ಬೆಂಗಳೂರು ಮೆಟ್ರೋ ಮತ್ತು ಬಿಎಂಟಿಸಿ ಜಂಟಿಯಾಗಿ ಜುಲೈ 6 ರಿಂದ ಆರು ಹೊಸ 'ಮೆಟ್ರೋ ಫೀಡರ್ ಬಸ್' ಸೇವೆಗಳನ್ನು ಆರಂಭಿಸಿವೆ. ಈ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್. ಪುರಂನಂತಹ ನಿಲ್ದಾಣಗಳಿಂದ ಕಚೇರಿ ಮತ್ತು ಮನೆಗಳಿಗೆ 'ಫಸ್ಟ್ ಅಂಡ್ ಲಾಸ್ಟ್ ಮೈಲ್' ಸಂಪರ್ಕವನ್ನು ಸುಲಭಗೊಳಿಸುತ್ತವೆ.
ಬೆಂಗಳೂರು (ಜು.06): ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ 'ಫಸ್ಟ್ ಅಂಡ್ ಲಾಸ್ಟ್ ಮೈಲ್' ಸಂಪರ್ಕವನ್ನು ಸುಧಾರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಹೆಜ್ಜೆ ಇಟ್ಟಿವೆ. ಮೆಟ್ರೋ ನಿಲ್ದಾಣಗಳಿಂದ ಕಚೇರಿ ಹಾಗೂ ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ಆರು ಹೊಸ 'ಮೆಟ್ರೋ ಫೀಡರ್ ಬಸ್' ಸೇವೆಗಳನ್ನು ಜುಲೈ 6 ರಿಂದ ಆರಂಭಿಸಲಾಗಿದೆ.
ಸಂಪರ್ಕ ಕ್ರಾಂತಿ:
ಈ ಜಂಟಿ ಉಪಕ್ರಮದಡಿ ಒಟ್ಟು 06 ವಿಶೇಷ ಫೀಡರ್ ಬಸ್‌ಗಳು ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ, ಕೆ.ಆರ್. ಪುರ ಮತ್ತು ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಸತಿ ಪ್ರದೇಶಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಉದ್ಯೋಗ ಕೇಂದ್ರಗಳೊಂದಿಗೆ ಸಂಪರ್ಕಿಸಲಿವೆ. ಇದರಿಂದ ಮೆಟ್ರೋ ಇಳಿದ ನಂತರ ಆಟೋ ಅಥವಾ ಕ್ಯಾಬ್‌ಗಳಿಗಾಗಿ ಕಾಯುವ ಕಿರಿಕಿರಿ ತಪ್ಪಲಿದೆ.
ಪ್ರಮುಖ ಮಾರ್ಗ ಮತ್ತು ಸಮಯ:
ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ನಡುವೆ ಸಂಚರಿಸುವ ಬಸ್ ಮಾರ್ಗವು ಐಟಿ ಉದ್ಯೋಗಿಗಳಿಗೆ ವರದಾನವಾಗಲಿದೆ.
ಮಾರ್ಗ: ವಿಪ್ರೋ ಗೇಟ್ - ಕೊನಪ್ಪನ ಅಗ್ರಹಾರ - ಹೊಸ ರಸ್ತೆ - ಹರಳೂರು - ಸರ್ಜಾಪುರ ರಸ್ತೆ ಜಂಕ್ಷನ್ - ಕಾಡುಬೀಸನಹಳ್ಳಿ - ಮಾರ್ತಹಳ್ಳಿ ಸೇತುವೆ - ದೊಡ್ಡನೆಕ್ಕುಂದಿ - ಮಹದೇವಪುರ - ಕೆ.ಆರ್. ಪುರಂ ರೈಲು ನಿಲ್ದಾಣ - ಟಿನ್ ಫ್ಯಾಕ್ಟರಿ.
ಸಮಯ: ಬೆಳಿಗ್ಗೆ 05:30 ರಿಂದ ರಾತ್ರಿ 09:10 ರವರೆಗೆ ನಿರಂತರವಾಗಿ ಈ ಬಸ್‌ಗಳು ಲಭ್ಯವಿರುತ್ತವೆ. ಪ್ರತಿ 30 ರಿಂದ 40 ನಿಮಿಷಗಳ ಅಂತರದಲ್ಲಿ ಬಸ್‌ಗಳ ಸಂಚಾರವಿರಲಿದೆ.
ಸುಲಭ ಮತ್ತು ಸುರಕ್ಷಿತ ಪ್ರಯಾಣ:
ಪ್ರಯಾಣಿಕರು ತಮ್ಮ ದಿನನಿತ್ಯದ ಪ್ರಯಾಣವನ್ನು ತಡೆರಹಿತವಾಗಿ ಮತ್ತು ಸುರಕ್ಷಿತವಾಗಿ ಕೈಗೊಳ್ಳಲು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ವಿನಂತಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇನ್ನು ಹೆಚ್ಚಿನ ಬಸ್‌ಗಳನ್ನು ಈ ಮಾರ್ಗಗಳಲ್ಲಿ ಅಳವಡಿಸುವ ಸಾಧ್ಯತೆ ಇದೆ.


