ಬೆಂಗಳೂರು :  ‘ಯಾವುದೇ ಶಿಫಾರಸುಗಳಿಲ್ಲದೆ ನಾಗರಿಕರ ದೂರುಗಳನ್ನು ಠಾಣಾ ಮಟ್ಟದಲ್ಲಿ ಇತ್ಯರ್ಥಗೊಳಿಸುವ ಜನ ಸ್ನೇಹಿ ವ್ಯವಸ್ಥೆ ಜಾರಿಗೊಳಿಸುವೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುತ್ತಿರುವ ವಂಚಕ ಕಂಪನಿಗಳಿಗೆ ಲಗಾಮು ಹಾಕುವೆ..!’

ಇವು ನಗರದ ನೂತನ ಪೊಲೀಸ್‌ ಆಯುಕ್ತರಾಗಿ ಸೋಮವಾರ ಇಳಿ ಸಂಜೆ ಅಧಿಕಾರ ಸ್ವೀಕರಿಸಿದ ಬಳಿಕ ಅಲೋಕ್‌ ಕುಮಾರ್‌ ಅವರು ನಾಗರಿಕರಿಗೆ ನೀಡಿದ ಮೊದಲ ಭರವಸೆಗಳು.

ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ, ಠಾಣಾ ಹಂತದಲ್ಲಿ ಸಮಸ್ಯೆಗಳು ಬಗೆಹರಿದರೆ ಜನರು, ತಮ್ಮ ಅಹವಾಲು ಹೊತ್ತು ಹಿರಿಯ ಅಧಿಕಾರಿಗಳ ಕಚೇರಿಗೆ ಅಲೆಯುವುದು ತಪ್ಪುತ್ತದೆ. ಈ ಜನ ಸ್ನೇಹಿ ವ್ಯವಸ್ಥೆಯನ್ನು ಮೊದಲ ಆದ್ಯತೆಯಾಗಿ ಅನುಷ್ಠಾನಗೊಳಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಆಮಿಷವೊಡ್ಡಿ ಹಣ ದೋಚುವ ಕಂಪನಿಗಳು ಹಾವಳಿ ಹೆಚ್ಚುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಸಹ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

ಎಡಿಜಿಪಿ ಹುದ್ದೆಗೆ ಮುಂಬಡ್ತಿಯಾದ ದಿನವೇ ಆಯುಕ್ತರಾಗಿ ನೇಮವಾಗಿದ್ದು ನಿರೀಕ್ಷಿತವೇ ಅನಿರೀಕ್ಷಿತವೇ?

-ಸರ್ಕಾರವು ನನ್ನ ಮೇಲೆ ವಿಶ್ವಾಸವಿಟ್ಟು ಬಹುದೊಡ್ಡ ಜವಾಬ್ದಾರಿ ವಹಿಸಿದೆ. ಆ ನಂಬಿಕೆಗೆ ಧಕ್ಕೆ ಉಂಟಾಗದಂತೆ ಸಮರ್ಥವಾಗಿ ನಿಭಾಯಿಸುತ್ತೇನೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಡಿಜಿ-ಐಜಿಪಿ ಅವರ ಸಲಹೆ ಪಡೆದು ನಗರಕ್ಕೆ ಉತ್ತಮ ಸೇವೆ ಸಲ್ಲಿಸುತ್ತೇನೆ.

ನಿಮ್ಮನ್ನು ಆಯುಕ್ತರನ್ನಾಗಿ ನೇಮಿಸಿದ ಸರ್ಕಾರದ ನಿರ್ಧಾರಕ್ಕೆ ಕೆಲವು ಹಿರಿಯ ಐಪಿಎಸ್‌ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾತಿದೆ?

-ವರ್ಗಾವಣೆ ಮತ್ತು ನೇಮಕಾತಿಗಳು ಸರ್ಕಾರದ ತೀರ್ಮಾನವಾಗಿರುತ್ತವೆ. ನಾವು ಸರ್ಕಾರದ ಆದೇಶ ಪಾಲನೆ ಮಾಡುವವರು. ಸರ್ಕಾರದ ನಿರ್ಧಾರದಂತೆ ನಾನು ನಡೆದುಕೊಳ್ಳುತ್ತೇನೆ. ನನ್ನನ್ನು ಆಯುಕ್ತರಾಗಿ ನೇಮಿಸಿದ್ದಕ್ಕೆ ಹಿರಿಯ ಅಧಿಕಾರಿಗಳು ಅಸಮಾಧಾನ ಹೊಂದಿರುವ ಸಂಗತಿ ನನಗೆ ಗೊತ್ತಿಲ್ಲ.

ನಗರದ ರಕ್ಷಣೆ ಮತ್ತು ಅಪರಾಧ ನಿಯಂತ್ರಣಕ್ಕೆ ಹಾಕಿಕೊಂಡಿರುವ ಕಾರ್ಯಕ್ರಮಗಳೇನು?

-ಸದ್ಯ ನಿರ್ದಿಷ್ಟವಾದ ಯಾವುದೇ ಕಾರ್ಯಕ್ರಮಗಳು ನಾನು ಹೊಂದಿಲ್ಲ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ, ಜಂಟಿ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಆಯುಕ್ತ ಹಾಗೂ ಸಿಸಿಬಿ ಮುಖ್ಯಸ್ಥ ಹೀಗೆ ನಗರದ ಪೊಲೀಸ್‌ ವ್ಯವಸ್ಥೆಯಲ್ಲಿ ವಿವಿಧ ಹೊಣೆಗಾರಿಕೆಯನ್ನು ನಿರ್ವಹಿಸಿದ್ದೇನೆ. ಹೀಗಾಗಿ ನನಗೆ ನಗರ ಅಪರಿಚಿತವೇನು ಅಲ್ಲ. ಆ ಅನುಭವದ ಆಧಾರದ ಮೇರೆಗೆ ಪೊಲೀಸ್‌ ವ್ಯವಸ್ಥೆ ಸುಧಾರಣೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ.

ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ?

-ಠಾಣೆಗಳ ಸುಧಾರಣೆಯೇ ಮೊದಲ ಆದ್ಯತೆಯಾಗಿದೆ. ಕೆಳಹಂತದಲ್ಲೇ ಯಾವುದೇ ಶಿಫಾರಸುಗಳಿಲ್ಲದೆ ಜನರ ನೋವಿಗೆ ಸ್ಪಂದನೆ ಸಿಗುವಂತಾಗಬೇಕು. ಠಾಣಾ ಮಟ್ಟದಲ್ಲಿ ಜನರ ದೂರುಗಳು ಇತ್ಯರ್ಥವಾದರೆ, ಅವರು ದೂರು ಹೊತ್ತು ಹಿರಿಯ ಅಧಿಕಾರಿಗಳ ಕಚೇರಿ ಅಲೆಯುವುದು ತಪ್ಪುತ್ತದೆ. ಹೀಗಾಗಿ ಠಾಣೆಗಳಲ್ಲಿ ‘ಜನಸ್ನೇಹಿ’ ವಾತಾವರಣ ಸೃಷ್ಟಿಸಲು ಅಧಿಕಾರಿಗಳ ಜತೆ ಸಮಾಲೋಚಿಸಿ ಕ್ರಮ ಜರುಗಿಸುತ್ತೇನೆ.

ಸಾರ್ವಜನಿಕರ ಹಣ ದೋಚುತ್ತಿರುವ ವಂಚಕ ಕಂಪನಿಗಳಿಗೆ ಕಡಿವಾಣ ಬೀಳಬಹುದೇ?

-ಇತ್ತೀಚಿನ ವರ್ಷಗಳಲ್ಲಿ ವೈಟ್‌ ಕಾಲರ್‌ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಆ್ಯಂಬಿಡೆಂಟ್‌, ಅಜ್ಮೇರಾ, ಮಾಂರ್ಗೋಲಿಯಾ ಈಗ ಐಎಂಎ ಹೀಗೆ ಹತ್ತಾರು ನಕಲಿ ಕಂಪನಿಗಳಿಂದ ಇದುವರೆಗೆ ನಗರದಲ್ಲಿ 1.25 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. ಇಂಥ ಮೋಸದ ಕಂಪನಿಗಳ ವಿರುದ್ಧ ಪೊಲೀಸರು ನೇರವಾಗಿ ಕ್ರಮ ಜರುಗಿಸಲು ಕಾನೂನಿನ ತೊಡಕಿದೆ. ಹೀಗಾಗಿ ಸಂಬಂಧಿಸಿದ ಇಲಾಖೆಗಳ ಜೊತೆ ಸಮನ್ವಯತೆ ಸಾಧಿಸಿ, ಮೋಸದ ಕಂಪನಿಗಳು ಇನ್ಮುಂದೆ ನಗರದಲ್ಲಿ ಜನ್ಮ ತಾಳದಂತೆ ಕ್ರಮ ಜರುಗಿಸುತ್ತೇನೆ.

ಸಾರ್ವಜನಿಕರಿಗೆ ಏನು ಸಂದೇಶ ಕೊಡುತ್ತೀರಿ?

-ಅನ್ಯಾಯದ ವಿರುದ್ಧ ನಿರ್ಭೀತಿಯಿಂದ ಪೊಲೀಸರಿಗೆ ಜನರು ದೂರು ಕೊಡಬೇಕು. ನಾನು ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅವಧಿಯಲ್ಲಿ ವಂಚಕ ಕಂಪನಿಯೊಂದರ ವಿರುದ್ಧ ದೂರು ನೀಡುವಂತೆ ಮೋಸಕ್ಕೊಳಗಾದವರಿಗೆ ಕೋರಿದರೂ ದೂರು ನೀಡಲಿಲ್ಲ. ಈ ರೀತಿಯ ಮನೋಭಾವನೆಯೇ ಕ್ರಿಮಿನಲ್‌ಗಳಿಗೆ ಅನುಕೂಲವಾಗುತ್ತದೆ. ಹಾಗಾಗಿ ಜನರು ಮುಕ್ತವಾಗಿ ಅನ್ಯಾಯದ ವಿರುದ್ಧ ಪೊಲೀಸರಿಗೆ ಅಹವಾಲು ಸಲ್ಲಿಸಲಿ. ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಜನರ ಸಹಕಾರ ಸಹ ಬಹುಮುಖ್ಯವಾಗಿದೆ.

ಗಿರೀಶ್‌ ಮಾದೇನಹಳ್ಳಿ