ಟೋಲ್‌ ಸಂಗ್ರಹದ ವಿರುದ್ಧ ಮೊದಲ ದಿನವೇ ಆಕ್ರೋಶ ಭುಗಿಲೆದ್ದಿದ್ದು, ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇದೇ ವೇಳೆ, ಫಾಸ್ಟ್ಯಾಗ್‌ ಸ್ಕ್ಯಾನ್‌ ಆಗದ ವಾಹನಗಳಿಗೆ ದುಪ್ಪಟ್ಟು ದರ ವಿಧಿಸಿದ್ದಕ್ಕೆ ವಾಹನ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗಗಳು ನಡೆದವು. ಮುಂಜಾಗ್ರತೆಯಾಗಿ ಗಣಂಗೂರು ಟೋಲ್‌ ಬಳಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

ಮಂಡ್ಯ(ಜು.02): ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿನ ಎರಡನೇ ಟೋಲ್‌ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದಲ್ಲಿ ಶನಿವಾರದಿಂದ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಿದೆ. ಬೆಳಗ್ಗೆ 8 ಗಂಟೆಯಿಂದಲೇ ಟೋಲ್‌ ಪ್ಲಾಜಾದಲ್ಲಿ ವಾಹನಗಳಿಂದ ಶುಲ್ಕ ಸಂಗ್ರಹ ಆರಂಭಿಸಲಾಯಿತು.

ಟೋಲ್‌ ಸಂಗ್ರಹದ ವಿರುದ್ಧ ಮೊದಲ ದಿನವೇ ಆಕ್ರೋಶ ಭುಗಿಲೆದ್ದಿದ್ದು, ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇದೇ ವೇಳೆ, ಫಾಸ್ಟ್ಯಾಗ್‌ ಸ್ಕ್ಯಾನ್‌ ಆಗದ ವಾಹನಗಳಿಗೆ ದುಪ್ಪಟ್ಟು ದರ ವಿಧಿಸಿದ್ದಕ್ಕೆ ವಾಹನ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗಗಳು ನಡೆದವು. ಮುಂಜಾಗ್ರತೆಯಾಗಿ ಗಣಂಗೂರು ಟೋಲ್‌ ಬಳಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

ಜುಲೈನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ, ಆಟೋ ಸಂಚಾರ ನಿಷೇಧ!

ಬೆಂಗಳೂರು- ನಿಡಘಟ್ಟವರೆಗಿನ ಹೆದ್ದಾರಿಗೆ ಈಗಾಗಲೇ ಟೋಲ್‌ ಸಂಗ್ರಹಿಸಲಾಗುತ್ತಿದೆ. ಇದೀಗ ನಿಡಘಟ್ಟದಿಂದ ಮೈಸೂರುವರೆಗಿನ ಟೋಲ್‌ ಸಂಗ್ರಹ ಪ್ರಾರಂಭವಾಗಿದೆ. ಇದರಿಂದಾಗಿ ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಕಾರುಗಳು 117 ಕಿ.ಮೀ. ಪ್ರಯಾಣಕ್ಕೆ ಒಂದು ಬದಿಗೆ 320 ರು. ಪಾವತಿಸಬೇಕಿದೆ. ಒಂದೇ ದಿನದಲ್ಲಿ ಹೋಗಿ ಬರಲು 485 ರು. ತೆರಬೇಕಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೇವಲ 6 ಕಿ.ಮೀ.ದೂರದ ಪ್ರಯಾಣಕ್ಕೆ 300 ರು.ಕಟ್ಟಿ ಎಂದರೆ ರೈತರು, ಬಡವರು, ಜೀವನ ಮಾಡುವುದು ಹೇಗೆ?. ರಾಮನಗರ ಜಿಲ್ಲೆಯ ಕಣಮಿಣಕಿ ಬಳಿಯೇ ಟೋಲ್‌ ಕಟ್ಟುತ್ತೇವೆ. ಮತ್ತೆ ಶ್ರೀರಂಗಪಟ್ಟಣದ ಗಣಂಗೂರು ಬಳಿಯೂ ಟೋಲ್‌ ಕಟ್ಟಬೇಕೆನ್ನುವುದು ನ್ಯಾಯವೇ? ಈ ಬಗ್ಗೆ ಎಲ್ಲಿಯೂ ಮಾಹಿತಿಯನ್ನೇ ನೀಡಿಲ್ಲ. ದುಬಾರಿ ಟೋಲ್‌ ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಟೋಲ್‌ ಸಂಗ್ರಹದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಲ್‌ ಸಂಸ್ಥೆಯ ಮಾಲೀಕ ಇಂದ್ರದೀಪ್‌, ಟೋಲ್‌ ಸಂಗ್ರಹಿಸುವ ಸಂಬಂಧ ಕೇಂದ್ರ ಸರ್ಕಾರದ ಜೊತೆ ಆಗಿರುವ ಕರಾರಿನಂತೆ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. ಫಾಸ್ಟ್‌ಟ್ಯಾಗ್‌ ಇದ್ದರೂ ಸ್ಕಾ್ಯನ್‌ ಆಗದಿರುವುದಕ್ಕೆ ತಾಂತ್ರಿಕ ಸಮಸ್ಯೆ ಇದ್ದಂತೆ ಕಾಣುತ್ತಿದೆ. ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.