ಯಲಹಂಕದಲ್ಲಿ ಪತ್ನಿ ಅಮೀನಾಳನ್ನು ಕೊಂದ ಆರೋಪದ ಮೇಲೆ ಪತಿ ಸೈದುಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವೈವಾಹಿಕ ಕಲಹ ಮತ್ತು ಅಕ್ರಮ ಸಂಬಂಧದ ಅನುಮಾನ ಈ ಘಟನೆಗೆ ಕಾರಣ ಎನ್ನಲಾಗಿದೆ. ಮರದ ರಿಪೀಸ್‌ನಿಂದ ಹಲ್ಲೆ ಮಾಡಿ ಪತ್ನಿಯನ್ನು ಕೊಂದ ಆರೋಪಿ ಪರಾರಿಯಾಗಿದ್ದನು.
ಬೆಂಗಳೂರು: ಯಲಹಂಕ ಉಪನಗರದಲ್ಲಿ ನಡೆದ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಆರೋಪಿ ಪತಿ ಸೈದುಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಅಮೀನಾ ಜೊತೆ ಜಗಳವಾಡಿ ಅಕ್ರಮ ಸಂಬಂಧದ ಬಗ್ಗೆ ಅನುಮಾನಗೊಂಡಿದ್ದು ವೈವಾಹಿಕ ಕಲಹವೇ ಈ ಘಟನೆಯ ಕಾರಣವಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಆರೋಪಿ ಸೈದುಲ್ 2019ರಲ್ಲಿ ಅಮೀನಾಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಈ ಮದುವೆಯ ಸಮಯದಲ್ಲಿ ತನ್ನ ಮೊದಲ ಪತ್ನಿಯ ಬಗ್ಗೆ ಅವನು ಮುಚ್ಚಿಟ್ಟಿದ್ದನು. ನಂತರ ಅಮೀನಾಳಿಗೆ ಈ ವಿಷಯ ತಿಳಿದು ದಾಂಪತ್ಯ ಜೀವನದಲ್ಲಿ ಗಂಭೀರ ಭಿನ್ನಾಭಿಪ್ರಾಯಗಳು ಶುರುವಾದವು. ಇಬ್ಬರ ನಡುವೆ ಗಲಾಟೆ ನಡೆದಿದೆ.
ಸೆಪ್ಟೆಂಬರ್ 2ರಂದು ಇವರಿಬ್ಬರ ನಡುವೆ ಭಾರೀ ಜಗಳ ನಡೆದಿತ್ತು. ಆಗ ಅಮೀನಾಳ ಕುಟುಂಬಸ್ಥರು ಮಧ್ಯಪ್ರವೇಶಿಸಿ ಬುದ್ಧಿವಾದ ಹೇಳಿ ವಿಷಯವನ್ನು ಶಾಂತಗೊಳಿಸಿದ್ದರು. ಆದರೆ ಮುಂದಿನ ದಿನವೂ ಕಲಹ ತೀವ್ರಗೊಂಡು, ಸೈದುಲ್ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಮರದ ರಿಪೀಸ್‌ನಿಂದ ಹಲ್ಲೆ ಮಾಡಿದ ಪರಿಣಾಮ ಅಮೀನಾ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದಳು.
ಘಟನೆಯ ಬಳಿಕ ಆರೋಪಿ ಸೈದುಲ್ ಸ್ಥಳದಿಂದ ಪರಾರಿಯಾಗಿ ರಾಜಮಂಡ್ರಿಗೆ ಓಡಿಹೋದ. ಇದಾದ ನಂತರ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಕೊನೆಗೆ ಆತನನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ಯಶಸ್ವಿಯಾದರು. ಪ್ರಸ್ತುತ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣವನ್ನು ಮುಂದುವರೆಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಸಜೀತ್, ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಆಗಿರುತ್ತೆ. ಅಮೀನಾ ಎಂಬ 35ವರ್ಷದ ಮಹಿಳೆ ಕೊಲೆಯಾದ ದುರ್ದೈವಿ. ಆಕೆಯ ಗಂಡನೇ ಆಕೆಯನ್ನ ಕೊಲೆ ಮಾಡಿರೋದು ಗೊತ್ತಾಗಿದೆ. ಆರೋಪಿತ ಮೊದಲನೇ ಮದುವೆ ಮುಚ್ಚಿಟ್ಟು ಅಮೀನಾಳನ್ನ ಮದುವೆ ಆಗಿರ್ತಾನೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಜಗಳದ ನಡುವೆ ಮರದ ರಿಪೀಸ್ ಪಟ್ಟಿಯಿಂದ ಆಕೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ವೆಸ್ಟ್ ಬೆಂಗಾಲ್ ಮೂಲದಾತ ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ. ಕೂಲಿ ಕೆಲಸ ಮಾಡುವ ಸಲುವಾಗಿ ಬಂದು ಬಾಡಿಗೆ ಮನೆ ಪಡೆದಿದ್ದರು. ಜಗಳ ತೆಗೆದು ಕೊಲೆ ಮಾಡಿ ರಾಜಮಂಡ್ರಿಗೆ ಎಸ್ಕೇಪ್ ಆಗಿದ್ದ. ಸದ್ಯ ಆತನನ್ನ ಬಂಧಿಸಿ ತನಿಖೆ ಮುಂದುವರೆಸೆಲಾಗಿದೆ ಎಂದರು.
