Asianet Suvarna News Asianet Suvarna News

ಬೆಂಗಳೂರಲ್ಲಿ 5.9 ಕೆಜಿ ತೂಕದ ಮಗು ಜನನ!

ತಾಯಿಯೋರ್ವರು 5.9 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದು, ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಆಸ್ಪತ್ರೆಯ ಇತಿಹಾಸದಲ್ಲೇ ಇಷ್ಟು ಭಾರಿ ತೂಕದ ಮಗು ಹುಟ್ಟಿರುವುದು ಇದೇ ಮೊದಲಾಗಿದೆ.

Bengaluru Mother Gives Birth 5.9 kilo Baby
Author
Bengaluru, First Published Jan 22, 2020, 8:13 AM IST

ಬೆಂಗಳೂರು[ಜ.22]: ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಂಗಳವಾರ ಬರೋಬ್ಬರಿ 5.9 ಕೆಜಿ ತೂಕದ ಮಗುವೊಂದು ಜನಿಸಿದೆ. ಆಸ್ಪತ್ರೆಯ ಇತಿಹಾಸದಲ್ಲೇ ಇಷ್ಟು ಭಾರಿ ತೂಕದ ಮಗು ಹುಟ್ಟಿರುವುದು ಇದೇ ಮೊದಲು.

"

ಪಶ್ಚಿಮ ಬಂಗಾಳ ಮೂಲದ ಸರಸ್ವತಿ ಮತ್ತು ಯೋಗೇಶ್‌ ದಂಪತಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಜ.18ರಂದು ಈ ಭಾರಿ ತೂಕದ ಮಗು ಜನಿಸಿದೆ. ಸಾಮಾನ್ಯವಾಗಿ ಮಗುವಿನ ತೂಕ 1ರಿಂದ 2.5 ಕೆ.ಜಿ ತೂಕವಿರುತ್ತದೆ. ಕೆಲವೊಮ್ಮೆ ತಾಯಿಗೆ ಮಧುಮೇಹದ ಸಮಸ್ಯೆಯಿದ್ದರೆ ಮಗುವಿನ ತೂಕ ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ಆದರೆ, ಈ ಭಾರಿ ಗಾತ್ರದ ಮಗುವಿನ ತಾಯಿ ಸರಸ್ವತಿಗೆ ಮಧುಮೇಹವಿರಲಿಲ್ಲ. ಆದರೂ ಕೂಡ 5.9 ಕೆ.ಜಿ. ತೂಕದ ಆರೋಗ್ಯವಂತ ಮಗು ಹುಟ್ಟಿರುವುದು ಸೋಜಿಗದ ಸಂಗತಿ ಎಂದು ವೈದ್ಯರು ಹೇಳುತ್ತಾರೆ.

ಸ್ಕೂಲ್ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ಕೊಟ್ಟ 11ನೇ ತರಗತಿ ವಿದ್ಯಾರ್ಥಿನಿ...

ದೈತ್ಯ ಮಗುವಾಗಿರುವ ಕಾರಣ ಹೆರಿಗೆ ವೇಳೆ ಚಿಕಿತ್ಸೆ ನೀಡಲು ಸಾಕಷ್ಟುತೊಂದರೆ ಆಗಬಹುದು ಮತ್ತು ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಆಂದಾಜಿಸಲಾಗಿತ್ತು. ನಮ್ಮೆಲ್ಲಾ ಊಹೆಗಳು ಹುಸಿಯಾಗಿದ್ದು, ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಹೆರಿಗೆ ಸುಲಲಿತವಾಗಿ ನಡೆಯಿತು. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಂತರಾಗಿದ್ದಾರೆ. ಮಗು ಹುಟ್ಟಿದ ತಕ್ಷಣ ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ಇಡಲಾಗಿತ್ತು. ನಂತರ ಸಾಮಾನ್ಯ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಮುಂದಿನ ಮೂರು ದಿನ ಆಸ್ಪತ್ರೆಯಲ್ಲೇ ತಾಯಿ ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿ ಅನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಾಣಿ ವಿಲಾಸ ವೈದ್ಯ ಅಧೀಕ್ಷಕಿ ಗೀತಾ ಶಿವಮೂರ್ತಿ ತಿಳಿಸಿದ್ದಾರೆ.

ಹೆಣ್ಣು ಕೂಸು ಮಾರಾಟ : ಹೆತ್ತವರೂ ಸೇರಿ 7 ಜನ ಬಂಧನ...

ಇಡೀ ವಿಶ್ವದಲ್ಲಿ 9.98 (ಅಮೆರಿಕಾದ ಓಹಿಯೋದ ಸೆವಿಲೆ ನಗರದಲ್ಲಿ 1979ರಲ್ಲಿ ಜನಿಸಿದ ಮಗು) ಕೆ.ಜಿ. ತೂಕದ ಮಗು ಹುಟ್ಟಿರುವುದು ಇದುವರೆಗಿನ ದಾಖಲೆಯಾಗಿದ್ದು, ರಾಜ್ಯದ ಮಟ್ಟಿಗೆ ಹಾಸನದಲ್ಲಿ ಈ ಹಿಂದೆ 6 ಕೆ.ಜಿ. ತೂಕದ ಮಗು ಜನಿಸಿತ್ತು ಎನ್ನಲಾಗಿದೆ. ವಾಣಿ ವಿಲಾಸ ಆಸ್ಪತ್ರೆಗೆ ಸೀಮಿತವಾದಂತೆ 5.9 ಕೆ.ಜಿ. ತೂಕದ ಮಗು ಇದುವರೆಗಿನ ದಾಖಲೆಯಾಗಿದೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios