ಬೆಂಗಳೂರಿನ ನಾಗರಬಾವಿ ಪಬ್‌ನಲ್ಲಿ ಯುವತಿಯರ ಮೊಬೈಲ್ ಸಂಖ್ಯೆ ಕೇಳಿದ ವಿಚಾರಕ್ಕೆ ಗಲಾಟೆ ನಡೆದಿದೆ. ಹಲ್ಲೆ ಮತ್ತು ಅಸಭ್ಯ ವರ್ತನೆ ಆರೋಪದಡಿ ಜ್ಞಾನಭಾರತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು (ಡಿ.18): ಸಿಲಿಕಾನ್ ಸಿಟಿಯ ಪಬ್ ಸಂಸ್ಕೃತಿಯ ನಡುವೆ ಮತ್ತೊಂದು ಗಲಾಟೆ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಪಬ್‌ಗೆ ಬಂದಿದ್ದ ಯುವತಿಯರ ಮೊಬೈಲ್ ಸಂಖ್ಯೆ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ನಡೆದಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.
ಘಟನೆಯ ವಿವರ
ನಾಗರಬಾವಿ ರಸ್ತೆಯಲ್ಲಿರುವ ಖಾಸಗಿ ಪಬ್‌ವೊಂದರಲ್ಲಿ ಬುಧವಾರ ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಉಮೇಶ್ ಮತ್ತು ಹೇಮಂತ್ ಎಂಬುವವರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಹೇಮಂತ್ ಜೊತೆಗಿದ್ದ ಯುವತಿಯರ ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಉಮೇಶ್ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಯುವತಿಯರು ನಂಬರ್ ಕೊಡಲು ನಿರಾಕರಿಸಿದಾಗ ಉಮೇಶ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಪಬ್ ಸಿಬ್ಬಂದಿ ಮಧ್ಯಸ್ಥಿಕೆ
ಈ ಬಗ್ಗೆ ಹೇಮಂತ್ ಪಬ್ ಸಿಬ್ಬಂದಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಸಿಬ್ಬಂದಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಉಮೇಶ್ ಕುಳಿತಿದ್ದ ಟೇಬಲ್ ಅನ್ನು ಬೇರೆಡೆಗೆ ಶಿಫ್ಟ್ ಮಾಡಿದ್ದರು. ಇದರಿಂದ ಪಾರ್ಟಿ ಮುಗಿಸಿ ಹೊರಬರುವಾಗ ಕೆರಳಿದ್ದ ಉಮೇಶ್, ಹೇಮಂತ್ ಮತ್ತು ಆತನ ಸ್ನೇಹಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿದ್ದು, ಹೇಮಂತ್ ಉಮೇಶನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಪೊಲೀಸರ ಸಮಯಪ್ರಜ್ಞೆ
ಹಲ್ಲೆಯಿಂದ ಕುಪಿತಗೊಂಡ ಉಮೇಶ್, ತಕ್ಷಣವೇ ತನ್ನ ಕೆಲವು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡು ಹೇಮಂತ್ ಗುಂಪಿನ ಮೇಲೆ ದಾಳಿ ನಡೆಸಲು ಮುಂದಾಗಿದ್ದನು. ಆದರೆ ಈ ಮಾಹಿತಿ ತಿಳಿದ ತಕ್ಷಣ ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್, 'ಹೇಮಂತ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ' ಎಂದು ದೂರು ನೀಡಿದ್ದರೆ, ಹೇಮಂತ್ ಜೊತೆಗಿದ್ದ ಯುವತಿ 'ಉಮೇಶ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ' ಎಂದು ಪ್ರತಿದೂರು ನೀಡಿದ್ದಾರೆ. ಪೊಲೀಸರು ಎರಡೂ ಕಡೆಯವರ ದೂರುಗಳನ್ನು ಸ್ವೀಕರಿಸಿದ್ದು, ಪ್ರತ್ಯೇಕವಾಗಿ ಎರಡು ಎಫ್.ಐ.ಆರ್ (FIR) ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


