45,000 ಕೋಟಿ ವೆಚ್ಚದಲ್ಲಿ ಬೆಂಗಳೂರು-ಪುಣೆ ಹೆದ್ದಾರಿ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಒಟ್ಟು 700 ಕಿ.ಮೀ. ಪೈಕಿ ಕರ್ನಾಟಕದಲ್ಲಿ 500, ಮಹಾರಾಷ್ಟ್ರ 200 ಕಿ.ಮೀ. ಸಂಪರ್ಕ, ಭವಿಷ್ಯದಲ್ಲಿ ಶಿರಡಿ ಕೇವಲ 7 ಗಂಟೆ ಪ್ರಯಾಣ ಆಗಲಿದೆ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
ರಾಮನಗರ(ಜ.06): ಭಾರತ್ ಮಾಲಾ ಯೋಜನೆಯ ಎರಡನೇ ಹಂತದಲ್ಲಿ ಬೆಂಗಳೂರು - ಪುಣೆ ನಗರಗಳ ನಡುವಿನ 700 ಕಿ.ಮೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು - ಪುಣೆ ಹೆದ್ದಾರಿ ನಿರ್ಮಾಣಕ್ಕೆ ಸುಮಾರು 45 ಸಾವಿರ ಕೋಟಿ ರುಪಾಯಿ ವೆಚ್ಚ ತಗುಲಲಿದೆ. ಒಟ್ಟು 700 ಕಿ.ಮೀ ಪೈಕಿ ಕರ್ನಾಟಕದಲ್ಲಿ 500, ಮಹಾರಾಷ್ಟ್ರ 200 ಕಿ.ಮೀ. ಹೆದ್ದಾರಿ ಇರಲಿದೆ. ಈ ಹೆದ್ದಾರಿಯು ಮುಂಬೈ - ಪುಣೆ ಮತ್ತು ಬೆಂಗಳೂರು- ಚೆನ್ನೈ ಹೆದ್ದಾರಿಗಳಿಗೆ ಸಂಪರ್ಕ ಸಾಧಿಸಲಿದೆ. ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಗೆ 16730 ಕೋಟಿ ರು. ವೆಚ್ಚವಾಗಲಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಈ ಹೆದ್ದಾರಿ 262 ಕಿಮೀ ಉದ್ದ ಇದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹೆದ್ದಾರಿ ಹಾದು ಹೋಗಲಿದೆ.
ಕರ್ನಾಟಕದಲ್ಲಿ ಒಟ್ಟು 71 ಕಿಮಿ ಉದ್ದದ ರಸ್ತೆಯನ್ನು 5069 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ರಸ್ತೆಯಲ್ಲಿ ವಾಹನಗಳು ಸುಮಾರು 120 ಕಿಮೀ ವೇಗದಲ್ಲಿ ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಬೆಂಗಳೂರು - ಚೆನ್ನೈ ನಡುವೆ ಶೇ.15ರಷ್ಟು ರಸ್ತೆ ಕಡಿಮೆಯಾಗಲಿದೆ. ಅಲ್ಲದೆ ಸಂಚಾರದ ಸಮಯ ಐದು ಗಂಟೆಯಿಂದ ಎರಡೂವರೆ ಗಂಟೆಗೆ ಇಳಿಕೆಯಾಗಲಿದೆ ಎಂದು ಹೇಳಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ವೈಮಾನಿಕ ಸಮೀಕ್ಷೆ ನಡೆಸಿದ ನಿತಿನ್ ಗಡ್ಕರಿ
ಇನ್ನು 13,600 ಕೋಟಿ ರುಪಾಯಿ ವೆಚ್ಚದಲ್ಲಿ ಬೆಂಗಳೂರು - ಕಡಪ - ವಿಜಯವಾಡ ಹೆದ್ದಾರಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಹೆದ್ದಾರಿ ರಸ್ತೆ ನಿರ್ಮಾಣವಾದ ನಂತರ ಎರಡೂ ನಗರಗಳ ನಡುವಿನ ಅಂತ ಸುಮಾರು 75 ಕಿಮೀನಷ್ಟುಕಡಿಮೆಯಾಗುತ್ತದೆ. ಸಂಚಾರ ಸಮಯ 5 ಗಂಟೆಯಷ್ಟುಉಳಿತಾಯವಾಗಲಿದೆ. 2025-26ರವೇಳೆಗೆ ಈ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂಬೈ- ಕನ್ಯಾಕುಮಾರಿ ಹೆದ್ದಾರಿ ರಸ್ತೆ ಡಿಪಿಆರ್ ಹಂತದಲ್ಲಿದೆ. ಸೋಲಾಪುರ-ಕರ್ನೂಲು- ಚನ್ನೈ ಹೆದ್ದಾರಿ ರಸ್ತೆ 2025ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆ 6 ಲೇನ್ ರಸ್ತೆಯಾಗಿದ್ದು, 47 ಸಾವಿರ ಕೋಟಿ ವೆಚ್ಚವಾಗಲಿದೆ. ಮಹರಾಷ್ಟ್ರ , ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮೂಲಕ ಹೆದ್ದಾರಿ ಸಾಗಲಿದೆ ಎಂದು ಹೇಳಿದರು.
ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿನ ಕಾಮಗಾರಿ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಗುತ್ತಿಗೆದಾರನ್ನು ಬದಲಿಸಿದ್ದು, 2024ರ ಮಾಚ್‌ರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನಿತಿನ್ ಗಡ್ಕರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂ - ಮೈ ಹೆದ್ದಾರಿಯಲ್ಲಿ ಕೆಲವು ಕಡೆ ಅಪಾಯಕಾರಿ ತಿರುವುಗಳಿದ್ದು, ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರಿದೆ. ಉದ್ಘಾಟನೆಗೆ ಮುನ್ನ ರಸ್ತೆ ಸುರಕ್ಷತೆ ಆಡಿಟ್ ನಡೆಯಲಿದ್ದು, ಲೋಪಗಳು ಇದ್ದಲ್ಲಿ ಸರಿಪಡಿಸಲಾಗುವುದು. ಹೆದ್ದಾರಿ ಬದಿ ಇರುವ ಜಾಗದಲ್ಲಿ ಸ್ಥಳೀಯ ಕರಕುಶಲ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶಇರುತ್ತದೆ. ರಾಜ್ಯ ಸರ್ಕಾರ ಬಯಸಿದಲ್ಲಿ ಜಾಗ ಒದಗಿಸುತ್ತೇವೆ. ಪ್ರಮುಖ ನಗರಗಳಿಗೆ ಪ್ರವೇಶ-ನಿರ್ಗಮನ ದ್ವಾರಗಳ ಸಂಪರ್ಕ ನೀಡಲಾಗುವುದು ಅಂತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Assembly election: ರಾಜಕೀಯ ಬದ್ಧ ವೈರಿ ಯೋಗೇಶ್ವರ್- ಡಿ.ಕೆ. ಸುರೇಶ್ ಹಸ್ತಲಾಘವ: ಕಾಲೆಳೆದುಕೊಂಡ ನಾಯಕರು
ಶಿರಡಿ ತಲುಪಲು 6-7 ಗಂಟೆ ಸಾಕು!
ಭಾರತ್ ಮಾಲಾ ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು - ಪುಣೆ ಹೆದ್ದಾರಿ ನಿರ್ಮಾಣದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿರವರ ಪ್ರಕಾರ ಬೆಂಗಳೂರಿನಿಂದ ಸಾಯಿಬಾಬಾರ ಸನ್ನಿಧಿ ಶಿರಡಿ ತಲುಪಲು ಕೇವಲ
6 ರಿಂದ 7 ಗಂಟೆ ಸಾಕು!
ಈಗ ರಸ್ತೆ ಮೂಲಕ ಶಿರಡಿ ತಲುಪಲು 18 ರಿಂದ 20 ಗಂಟೆಗಳು ಬೇಕಾಗಿದೆ. ಕೇಂದ್ರ ಹೆದ್ದಾರಿ ಸಚಿವರ ಪ್ರಕಾರ 45 ಸಾವಿರ ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿಯಾಗುವ ಬೆಂಗಳೂರು - ಪುಣೆ ರಸ್ತೆ ಕಾಮಗಾರಿ ನಂತರ ಶಿರಡಿ ತಲುಪಲು ಬೆಂಗಳೂರಿನಿಂದ 6 ರಿಂದ 7 ಗಂಟೆ ಸಾಕು. 6 ಲೇನ್ ಗಳ ಈ ರಸ್ತೆಯಲ್ಲಿ ವಾಹನಗಳು ಸುಮಾರು 120 ಕಿಮೀ ವೇಗದಲ್ಲಿ ಸಂಚರಿಸಲು ಸಾಧ್ಯವಾಗಲಿದೆ. ಹೀಗಾಗಿ ಸಂಚಾರ ಸಮಯದಲ್ಲಿ ಕಡಿತವಾಗಲಿದೆ. ಪುಣೆಯಿಂದ ಮುಂಬಾಯಿ ನಗರಕ್ಕೆ ಹೆದ್ದಾರಿ ರಸ್ತೆ ಪ್ರಗತಿಯಲ್ಲಿದ್ದು, ಬೆಂಗಳೂರು ಪುಣೆ ರಸ್ತೆ ಪುಣೆ-ಮುಂಬಾಯಿ ರಸ್ತೆಗೂ ಸಂಪರ್ಕ ಕಲ್ಪಿಸಲಿದೆ. ಅಲ್ಲದೆ ಇದೇ ರಸ್ತೆ ಮೂಲಕ ಇದೀಗ ಪ್ರಗತಿಯಲ್ಲಿರುವ ಬೆಂಗಳೂರು - ಚೆನ್ನೈ ರಸ್ತೆಗೂ ಸಂಪರ್ಕ ಸಾಧಿಸಬಹುದಾಗಿದೆ ಎಂದು ಸಚಿವರು ಹೇಳಿದರು.