ಗಣರಾಜ್ಯೋತ್ಸವದಂದು ಬೆಂಗಳೂರು ಮೆಟ್ರೋ ಬೆಳಿಗ್ಗೆ 6 ಗಂಟೆಗೆ ಸಂಚಾರ ಆರಂಭಿಸಲಿದೆ. ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಹೆಚ್ಚುವರಿ 20 ಟ್ರಿಪ್‌ಗಳನ್ನು ಓಡಿಸಲಾಗುವುದು.

ಬೆಂಗಳೂರು (ಜ.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ 2025ರ ಅಂಗವಾಗಿ ಜ.26ರ ಭಾನುವಾರದಂದು ಮೆಟ್ರೋ ಸಂಚಾರವನ್ನು ಬೆಳಗ್ಗೆ 6 ಗಂಟೆಗೆ ಆರಂಭಿಸಲಾಗುತ್ತದೆ. ಜೊತೆಗೆ, ಗಣರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೋಗಲು ಅನುಕೂಲ ಆಗುವಂತೆ ಹೆಚ್ಚುವರಿ 20 ಟ್ರಿಪ್ ಮೆಟ್ರೋ ರೈಲು ಸಂಚಾರ ಮಾಡಲಿವೆ. 

Add Asianetnews Kannada as a Preferred SourcegooglePreferred

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿ.(ಬಿಎಂಆರ್‌ಸಿಎಲ್), ಗಣರಾಜ್ಯೋತ್ಸವದ ಅಂಗವಾಗಿ, ಜನವರಿ 26, 2025ರ ಭಾನುವಾರದಂದು, ಮೆಟ್ರೋ ರೈಲು ಸೇವೆಗಳು ಬೆಳಿಗ್ಗೆ 07:00 ಗಂಟೆಯ ಬದಲಿಗೆ 06:00 ಗಂಟೆಗೆ ಎಲ್ಲಾ ನಾಲ್ಕು ಟರ್ಮಿನಲ್ಗಳಿಂದ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಪ್ರಾರಂಭವಾಗುತ್ತವೆ.

ಲಾಲ್‌ಬಾಗ್ ಪುಷ್ಪ ಪ್ರದರ್ಶನ ಮತ್ತು ಮಾದಾವರದ ಬಿಐಇಸಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ನಿಗಮವು ಈ ದಿನ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ 20 ಹೆಚ್ಚುವರಿ ಟ್ರಿಪ್‌ಗಳನ್ನು ನಡೆಸುತ್ತದೆ. ಇದಕ್ಕಾಗಿ ಸಾರ್ವಜನಿಕರು ಲಾಲ್‌ಬಾಗ್ ಮೆಟ್ರೋ ನಿಲ್ದಾಣಕ್ಕೆ ಟೋಕನ್‌ಗಳು, ಸ್ಮಾರ್ಟ್ ಕಾರ್ಡ್ (ಸಿಎಸ್‌ಸಿ), ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಮತ್ತು ಕ್ಯೂಆರ್ ಟಿಕೆಟ್‌ಗಳನ್ನು ಬಳಸಿ ಹಿಂತಿರುಗಬಹುದು.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ದರ ಏರಿಕೆ ಬೆನ್ನಲ್ಲೇ, ಹೈದರಾಬಾದ್ ನಲ್ಲಿ ಬಸ್‌&ನಷ್ಟದಲ್ಲಿರುವ ಮೆಟ್ರೋ ದರ ಹೆಚ್ಚಳದ ಚಿಂತನೆ!

ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ, ನಿಗಮವು ಟೋಕನ್‌ಗಳ ಬದಲಿಗೆ ಪ್ರಯಾಣಿಕರ ತ್ವರಿತ ಚಲನೆಗಾಗಿ ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 08.00 ಗಂಟೆಯವರೆಗೆ ಫ್ಲಾಟ್ ರೂ.30 ಪೇಪರ್ ಟಿಕೆಟ್‌ಗಳನ್ನು ವಿತರಿಸುತ್ತದೆ. ಇದನ್ನು ನಗದು ಪಾವತಿಸಿ ಖರೀದಿಸಬಹುದು. ಖರೀದಿಸಿದ ದಿನದಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಪೇಪರ್ ಟಿಕೆಟ್‌ಗಳು ಮಾತ್ರ ಮಾನ್ಯವಾಗಿರುತ್ತವೆ. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಈ ಅವಧಿಯಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ. ನಮ್ಮ ಮೆಟ್ರೋದ ಎಲ್ಲಾ ಪ್ರಯಾಣಿಕರು, ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಬಿಎಂಆರ್‌ಸಿಎಲ್ ಕೋರಿದೆ.