ಮೂಡುಬಿದಿರೆಯ ಅನುಷಾ ಆಚಾರ್ ಅವರ 'ಮಾವೇದಾಸ್' ಸ್ಟಾರ್ಟಪ್‌ಗೆ ನೀತಿ ಆಯೋಗದ ರಾಷ್ಟ್ರೀಯ ಮನ್ನಣೆ ಲಭಿಸಿದೆ. ಬಾಣಂತನದ ಸಾಂಪ್ರದಾಯಿಕ ಆಹಾರವನ್ನು ನಾವೀನ್ಯತೆಯೊಂದಿಗೆ ಉಳಿಸುವ ಈ ಪ್ರಯತ್ನ, ದೇಶದ 26 ಪ್ರಮುಖ ನಾವೀನ್ಯತೆಗಳಲ್ಲಿ ಒಂದಾಗಿ ಆಯ್ಕೆಯಾಗಿದ್ದು, ಈ ಸಾಧನೆಗಾಗಿ ಅನುಷಾ ಆಚಾರ್ ಅವರು ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕರಿಸಲಿದ್ದಾರೆ.
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಬಾಣಂತನ ಹಂತದಲ್ಲಿ ಪರಂಪರೆಯ ಲೇಹ, ಉಪಚಾರದ ಆಹಾರವನ್ನು ನಾವೀನ್ಯತೆಯೊಂದಿಗೆ ಉಳಿಸಿ ಬೆಳೆಸುವ ಸಣ್ಣ ಪ್ರಯತ್ನಕ್ಕೆ ಸ್ಟಾರ್ಟಪ್ ಮೂಲಕ ಮುಂದಾದವರು ಮೂಡುಬಿದಿರೆಯ ಅನುಷಾ ಆಚಾರ್. ಇದೀಗ ಭಾರತದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಶನ್ (ಎಐಎಂ) ರಾಷ್ಟ್ರಮಟ್ಟದಲ್ಲಿನ ತಳಮಟ್ಟದ ನಾವೀನ್ಯತೆಯ ಕೊಡುಗೆಗಾಗಿ ಕೊಡಮಾಡುವ 2026ನೇ ಸಾಲಿನ ಆಯ್ದ 26 ರಾಷ್ಟ್ರಮಟ್ಟದ ಸಾಧಕರ ಪೈಕಿ ಅನುಷಾ ಅವರ ‘ಮಾವೇದಾಸ್’ ಆಯ್ಕೆಯಾಗಿದೆ.
ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ದಕ್ಷಿಣ ಕನ್ನಡದಿಂದ ಮಾತ್ರ ಆಯ್ಕೆಯಾಗಿರುವ ಇಬ್ಬರು ಸಾಧಕರ ಪೈಕಿ ಅನುಷಾ ಒಬ್ಬರು ಎನ್ನುವುದೂ ವಿಶೇಷ.
ಇದೇಜು.31 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸಾಧಕರನ್ನು ಗೌರವಿಸುವ ಸಮಾರಂಭದಲ್ಲಿ ಅನುಷಾ ಆಚಾರ್ ಆಹ್ವಾನಿತರಾಗಿದ್ದಾರೆ.
26 ಮಂದಿಗೆ ರಾಷ್ಟ್ರೀಯ ಮನ್ನಣೆ
ದೇಶದ 250ಕ್ಕೂ ಅಧಿಕ ನಾವೀನ್ಯತೆಯ ಸ್ಟಾರ್ಟ್ ಅಪ್ ಗಳವರು ಈ ಸ್ಪರ್ಧಾ ಕಣದಲ್ಲಿದ್ದು ಅಂತಿಮ ಹಂತದಲ್ಲಿ 26 ಮಂದಿಗೆ ಈ ಸಾಲಿನ ರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ. ಮೂಲತಃ ಕುಂದಾಪುರದವರಾದ ಅನುಷಾ ಬಿಇ ಇಲೆಕ್ಟ್ರಿಕಲ್ ಪದವೀಧರೆ. ಆದರೆ ದೇಸೀ ಆಹಾರ, ಅದರಲ್ಲೂ ಬಾಣಂತಿ ಆರೈಕೆಯ ಆಹಾರಾದಿ ಕುರಿತ ವಿಶೇಷ ಆಸಕ್ತಿಯಿಂದ ಅವೆಲ್ಲವನ್ನೂ ತಯಾರಿಸುವುದನ್ನೂ ಕಲಿತು ಮುಂದಿನ ಪೀಳಿಗೆಗೆ ಈ ಪರಂಪರೆ ಉಳಿಸುವ ಅವರ ಪ್ರಯತ್ನಕ್ಕೆ ಇದೀಗ ಬೆಂಬಲ ದೊರೆತಂತಾಗಿದೆ.
ಮೆಂತೆ ಸತ್ವ, ಬಾಣಂತಿ ಲೇಹ, ಬೆಳ್ಳುಳ್ಳಿ ಲೇಹ, ಮೆಂತೆ ಲಡ್ಡು ಈಗಾಗಲೇ ‘ಮಾ ವೇದಾಸ್’ ಮೂಲಕ ಜನತೆಗೆ ಲಭ್ಯವಾಗುತ್ತಿದೆ. ಮುಂದೆ ಬೇಬಿ ಫುಡ್ ಸಹಿತ ಇನ್ನಷ್ಟು ಹೊಸ ಆಹಾರ ವೈವಿಧ್ಯಗಳೊಂದಿಗೆ ಕನಸಿನ ಯೋಜನೆ ವಿಸ್ತರಿಸುವ ಅನುಷಾ ಅವರ ಕನಸಿಗೆ ಈ ಗೌರವ ಸ್ಫೂರ್ತಿ ತುಂಬಿದೆ.
2025ರ ಜು.18 ರಂದು ಆರಂಭಗೊಂಡು ಈಗಷ್ಟೇ ವರ್ಷ ತುಂಬಿರುವ ಮಾ ವೇದಾಸ್ ಹೆಸರಿಗೆ ಅನುಗುಣವಾಗಿ ಅಮ್ಮ ಮತ್ತು ಪರಂಪರೆಯ ಕಾಳಜಿ ಹೊಂದಿದೆ. ಬಾಯ್ಲರ್ ಮತ್ತು ರೈಸ್ ಮಿಲ್ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಗುರುತಿಸಿಕೊಂಡ ಎಸ್.ಕೆ. ಎಫ್ ಉದ್ಯಮ ಸಮೂಹದ ಜಿ.ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಅವರ ಪತ್ನಿ ಅನುಷಾ ಅವರ ಪರಂಪರೆಯ ಕುರಿತಾದ ಪ್ರೀತಿ , ಕಾಳಜಿಯ ಪ್ರಯತ್ನಕ್ಕೆ ಸಂದಿರುವ ಈ ರಾಷ್ಟ್ರೀಯ ಗೌರವ ಕರಾವಳಿಯ ಕನ್ನಡತಿಯೋರ್ವರ ಹೆಮ್ಮೆಯ ಸಾಧನೆ ಎನ್ನುವುದು ವಿಶೇಷ.


