ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಸಾರಿಗೆ ಬಸ್ ಆಂಧ್ರಪ್ರದೇಶದ ಕರ್ನೂಲ್ ಬಳಿ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು, 29 ಪ್ರಯಾಣಿಕರ ಪೈಕಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕರ್ನೂಲ್: ಬೆಂಗಳೂರಿನಿಂದ ಮಂತ್ರಾಲಯದತ್ತ ತೆರಳುತ್ತಿದ್ದ ಸ್ಲೀಪರ್ ಕೋಚ್ ಸಾರಿಗೆ ಬಸ್ ಭೀಕರ ಅಪಘಾತಕ್ಕೊಳಗಾದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾತನ ಸಮೀಪ ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ ಸಂಭವಿಸಿದ ಈ ಘಟನೆ ಕೆಲವು ಗಂಟೆಗಳ ನಂತರ ಬೆಳಕಿಗೆ ಬಂದಿದೆ.
ಮಂತ್ರಾಲಯ ಸಮೀಪಕ್ಕೆ ಬಂದಾಗ ಘಟನೆ
KA-40 F-0834 ಸಂಖ್ಯೆಯ ಸ್ಲೀಪರ್ ಕೋಚ್ ಬಸ್ ಬೆಂಗಳೂರಿನಿಂದ ಮಂತ್ರಾಲಯ ಮಾರ್ಗವಾಗಿ ಪ್ರಯಾಣಿಸುತ್ತಿತ್ತು. ಮಂತ್ರಾಲಯ ಸಮೀಪಕ್ಕೆ ಬಂದಾಗ ಬಸ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಮುಖ್ಯವಾಗಿ ಸ್ಟೇರಿಂಗ್ ಸಮಸ್ಯೆಯಿಂದ ಬಸ್ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ, ಬಸ್ ನಿಯಂತ್ರಣ ತಪ್ಪುತ್ತಿದ್ದಂತೆಯೇ ಚಾಲಕ ಸಮಯ ಪ್ರಜ್ಞೆಯಿಂದ ಹಾಗೂ ತಾಳ್ಮೆಯಿಂದ ಬಸ್ ಅನ್ನು ನಿಯಂತ್ರಿಸಲು ಹರಸಾಹಸ ಪಟ್ಟು, ದೊಡ್ಡ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಈ ವೇಳೆ ಸಮಯ ಪ್ರಜ್ಞೆಯಿಂದ ಬಸ್ ನಿಯಂತ್ರಿಸಲು ಚಾಲಕ ಹರಸಾಹಸ ಪಟ್ಟಿದ್ದಾನೆ. ಬಳಿಕ ಚಾಲಕ ಬಸ್ ನಿಯಂತ್ರಿಸುತ್ತಿದ್ದಂತೆ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದೆ.
ಗಾಯಾಳುಗಳ ಮಾಹಿತಿ
ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಇದ್ದರು. ಅದೃಷ್ಟವಶಾತ್, ಯಾವುದೇ ಭೀಕರ ಗಾಯಗಳು ವರದಿಯಾಗಿಲ್ಲ. ಅವರಲ್ಲಿ ಇಬ್ಬರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ತನಿಖೆ ಮುಂದುವರಿಕೆ
ಈ ಘಟನೆ ಕರ್ನೂಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಸ್‌ನಲ್ಲಿ ತಾಂತ್ರಿಕ ದೋಷವೇ ಅಪಘಾತಕ್ಕೆ ಮೂಲ ಕಾರಣ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.


