ಬೆಂಗಳೂರಿನಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸಲು, ಬಿಎಂಆರ್‌ಸಿಎಲ್ ನಗರದ 9 ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಘೋಷಿಸಿದೆ. ಈ ನಿರ್ಧಾರವನ್ನು ಸೈಕಲ್ ಸವಾರರು ಸ್ವಾಗತಿಸಿದ್ದರೂ, ಶುಲ್ಕ ಮನ್ನಾ ಜೊತೆಗೆ ಸುರಕ್ಷಿತ ಪಾರ್ಕಿಂಗ್ ಒದಗಿಸಲು ಮನವಿ ಮಾಡಿದ್ದಾರೆ.

ಬೆಂಗಳೂರು (ಜ.27): ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ, ವಿಶೇಷವಾಗಿ ಸೈಕಲ್ ಸವಾರರಿಗೆ ಬಿಎಂಆರ್‌ಸಿಎಲ್ (BMRCL) ಸಿಹಿಸುದ್ದಿಯೊಂದನ್ನು ನೀಡಿದೆ. ನಗರದಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ಒಟ್ಟು 9 ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ನಿಲ್ಲಿಸಲು ಉಚಿತ ಪಾರ್ಕಿಂಗ್ ಸೌಲಭ್ಯವನ್ನು ನೀಡಲು ನಿರ್ಧರಿಸಲಾಗಿದೆ.

ಯಾವ ಯಾವ ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್?

ಒಟ್ಟು 9 ನಿಲ್ದಾಣಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದು, ಪರ್ಪಲ್ ಲೈನ್‌ನ ಎರಡು, ಗ್ರೀನ್ ಲೈನ್‌ನ ಮೂರು ಮತ್ತು ಹೊಸದಾಗಿ ಕಾರ್ಯಾರಂಭ ಮಾಡಲಿರುವ ಯೆಲ್ಲೋ ಲೈನ್‌ನ ನಾಲ್ಕು ನಿಲ್ದಾಣಗಳಲ್ಲಿ ಈ ಸೌಲಭ್ಯ ಸಿಗಲಿದೆ.

ಪರ್ಪಲ್ ಲೈನ್: ಮೈಸೂರು ರಸ್ತೆ, ಬೈಯಪ್ಪನಹಳ್ಳಿ.

ಗ್ರೀನ್ ಲೈನ್: ಮಾದಾವರ, ಪೀಣ್ಯ ಇಂಡಸ್ಟ್ರಿ, ಜೆ.ಪಿ. ನಗರ.

ಯೆಲ್ಲೋ ಲೈನ್: ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಗಿಗುಡ್ಡ ಮತ್ತು ಜಯದೇವ ಆಸ್ಪತ್ರೆ.

ಟೈಮ್ಸ್ ವರದಿ ಪ್ರಕಾರ 'ಪ್ರಸ್ತುತ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ಗಂಟೆಗೆ 1 ರೂಪಾಯಿಯಂತೆ ದಿನಕ್ಕೆ ಗರಿಷ್ಠ 10 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಆದರೆ, ಹೊಸ ಟೆಂಡರ್ ಪ್ರಕ್ರಿಯೆಯ ಮೂಲಕ ಈ 9 ನಿಲ್ದಾಣಗಳಲ್ಲಿ ಈ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಫೆಬ್ರವರಿ 9 ರವರೆಗೆ ಬಿಡ್‌ಗಳನ್ನು ಸಲ್ಲಿಸಲು ಅವಕಾಶವಿದ್ದು, ನಂತರ ಕಾರ್ಯಾಚರಣೆ ಆರಂಭವಾಗಲಿದೆ.

ಆಯ್ಕೆಯ ಹಿಂದಿನ ಕಾರಣ

ನಮ್ಮ ಕನೆಕ್ಟಿವಿಟಿ ತಂಡವು ಸೈಕಲ್ ಸವಾರರು ಅತಿ ಹೆಚ್ಚು ಬಳಸುವ ನಿಲ್ದಾಣಗಳನ್ನು ಗುರುತಿಸಿದೆ. ಅದರ ಆಧಾರದ ಮೇಲೆ ಈ ಒಂಬತ್ತು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ' ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಈ 9 ನಿಲ್ದಾಣಗಳಿಗೆ ಮಾತ್ರ ಈ ವಿನಾಯಿತಿ ಅನ್ವಯಿಸಲಿದ್ದು, ಉಳಿದ ನಿಲ್ದಾಣಗಳಲ್ಲಿ ಎಂದಿನಂತೆ ಶುಲ್ಕ ಇರಲಿದೆ.

ಸೈಕಲ್ ಸವಾರರ ಬೇಡಿಕೆ ಮತ್ತು ಮೂಲಭೂತ ಸೌಕರ್ಯ

ಬಿಎಂಆರ್‌ಸಿಎಲ್‌ನ ಈ ನಿರ್ಧಾರವನ್ನು ಸ್ವಾಗತಿಸಿರುವ ಸೈಕಲ್ ಸವಾರರು, ಕೇವಲ ಶುಲ್ಕ ಮನ್ನಾ ಮಾಡುವುದಷ್ಟೇ ಅಲ್ಲದೆ, ಸುರಕ್ಷಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಮುಖ್ಯ ಎಂದಿದ್ದಾರೆ. ಬೆಂಗಳೂರಿನ 'ಬೈಸಿಕಲ್ ಮೇಯರ್' ಎಂದೇ ಖ್ಯಾತರಾದ ಸತ್ಯ ಶಂಕರನ್ ಅವರು ಖಾಸಗಿ ಪತ್ರಿಕೆಯೊಂದರ ಜೊತೆಗೆ ಮಾತನಾಡಿ, 'ನಾವು 10 ರೂಪಾಯಿ ನೀಡಲು ಸಿದ್ಧರಿದ್ದೇವೆ, ಆದರೆ ನಿಲ್ದಾಣಗಳಲ್ಲಿ ಸೈಕಲ್‌ಗಳಿಗೆ ಪ್ರತ್ಯೇಕ ಜಾಗವಿರಬೇಕು. ಸದ್ಯಕ್ಕೆ ಹೆಚ್ಚಿನ ಕಡೆಗಳಲ್ಲಿ ಸೈಕಲ್ ನಿಲ್ಲಿಸಲು ಹೋದರೆ ಅಲ್ಲಿಂದ ಕಳುಹಿಸಲಾಗುತ್ತಿದೆ. ಸರಿಯಾದ ಮೂಲಸೌಕರ್ಯ ನೀಡುವುದೇ ಸೈಕಲ್ ಬಳಕೆಯನ್ನು ಉತ್ತೇಜಿಸುವ ನಿಜವಾದ ದಾರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಸೈಕಲ್ ಸವಾರ ಬಿಜು ಚೆರಾಯತ್ ಮಾತನಾಡಿ, 'ಸೈಕಲ್ ಲಾಕ್ ಮಾಡಲು ನಿಲ್ದಾಣಗಳಲ್ಲಿ ಸರಿಯಾದ ಪೋಲ್ ಅಥವಾ ಹ್ಯಾಂಡಲ್‌ಗಳಿಲ್ಲ. ಕೇವಲ ಒಂದು ಆಧಾರದ ಕಂಬವಿದ್ದರೂ ಸೈಕಲ್ ಕಳ್ಳತನವಾಗದಂತೆ ಲಾಕ್ ಮಾಡಲು ನೆರವಾಗುತ್ತದೆ' ಎಂದು ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನ ಸೆಳೆದಿದ್ದಾರೆ.