ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ರೌಡಿ ಶೀಟರ್ ಯಶಸ್ವಿನಿ ದೂರು ನೀಡಿದ್ದಾರೆ. ಆಡಿಯೋ ಸಾಕ್ಷ್ಯಗಳ ಸಹಿತ ದೂರು ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಬೆಂಗಳೂರು: ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ರೌಡಿ ಶೀಟರ್‌ ಯಶಸ್ವಿನಿ ದೂರು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಪಾಪಣ್ಣ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೂರಿನಲ್ಲಿ ಏನಿದೆ?

ದೂರುದಾರೆಯಾಗಿರುವ ಮಹಿಳಾ ರೌಡಿಶೀಟರ್, ಹಲವು ದಿನಗಳಿಂದ ನನಗೆ ಇನ್ಸ್‌ಪೆಕ್ಟರ್ ಪಾಪಣ್ಣ ಕಿರುಕುಳ ನೀಡುತ್ತಿದ್ದಾರೆ. ಪ್ರತಿ ದಿನ ಮೊಬೈಲ್‌ಗೆ ನಿರಂತರವಾಗಿ ಕರೆ ಮಾಡುವುದು ಹಾಗೂ ಅಶ್ಲೀಲ ಸಂದೇಶ ಕಳುಹಿಸುವುದು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಇನ್ಸ್‌ಪೆಕ್ಟರ್ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಯಶಸ್ವಿನಿ ಆರೋಪಿಸಿದ್ದರು. ಮಾತ್ರವಲ್ಲ ವಾಟ್ಸ್ಆಪ್ ಮೂಲಕ ಕಳುಹಿಸಿದ್ದ ಸಂದೇಶಗಳು ಹಾಗೂ ಫೋನ್ ಸಂಭಾಷಣೆಯ ಆಡಿಯೋ ದಾಖಲೆಗಳನ್ನು ಸಹ ಸಾಕ್ಷ್ಯವಾಗಿ ಒದಗಿಸಿದ್ದರು.

ನನ್ನ ಸರ್ ಅಂತ ಕರೆಯಬೇಡ. ನಾನು ನಿನಗೆ ಇನ್ಸ್‌ಪೆಕ್ಟರ್‌ ಅಲ್ಲ. ಬಾಯ್ ಫ್ರೆಂಡ್ ಎಂದು ಪಾಪಣ್ಣ ಹೇಳುತ್ತಾರೆ. ನನ್ನ ಮೇಲೆ ಬಸವನಗುಡಿ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಹೀಗಿರುವಾಗ ನನ್ನ ಜತೆ ಇನ್ಸ್‌ಪೆಕ್ಟರ್‌ಗೆ ಯಾವ ರೀತಿಯ ಸ್ನೇಹ ಇರಲು ಸಾಧ್ಯವಿದೆ? ಎಂದು ದೂರಿನಲ್ಲಿ ಪ್ರಶ್ನಿಸಿದ್ದರು.

2017ರಲ್ಲಿ ಬಸವನಗುಡಿ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದಾಗ ನನಗೆ ಪಾಪಣ್ಣ ಪರಿಚಯವಾಗಿದ್ದರು. ಆಗಲೂ ನನ್ನನ್ನು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈಗ ಕೋಣನಕುಂಟೆ ಠಾಣೆಗೆ ವರ್ಗಾವಣೆಯಾದ ಬಳಿಕವು ನನಗೆ ಅವರಿಂದ ಕಿರುಕುಳ ತಪ್ಪಿಲ್ಲ. ಪ್ರತಿ ದಿನ ಕರೆ ಮಾಡಿ ನಿಮ್ಮ ಮನೆಗೆ ಬರುತ್ತೇನೆ. ಏಕಾಂತವಾಗಿ ಸಮಯ ಕಳೆಯಬೇಕು ಎಂದೆಲ್ಲ ಪಾಪಣ್ಣ ಮಾತನಾಡುತ್ತಾರೆ. ಈ ಹಿಂಸೆ ಸಹಿಸಲಾರದೆ ನ್ಯಾಯ ಕೋರಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಕೂಡಲೇ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಯಶಸ್ವಿನಿ ಆಗ್ರಹಿಸಿದ್ದರು.

ಆಡಿಯೋ ವೈರಲ್

ಈ ಆರೋಪಗಳು ಗಂಭೀರವಾಗಿರುವುದರಿಂದ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತರು ಹಿರಿಯ ಪೊಲೀಸ್ ಅಧಿಕಾರಿಗೆ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಆರೋಪಿತ ಇನ್ಸ್‌ಪೆಕ್ಟರ್ ಮತ್ತು ದೂರುದಾರೆಯ ನಡುವೆ ನಡೆದಿರಬಹುದಾದ ಸಂಭಾಷಣೆಯ ಕೆಲವು ಭಾಗಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದೂ ಪ್ರಕರಣಕ್ಕೆ ಮತ್ತಷ್ಟು ಗಮನ ಸೆಳೆಯುತ್ತಿದೆ.

ಇದೀಗ, ಈ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಲು ಇಲಾಖಾ ಮಟ್ಟದಲ್ಲಿ ತನಿಖೆ ಪ್ರಾರಂಭವಾಗಿದ್ದು, ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಆರೋಪಗಳು ಸಾಬೀತಾದಲ್ಲಿ, ಸಂಬಂಧಿತ ಅಧಿಕಾರಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.