ನಾಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ
ರೋಡ್ ಶೋ ವೇಳೆ ಸುಮಾರು 30 ರಿಂದ 40 ಸಾವಿರ ಮಂದಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ, ಶುಭ ಕೋರುವರು.
ಮೈಸೂರು(ಮಾ.11): ಪ್ರಧಾನಿ ನರೇಂದ್ರ ಮೋದಿ ಅವರು ಮಾ.12ರಂದು ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ವೇ ಉದ್ಘಾಟಿಸಲಿದ್ದು, ಸುಮಾರು 2 ಕಿ.ಮೀ. ದೂರ ರೋಡ್ ಶೋ ನಡೆಸುವರು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಭಾನುವಾರ ಮಧ್ಯಾಹ್ನ 11.35ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಮೈದಾನಕ್ಕೆ ಬರುವರು. ಅಲ್ಲಿನ ಐಬಿ ವೃತ್ತದಿಂದ ನಂದ ಚಿತ್ರಮಂದಿರದವರೆಗೆ 2 ಕಿ.ಮೀ. ದೂರ ರೋಡ್ ಶೋ ನಡೆಸುವರು. ರೋಡ್ ಶೋ ವೇಳೆ ಸುಮಾರು 30 ರಿಂದ 40 ಸಾವಿರ ಮಂದಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ, ಶುಭ ಕೋರುವರು. ಮತ್ತೆ ಕಾರಿನಲ್ಲಿ ಹೊರಡುವ ಮೋದಿ ಅವರನ್ನು ಬೂದನೂರು ಬಳಿ ಸುಮಾರು 500 ಮಂದಿ ಕಲಾವಿದರು ಸ್ವಾಗತಿಸುವರು. ಅಲ್ಲಿ ಅವರಿಗೆ ಶುಭಕೋರಿ ಪ್ರಧಾನಿ ಮೋದಿ ಸುಮಾರು 50 ಮೀ.ದೂರ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದರು.
'ಸಿಂಹಕ್ಕೆ ಸಲ್ಲಬೇಕು ಹೊರತು ನರಿಗಲ್ಲ..' ಹೆದ್ದಾರಿ ಕ್ರೆಡಿಟ್ ವಾರ್‌ಗೆ ಅಭಿಮಾನಿಗಳ ಪೋಸ್ಟರ್ ವಾರ್!
ಬಳಿಕ ಗೆಜ್ಜಲಗೆರೆ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮೋದಿ ಅವರು ಮಾತನಾಡುವರು. ಈ ಕಾರ್ಯಕ್ರಮದಲ್ಲಿ ಸುಮಾರು 1.50 ಲಕ್ಷ ಮಂದಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಮಾಹಿತಿ ನೀಡಿದರು.