ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ, ಈ ಹಿಂದೆ ಘೋಷಿಸಲಾಗಿದ್ದ ಸಂಚಾರ ನಿರ್ಬಂಧದ ಆದೇಶವನ್ನು ಬೆಂಗಳೂರು ಸಂಚಾರ ಪೊಲೀಸರು ಹಿಂಪಡೆದಿದ್ದು, ವಾಹನ ಸವಾರರು ಎಂದಿನಂತೆ ಮೇಲ್ಸೇತುವೆ ಬಳಸಬಹುದಾಗಿದೆ.

ಬೆಂಗಳೂರು (ಏ.11): ಬೆಂಗಳೂರಿನಿಂದ ನೆಲಮಂಗಲಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಸಂಚಾರ ಬಂದ್ ಕುರಿತಾದ ತನ್ನ ನಿರ್ಧಾರವನ್ನು ಬೆಂಗಳೂರು ಸಂಚಾರ ಪೊಲೀಸರು ಹಿಂಪಡೆದಿದ್ದಾರೆ. ಕಾರಣಾಂತರಗಳಿಂದ ಉದ್ದೇಶಿತ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದ್ದು, ಫ್ಲೈ ಓವರ್ ಮೇಲೆ ಎಂದಿನಂತೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಪರಿಷ್ಕೃತ ಆದೇಶದಲ್ಲೇನಿದೆ?

ಪೀಣ್ಯ ಫ್ಲೈ ಓವರ್‌ನಲ್ಲಿನ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಅಂತಿಮ ಹಂತದ ‘ಲೋಡ್ ಟೆಸ್ಟಿಂಗ್’ ನಡೆಸಲು ತೀರ್ಮಾನಿಸಿತ್ತು. ಈ ಕಾರಣಕ್ಕಾಗಿ ದಿನಾಂಕ 13-04-2026ರ ಬೆಳಿಗ್ಗೆ 5:00 ಗಂಟೆಯಿಂದ ದಿನಾಂಕ 17-04-2026ರ ಬೆಳಿಗ್ಗೆ 11:00 ಗಂಟೆಯವರೆಗೆ ಮೇಲ್ಸೇತುವೆಯ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಈ ಮೊದಲು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು.

ಆದರೆ, ಈಗ ಸಂಚಾರ ಪೊಲೀಸರು ಪರಿಷ್ಕೃತ ಪ್ರಕಟಣೆಯನ್ನು ಹೊರಡಿಸಿದ್ದು, 'ಕೆಲವು ಕಾರಣಾಂತರಗಳಿಂದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹೀಗಾಗಿ, ಈ ಹಿಂದೆ ಘೋಷಿಸಲಾಗಿದ್ದ ಸಂಚಾರ ನಿರ್ಬಂಧದ ಆದೇಶವನ್ನು ಹಿಂಪಡೆಯಲಾಗಿದೆ. ವಾಹನ ಸವಾರರು ಎಂದಿನಂತೆ ಫ್ಲೈ ಓವರ್ ಬಳಸಬಹುದು' ಎಂದು ತಿಳಿಸಿದ್ದಾರೆ.

ಸವಾರರಿಗೆ ನಿರಾಳ:

ಪೀಣ್ಯ ಫ್ಲೈ ಓವರ್ ಬೆಂಗಳೂರಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ತುಮಕೂರು ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳಿಗೆ ಇದು ಆಸರೆಯಾಗಿದೆ. ಐದು ದಿನಗಳ ಕಾಲ ಫ್ಲೈ ಓವರ್ ಬಂದ್ ಆಗಲಿದೆ ಎಂಬ ಸುದ್ದಿಯಿಂದ ವಾಹನ ಸವಾರರು ಆತಂಕಕ್ಕೊಳಗಾಗಿದ್ದರು. ಕೆಳ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಬಹುದು ಎಂಬ ಭೀತಿ ಇತ್ತು. ಆದರೆ ಈಗ ಪೊಲೀಸರು ಬಂದ್ ಆದೇಶವನ್ನು ರದ್ದುಗೊಳಿಸಿರುವುದರಿಂದ ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ಸದ್ಯಕ್ಕೆ ಯಾವುದೇ ನಿರ್ಬಂಧವಿಲ್ಲದೆ ಎಲ್ಲಾ ಮಾದರಿಯ ವಾಹನಗಳು ಮೇಲ್ಸೇತುವೆಯ ಮೇಲೆ ಸಂಚರಿಸಬಹುದಾಗಿದೆ. ಲೋಡ್ ಟೆಸ್ಟಿಂಗ್ ನಡೆಸುವ ಮುಂದಿನ ದಿನಾಂಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಂಚಾರಿ ಪೊಲೀಸರು ಮುಂದಿನ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ಫ್ಲೈ ಓವರ್ ಬಂದ್ ಮುಂದೂಡಿಕೆ ಯಾಕೆ?

ಬೆಂಗಳೂರು ಸಂಚಾರ ಪೊಲೀಸ್ ವಿಭಾಗದಿಂದ ಇದೀಗ ಏಕಾಏಕಿ ಸಂಚಾರ ನಿರ್ಬಂಧ ಆದೇಶವನ್ನು ಮುಂದೂಡಿಕೆ ಮಾಡುವುದಕ್ಕೆ ದೊಡ್ಡ ಕಾರಣವೇ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಮೇ 15ರಂದು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ಫ್ಲೈ ಓವರ್ ಅನ್ನು ಮುಚ್ಚುವ ಮೂಲಕ ಜನರ ಪ್ರಯಾಣಕ್ಕೆ ಅನಾನುಕೂಲ ಮಾಡಿದರೆ ಟ್ರಾಫಿಕ್ ಹೆಚ್ಚಾಗುತ್ತದೆ. ಆದ್ದರಿಂದ ಪ್ರಧಾನಿ ಮೋದಿ ಅವರು ಬಂದು ಹೋಗುವವರೆಗೆ ಅಂದರೆ ಏ.13ರಿಂದ ಏ.17ರವರೆಗೆ ಇದ್ದ ಬಂದ್ ಆದೇಶವನ್ನು ತಾತ್ಕಾಲಿಕವಾಗಿ ಹಿಂಪಡೆದು, ಮುಂದೂಡಿಕೆ ಮಾಡಲಾಗಿದೆ ಎಂದು ಮೂಲಗಳ ಮಾಹಿತಿಯಿಂದ ತಿಳಿದುಬಂದಿದೆ.