ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ನಡವಳಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಆಗ್ನೇಯ ವಿಭಾಗದ ಠಾಣೆಗಳು ಹಾಗೂ ಎಸಿಪಿ ಕಚೇರಿಗಳಲ್ಲಿ ‘ಕ್ಯೂಆರ್‌ ಕೋಡ್‌’ ವ್ಯವಸ್ಥೆ ಅಳವಡಿಸಲಾಗಿದೆ. 

ಬೆಂಗಳೂರು (ಡಿ.16): ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ನಡವಳಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಆಗ್ನೇಯ ವಿಭಾಗದ ಠಾಣೆಗಳು ಹಾಗೂ ಎಸಿಪಿ ಕಚೇರಿಗಳಲ್ಲಿ ‘ಕ್ಯೂಆರ್‌ ಕೋಡ್‌’ ವ್ಯವಸ್ಥೆ ಅಳವಡಿಸಲಾಗಿದೆ. ಆಗ್ನೇಯ ವಿಭಾಗದ ಬಂಡೇಪಾಳ್ಯ ಠಾಣೆಯಲ್ಲಿ ಕ್ಯೂಆರ್‌ ಕೋಡ್‌ ಹಾಕಲಾಗಿದೆ. ಠಾಣೆಗೆ ಭೇಟಿ ನೀಡಿ ಮರಳುವ ವೇಳೆ ಠಾಣೆ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಜನರು ಅಭಿಪ್ರಾಯ ಹಂಚಿಕೊಳ್ಳಬಹುದು.

ಇತ್ತೀಚೆಗೆ ಭ್ರಷ್ಟಾಚಾರ ಆರೋಪದಡಿ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಡಿಸಿಪಿ ಡಾ.ಸಿ.ಕೆ.ಬಾಬಾ ಅಮಾನತುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸಲು ಆಗ್ನೇಯ ವಿಭಾಗದ ಎಲ್ಲ 14 ಠಾಣೆಗಳಲ್ಲಿ ಮತ್ತು ಎಸಿಪಿ ಕಚೇರಿಗಳಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಕ್ಯೂಆರ್‌ ಕೋಡ್‌ ವ್ಯವಸ್ಥೆ ಅಳವಡಿಸಲು ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಬಿಎಂಪಿ ಚುನಾವಣೆ ಇನ್ನೂ 4 ತಿಂಗಳು ಇಲ್ಲ, ಸರ್ಕಾರ ನಿರಾಳ

ಠಾಣೆಗೆ ಭೇಟಿ ನೀಡುವ ಜನರು, ಪೊಲೀಸರ ಸೇವೆ ಪಡೆದ ನಂತರ ಠಾಣೆ ಎದುರು ಅಳವಡಿಸಿರುವ ಕ್ಯೂಆರ್‌ ಕೋಡನ್ನು ಮೊಬೈಲ್‌ನಲ್ಲಿ ಸ್ಕಾ್ಯನ್‌ ಮಾಡಬೇಕು. ಲಿಂಕ್‌ ಲಭ್ಯವಾಗಿ ಅಲ್ಲಿ ಕೇಳುವ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯ ಬರೆಯಬೇಕು. ದೂರು ಸ್ವೀಕರಿಸಲು ಅಥವಾ ಎಫ್‌ಐಆರ್‌ ದಾಖಲಿಸಲು ಪೊಲೀಸರು ಲಂಚ ಕೇಳಿದರೇ? ಆಹವಾಲು ಸಲ್ಲಿಸಲು ತೆರಳಿದ್ದಾಗ ಪೊಲೀಸರ ವರ್ತನೆ ಹೇಗಿತ್ತು ಎಂಬ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಅಲ್ಲದೆ ಠಾಣೆ ವ್ಯವಸ್ಥೆ ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಸಲಹೆಯನ್ನು ನಾಗರಿಕರು ತಿಳಿಸಬಹುದಾಗಿದೆ. ಈ ವೇಳೆ ಪೊಲೀಸರ ಮೇಲೆ ಆರೋಪಗಳು ಕೇಳಿ ಬಂದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನರೊಂದಿಗೆ ಸೌಹಾರ್ದವಾಗಿ ವರ್ತಿಸಿ, ಪೊಲೀಸರಿಗೆ ಸೂಚನೆ: ವಾಹನ ತಪಾಸಣೆ ವೇಳೆ ಸಾರ್ವಜನಿಕರ ಜತೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಆಸ್ಪತ್ರೆಗೆ ತೆರಳುತ್ತಿರುವವರನ್ನು ಅನಗತ್ಯವಾಗಿ ಅಡ್ಡಗಟ್ಟಿ ಪರಿಶೀಲಿಸುವ ಅಗತ್ಯವಿಲ್ಲ. ರಾತ್ರಿ ವೇಳೆ ಓಡಾಡುವ ಸಾರ್ವಜನಿಕರ ಜತೆ ಗೌರವಯುತ ವರ್ತಿಸಿ ಅವರಿಗೆ ತಿಳಿವಳಿಕೆ ಹೇಳಬೇಕು. ಶಂಕಾಸ್ಪದ ವ್ಯಕ್ತಿಗಳು ಕಂಡುಬಂದರೆ ಎಂಸಿಸಿಟಿಎನ್‌ಎಸ್‌ ತಂತ್ರಾಂಶದಲ್ಲಿ ಬೆರಳಚ್ಚು ಪರಿಶೀಲನೆ ನಡೆಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುವಂತೆ ಸಿಬ್ಬಂದಿಗೆ ಡಿಸಿಪಿ ಸೂಚಿಸಿದ್ದಾರೆ.

ಇಂದು 100ಕ್ಕೂ ಅಧಿಕ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಎಚ್‌.ಡಿ.ಕುಮಾರಸ್ವಾಮಿ

ಕ್ಯೂಆರ್‌ ಕೋಡ್‌ ಇರುವ ಠಾಣೆಗಳು
* ಮಡಿವಾಳ ಉಪ ವಿಭಾಗ- ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್‌, ಆಡುಗೋಡಿ

* ಮೈಕೋ ಲೇಔಟ್‌ ಉಪ ವಿಭಾಗ- ತಿಲಕನಗರ, ಮೈಕೋ ಲೇಔಟ್‌, ಬೊಮ್ಮನಹಳ್ಳಿ, ಸದ್ದುಗುಂಟೆಪಾಳ್ಯ

* ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗ- ಎಲೆಕ್ಟ್ರಾನಿಕ್‌ ಸಿಟಿ, ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೆಪಾಳ್ಯ, ಬೇಗೂರು ಹಾಗೂ ಪರಪ್ಪನ ಅಗ್ರಹಾರ