದರು. ಊಟದ ಪಾರ್ಸೆಲ್ ಪಡೆದು ವಾಪಸ್ ಬರುತ್ತಿದ್ದಾಗ ಈ ದಾರುಣ ಅವಘಡ ಸಂಭವಿಸಿದೆ.

ಸಹೋದ್ಯೋಗಿ ಕಣ್ಣೆದುರೇ ನಡೆದ ದುರಂತ:

ಯೋಗೇಶ್ವರಿ ಮತ್ತು ಅವರ ಸ್ನೇಹಿತೆ ರಾಜ್‌ಕುಮಾರ್ ರಸ್ತೆಯನ್ನು ದಾಟಲು ಮುಂದಾಗಿದ್ದರು. ಈ ವೇಳೆ ರಸ್ತೆಯ ಒಂದು ಬದಿಯಿಂದ ವಾಹನಗಳು ಬರುತ್ತಿರುವುದನ್ನು ಗಮನಿಸಿದ ಸ್ನೇಹಿತೆ ರಸ್ತೆ ಮಧ್ಯೆಯೇ ನಿಂತಿದ್ದಾರೆ. ಆದರೆ, ವಾಹನ ದಾಟಿ ಹೋಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಯೋಗೇಶ್ವರಿ ರಸ್ತೆ ದಾಟಲು ಮುಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅದೇ ಕ್ಷಣದಲ್ಲಿ ಅತಿ ವೇಗವಾಗಿ ಬಂದ ಬುಲೆಟ್ ಬೈಕ್ ಯೋಗೇಶ್ವರಿ ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯೋಗೇಶ್ವರಿ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸವಾರನಿಗೂ ಗಾಯ, ಪೊಲೀಸರ ತನಿಖೆ:

ಅಪಘಾತದ ತೀವ್ರತೆಗೆ ಬುಲೆಟ್ ಬೈಕ್ ಸವಾರ ದೀಪನ್ (21) ಕೂಡ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಸದ್ಯ ದೀಪನ್‌ನನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯೋಗೇಶ್ವರಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಂಧು-ಮಿತ್ರರೊಂದಿಗೆ ನಗುನಗುತಿದ್ದ ಯುವತಿ, ಕೇವಲ ಊಟ ತರಲು ಹೋದವಳು ಹೆಣವಾಗಿ ಮರಳಿದ್ದು ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟುವಂತೆ ಮಾಡಿದೆ. ಅತಿ ವೇಗದ ಚಾಲನೆಯೇ ಈ ಘಟನೆಗೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.