Asianet Suvarna News Asianet Suvarna News

ಬಿಬಿಎಂಪಿ ಚುನಾವಣೆ ಇನ್ನೂ 4 ತಿಂಗಳು ಇಲ್ಲ, ಸರ್ಕಾರ ನಿರಾಳ

ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳಿಗೆ ನಡೆಯಬೇಕಿದ್ದ ಚುನಾವಣೆ ವಿಚಾರದಲ್ಲಿ ಸರ್ಕಾರಕ್ಕೆ ದೊಡ್ಡ ರಿಲೀಫ್‌ ಸಿಕ್ಕಿದೆ. ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದಿಂದ ಮತ್ತಷ್ಟು ದಿನಗಳ ಅವಕಾಶ ಸಿಕ್ಕಿದೆ. 

BBMP elections are not yet 4 months away says Supreme Court gvd
Author
First Published Dec 16, 2022, 7:22 AM IST

ನವದೆಹಲಿ (ಡಿ.16): ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳಿಗೆ ನಡೆಯಬೇಕಿದ್ದ ಚುನಾವಣೆ ವಿಚಾರದಲ್ಲಿ ಸರ್ಕಾರಕ್ಕೆ ದೊಡ್ಡ ರಿಲೀಫ್‌ ಸಿಕ್ಕಿದೆ. ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯದಿಂದ ಮತ್ತಷ್ಟು ದಿನಗಳ ಅವಕಾಶ ಸಿಕ್ಕಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಮಾ.31ರ ತನಕ ಗಡುವು ನೀಡಿದೆ. ನ್ಯಾಯಮೂರ್ತಿ ಅಬ್ದುಲ್‌ ನಾಸೀರ್‌ ಹಾಗೂ ನ್ಯಾ.ಹಿಮಾಕೊಹ್ಲಿ ಅವರಿದ್ದ ದ್ವಿಸದಸ್ಯ ಪೀಠದ ಮುಂದೆ ಗುರುವಾರ ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಚುನಾವಣೆ ನಡೆಸದಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಿತ್ತು. 

ಈ ವೇಳೆ ಕರ್ನಾಟಕ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಬೇಕಿದೆ. ಇದಕ್ಕಾಗಿ ನ್ಯಾ.ಭಕ್ತವತ್ಸಲಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಮಾಹಿತಿ ಮತ್ತು ಅಂಕಿ-ಅಂಶಗಳನ್ನು ಸಂಗ್ರಹಿಸುತ್ತಿದೆ. ಮೀಸಲಾತಿ ಬಗ್ಗೆ ವರದಿ ನೀಡಲು ಮತ್ತಷ್ಟು ಸಮಯ ಬೇಕು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಚುನಾವಣಾ ಆಯೋಗದ ವಕೀಲರು, ಸಕಾಲಕ್ಕೆ ನಡೆಯಬೇಕಿದ್ದ ಚುನಾವಣೆ ನಡೆದಿಲ್ಲ. ಇದರಿಂದ ತುಂಬ ವಿಳಂಬವಾಗುತ್ತಿದೆ ಎಂದರು.

ಬೆಂಗಳೂರು: ಈ ಬಾರಿ ಬಿಬಿಎಂಪಿ ಬಜೆಟ್‌ ಬರೀ 5,000 ಕೋಟಿ ರೂ..?

ಇದೇ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾಯಪೀಠ, ರಾಜಕೀಯ ಪ್ರಾತಿನಿಧ್ಯವಿಲ್ಲದೆ ಚುನಾವಣೆ ನಡೆಸಿದರೆ ಆ ಸಮುದಾಯಗಳು ಪ್ರಾತಿನಿಧ್ಯ ವಂಚಿತರಾಗುತ್ತಾರೆ. ಹಾಗಾಗಿ ಒಂದಷ್ಟುಸಮಯ ನೀಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಹಾಗಾಗಿ ನ್ಯಾಯಪೀಠ ಮಾ.31ರ ತನಕ ಸರ್ಕಾರಕ್ಕೆ ಗಡುವು ವಿಸ್ತರಣೆ ಮಾಡಿತು. 2019ರ ಸೆಪ್ಟಂಬರ್‌ಗೆ ಬಿಬಿಎಂಪಿ ಅವಧಿ ಮುಗಿದಿತ್ತು. ಆದರೂ ಈವರೆಗೆ ಚುನಾವಣೆ ನಡೆಯದಿರುವ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಸ್ತೆ ಗುಂಡಿ ಬಗ್ಗೆ ದೂರು ಬಂದರೆ ಕೇಸ್‌ ಹಾಕಿ: ನಗರದಲ್ಲಿನ ರಸ್ತೆ ಗುಂಡಿಗಳಿಂದ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡವರು ಮತ್ತು ಸಾವನ್ನಪ್ಪಿದ ಪ್ರಕರಣಗಳಲ್ಲಿ ದೂರು ದಾಖಲಿಸಲು ಬರುವ ಸಾರ್ವಜನಿಕರಿಗೆ ತಾಂತ್ರಿಕ ಕಾರಣಗಳನ್ನು ನೀಡದೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕು ಎಂದು ಗೃಹ ಇಲಾಖೆಗೆ ಹೈಕೋರ್ಟ್‌ ಸೂಚಿಸಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ರಸ್ತೆ ಗುಂಡಿಯಿಂದ ಅಪಘಾತಕ್ಕೆ ಒಳಗಾಗುವವರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲು ಬಂದಾಗ ಪೊಲೀಸ್‌ ಅಧಿಕಾರಿಗಳು ತಾಂತ್ರಿಕ ಕಾರಣಗಳನ್ನು ನೀಡಿ ವಾಪಸ್‌ ಕಳುಹಿಸಬಾರದು. ಘಟನೆ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

ಎಲ್ಲ ಸರ್ಕಾರಿ ಆಸ್ಪತ್ರೆ ಒಂದೇ ಆಡಳಿತ ವ್ಯವಸ್ಥೆಗೆ?: ಸಿಎಂ ತೀರ್ಮಾನ ಬಾಕಿ

ಮುಚ್ಚಿದ ರಸ್ತೆಗುಂಡಿಗಳ ಗುಣಮಟ್ಟಪರಿಶೀಲನೆ: ಜತೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು(ಎನ್‌ಎಚ್‌ಎಐ) ಮುಂದಿನ ಎಂಟು ವಾರಗಳಲ್ಲಿ ಮುಚ್ಚಿದ ರಸ್ತೆಗುಂಡಿಗಳ ಗುಣಮಟ್ಟಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಬೇಕು. ಈ ಸಂಬಂಧದ ಎಲ್ಲ ದಾಖಲೆಗಳ ಪ್ರತಿಗಳನ್ನು ಬಿಬಿಎಂಪಿ ವಕೀಲರು ಎನ್‌ಎಚ್‌ಎಐನ ಪರಿಶೀಲನಾ ಸಮಿತಿಗೆ ಲಭ್ಯವಾಗುವಂತೆ ಮಾಡಬೇಕು. ಪರಿಶೀಲನೆ ನಡೆಸಿದ ವರದಿಯನ್ನು ಎನ್‌ಎಚ್‌ಎಐ ಅಧಿಕಾರಿಗಳು 2023ರ ಫೆಬ್ರವರಿ 3ರಂದು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು. ಹಾಗೆಯೇ ಅರ್ಜಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯನ್ನು ಪ್ರತಿವಾದಿಯನ್ನಾಗಿಸಲು ಅರ್ಜಿದಾರರಿಗೆ ಸೂಚನೆ ನೀಡಿತು.

Follow Us:
Download App:
  • android
  • ios