ಬೆಂಗಳೂರಿನ ಮೆಟ್ರೋ ಹಬ್‌ ಎಂದು ಕರೆಯಲಾಗವ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ನಡುವಿನ 13.71 ಕಿಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು,  ಮಾರ್ಚ್ 10 ರ ನಂತರ ಉದ್ಘಾಟಿಸುವ ಸಾಧ್ಯತೆಯಿದೆ.

ಬೆಂಗಳೂರು (ಮಾ.06): ಬೆಂಗಳೂರಿನ ಮೆಟ್ರೋ ಹಬ್‌ ಎಂದು ಕರೆಯಲಾಗವ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ನಡುವಿನ 13.71 ಕಿಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ 10 ರ ನಂತರ ಉದ್ಘಾಟಿಸುವ ಸಾಧ್ಯತೆಯಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ತಿಳಿಸಿದೆ.

ಈ ಮಾರ್ಗದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮೆಟ್ರೋ ರೈಲ್ವೆ ಸುರಕ್ಷತೆಯ ಆಯುಕ್ತರು (ಸಿಎಂಆರ್‌ಎಸ್) ವಾಣಿಜ್ಯ ಕಾರ್ಯಾಚರಣೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ನೇರಳೆ ಹಾಗೂ ಹಸಿರು ಮೆಟ್ರೋ ಮಾರ್ಗಗಳಲ್ಲಿ ಪ್ರತಿ ದಿನ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಮೆಟ್ರೋ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ. ಇದರಲ್ಲಿ ಪರ್ಪಲ್ ಲೈನ್ (ಕೆಂಗೇರಿ-ಬೈಯಪ್ಪನಹಳ್ಳಿ) ಮಾರ್ಗದಲ್ಲಿ ಪೂರ್ವ ಭಾಗದಲ್ಲಿ ವಿಸ್ತರಣೆ ಮಾಡಲಾಗಿದ್ದು, ಇದನ್ನು ವೈಟ್‌ಫೀಲ್ಡ್‌ವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಈಗ ಐಟಿ ಹಬ್‌ಗೆ ನಮ್ಮ ಮೆಟ್ರೋ ನೆಟ್‌ವರ್ಕ್ ಪೂರ್ಣಗೊಂಡಿದ್ದು, ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಈ ಮಾರ್ಗವು ಮಾರ್ಚ್‌ ವೇಳೆಗೆ ಉದ್ಘಾಟನೆ ಆಗಲಿದೆ.

Namma Metro: ಕೆ.ಆರ್‌ಪುರ-ವೈಟ್‌ಫೀಲ್ಡ್‌ ಮೆಟ್ರೋಗೆ ಮೋದಿ ಚಾಲನೆ?

ಒಟ್ಟು 12 ಮೆಟ್ರೋ ನಿಲ್ದಾಣಗಳ ಸೇವೆ ಆರಂಭ: ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿರುವ 12 ಮೆಟ್ರೋ ನಿಲ್ದಾಣಗಳು ಬರುತ್ತವೆ. ಅವುಗಳಲ್ಲಿ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದಾಮಂಗಲ, ನಲ್ಲೂರಹಳ್ಳಿ, ಕುಂದಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ ಮಾರ್ಗಗಳಿವೆ. ಕೆಆರ್ ಪುರಂ ಮತ್ತು ಬೈಪನಹಳ್ಳಿ ನಡುವಿನ ಅಂತಿಮ 2-3 ಕಿ.ಮೀ ಮಾರ್ಗವು ಈ ವರ್ಷದ ಜೂನ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನ ಐಟಿ ಹಬ್‌ ಪ್ರದೇಶವಾದ ಕೆ.ಆರ್.ಪುರ ಹಾಗೂ ವೈಟ್‌ಫೀಲ್ಡ್‌ಗೆ ಮೆಟ್ರೋ ಮಾರ್ಗದ ಮೂಲಕ ಕೆಂಗೇರಿವರೆಗೆ ಒಟ್ಟು 35 ಕ್ಕೂ ಹೆಚ್ಚು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗಿನ ಎಲ್ಲ ಮಾರ್ಗಗಳಲ್ಲಿ ಪ್ರಯಾಣಿಕರ ಸೇವೆ ಆರಂಭವಾಗಲಿದೆ. 

ವೈಟ್‌ಫೀಲ್ಡ್-ಕೆಆರ್ ಪುರಂ ವಿಸ್ತರಣೆ: ನಗರದ ಪೂರ್ವ ಭಾಗಗಳಲ್ಲಿ ನೆಲೆಗೊಂಡಿರುವ ವೈಟ್‌ಫೀಲ್ಡ್ ಪ್ರಮುಖ ಐಟಿ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಈ ಪ್ರದೇಶವು ಹಲವಾರು ಟೆಕ್ ಪಾರ್ಕ್‌ಗಳು ಮತ್ತು ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಕಾರ್ಪೊರೇಟ್ ಕಚೇರಿಗಳಿಗೆ ನೆಲೆಯಾಗಿದೆ. ಇನ್ಫೋಸಿಸ್, ವಿಪ್ರೋ ಮತ್ತು IBM ಸೇರಿ ಇತರೆ ಪ್ರತಿಷ್ಠಿತ ಕಂಪನಿಗಳು ಸೇರಿವೆ. ಕೆಲಸದ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಪೀಕ್ ಹವರ್‌ನಲ್ಲಿ ವೈಟ್ ಫೀಲ್ಡ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಗಿರುತ್ತದೆ. ಈಗ ಮೆಟ್ರೋ ಮಾರ್ಗದಿಂದ ಟ್ರಾಫಿಕ್‌ ಪರಿಸ್ಥಿತಿ ಸುಧಾರಣೆ ಆಗಬಹುದು. ಇನ್ನು ವೈಟ್‌ಫೀಲ್ಡ್‌ಗೆ ಕಾರುಗಳಲ್ಲಿ ಹಾಗೂ ಬೈಕ್‌ಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಲಕ್ಷಾಂತರ ಜನರು ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಈಗ ಸಾರ್ವಜನಿಕ ಸಾರಿಗೆಯಾದ ಮೆಟ್ರೋ ಅಲ್ಲಿ ಸಂಚಾರ ಮಾಡುವುದರಿಂದ ಟ್ರಾಫಿಕ್‌ ನಿಯಂತ್ರಣದಲ್ಲಿ ಒಂದು ದೈತ್ಯ ಹೆಜ್ಜೆಯಾಗಲಿದೆ. 

ಐಟಿ-ಬಿಟಿ ಉದ್ಯೋಗಿಗಳಿಗೆ ಭಾರಿ ಅನುಕೂಲ: ಇನ್ನು ಈ ಮಾರ್ಗದಲ್ಲಿ ITPB (ಇಂಟರ್ನ್ಯಾಷನಲ್ ಟೆಕ್ ಪಾರ್ಕ್) ನಿಂದ ಮೆಟ್ರೋ ನಿಲ್ದಾಣಕ್ಕೆ ಕಂಪನಿಗಳ ಉದ್ಯೋಗಿಗಳು ಸಂಚಾರ ಮಾಡಲು ಅನುಕೂಲ ಆಗುವಂತೆ BMRCL ಅಗ್ರಹಾರ ನಿಲ್ದಾಣಕ್ಕೆ ಸ್ಕೈವೇ ಮೂಲಕ ನೇರ ಸಂಪರ್ಕವನ್ನು ಯೋಜಿಸುತ್ತಿದೆ. ಈ ಮೆಟ್ರೋ ಮಾರ್ಗದಿಂದ ಕೋಲಾರ ಭಾಗದ ಇತರೆ ನಗರಗಳ ಪ್ರಯಾಣಿಕರಿಗೂ ಟ್ರಾಫಿಕ್ ಮುಕ್ತವಾಗಿ ಬೆಂಗಳೂರು ಕೇಂದ್ರ ಭಾಗವನ್ನು ತಲುಪಲು ಅನುಕೂಲ ಆಗಲಿದೆ. ಹೀಗಾಗಿ, ಈ ಮೆಟ್ರೋ ಮಾರ್ಗದ ವಿಸ್ತರಣೆಯನ್ನು ಮಹತ್ವದ ಹೆಜ್ಜೆ ಎಂದು ಕರೆಯಬಹುದು.

ಬೆಂಗಳೂರಿನಲ್ಲೀಗ 70 ಕಿಮೀ ಮಾರ್ಗ: ದೇಶಕ್ಕೆ ನಮ್ಮ ಮೆಟ್ರೋ ಶೀಘ್ರ ನಂ.2..!

ಪ್ರಮುಖ ವಾಣಿಜ್ಯ ಪ್ರದೇಶವಾಗಿ ಮಾರ್ಪಾಡು: ಬೆಂಗಳೂರಿನಲ್ಲಿ ವೈಟ್‌ಫೀಲ್ಡ್ ಅಭಿವೃದ್ಧಿ ಹೊಂದುತ್ತಿರುವ ದೊಡ್ಡ ಪ್ರದೇಶವಾಗಿದ್ದು, ಇಲ್ಲಿ ಐಟಿ ಕಂಪನಿಗಳು ಮಾತ್ರವಲ್ಲದೇ ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿರುವ ಮತ್ತು ಕ್ರಿಯಾತ್ಮಕ ಪ್ರದೇಶವಾಗಿದೆ. ಈ ಭಾಗದಲ್ಲಿ ದೇಶದ ವಿವಿಧ ಭಾಗದ ಜನರು ನೆಲೆಸಿದ್ದು, ವಿವಿಧ ದೇಶಗಳ ಸಂದರ್ಶಕರನ್ನು ಆಕರ್ಷಿಸುತ್ತದೆ. ಇಲ್ಲಿ ಮೆಟ್ರೋ ನೆಟ್‌ವರ್ಕ್‌ ಕೂಡ ಅನಿವಾರ್ಯ ಆಗಿತ್ತು. ಇಲ್ಲಿ ಸುತ್ತಲಿನ ಪ್ರದೇಶಗಳಲ್ಲಿ ಅನೇಕ ವಸತಿ ಸಂಕೀರ್ಣಗಳ ಸ್ಥಾಪನೆಯೊಂದಿಗೆ, ವೈಟ್‌ಫೀಲ್ಡ್ ಆದ್ಯತೆಯ ವಸತಿ ಸ್ಥಳವಾಗಿ ಮಾರ್ಪಟ್ಟಿದೆ. ಇದಲ್ಲದೆ, ಕೆಲವು ಅತ್ಯುತ್ತಮ ಮಾಲ್‌ಗಳಾದ ನೆಕ್ಸಸ್, ಪಾರ್ಕ್ ಸ್ಕ್ವೇರ್, ಫೀನಿಕ್ಸ್ ಮಾರ್ಕೆಟ್ ಸಿಟಿ ಮತ್ತು ಇನ್ನೂ ಅನೇಕ ಆಹಾರ ಮಳಿಗೆಗಳನ್ನು ಹೊಂದಿದೆ. ವೈಟ್‌ಫೀಲ್ಡ್‌ಗೆ ನಮ್ಮ ಮೆಟ್ರೋ ನೆಟ್‌ವರ್ಕ್ ನಗರದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಇಲ್ಲಿಗೆ ಕರೆತರುವ ನಿರೀಕ್ಷೆಯಿದೆ. ಇದು ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿ ಬದಲಾಗಲಿದೆ.