ಮದ್ದೂರು [ಜು.05]: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಮರ ಬಿದ್ದ ಪರಿಣಾಮ ಬೆಂಗಳೂರು, ಮೈಸೂರು ನಡುವೆ ಸಂಚರಿಸುವ ರೈಲು ಸಂಚಾರದಲ್ಲಿ ವ್ಯತ್ಯಯವಾದ ಘಟನೆ ಗುರುವಾರ ನಡೆದಿದೆ. ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿತ್ತು. 

ಇದರಿಂದ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಬಸವ ಎಕ್ಸ್‌ಪ್ರೆಸ್, ಮಾಲ್ಗುಡಿ ಎಕ್ಸ್‌ಪ್ರೆಸ್ ಒಂದು ಗಂಟೆ, ಟಿಪ್ಪು ಎಕ್ಸ್‌ಪ್ರೆಸ್  30 ನಿಮಿಷ, ಬೆಂಗಳೂರಿನಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಮಾರು 30 ನಿಮಿಷಗಳ ಕಾಲ ಮದ್ದೂರು ರೈಲು ನಿಲ್ದಾಣದಲ್ಲಿ ತಡೆ ಹಿಡಿಯಲಾಗಿತ್ತು. 

ಬೆಂಗಳೂರು- ಮೈಸೂರಿನಿಂದ ಆಗಮಿಸಿದ್ದ ರೈಲ್ವೆ ಇಲಾಖೆಯ ಸುಮಾರು 20 ಮಂದಿ ತಾಂತ್ರಿಕ ತಜ್ಞರ ತಂಡ ರೈಲು ಹಳಿ ಮೇಲೆ ಕಡಿದು ಬಿದ್ದಿದ್ದ ವಿದ್ಯುತ್ ಟ್ರ್ಯಾಕ್‌ನ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ರೈಲುಗಳನ್ನು ಪರ‌್ಯಾಯ ಹಳಿ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.