ಬೆಂಗಳೂರು ಕೆರೆ ಒತ್ತುವರಿ ಮಾಡಿಕೊಂಡಿದ್ದ 3 ಜನರಿಗೆ 1 ವರ್ಷ ಜೈಲು ಶಿಕ್ಷೆ: ಬಿಎಂಟಿಎಫ್
ಬೆಂಗಳೂರಿನಲ್ಲಿ ಸರ್ಕಾರಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿದ ಮೂವರು ಆರೋಪಿಗಳಿಗೆ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಹೆಬ್ಬಗೋಡಿ ಗ್ರಾಮದ 32 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದ ಆರೋಪಿಗಳ ವಿರುದ್ಧ ಬಿಎಂಟಿಎಫ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಬೆಂಗಳೂರು (ಜ.10): ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಕಾರಿ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಅದರಲ್ಲಿ ಮನೆಗಳನ್ನು ಹಾಗೂ ಮನೆಗೆ ಹೆಚ್ಚುವರಿ ಶೌಚಾಲಯವನ್ನು ನಿರ್ಮಾಣ ಮಾಡಿಕೊಂಡಿದ್ದ ಮೂವರು ಆರೋಪಿಗಳಿಗೆ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಅತ್ತಿಬೆಲೆ ಹೋಬಳಿ, ಹೆಬ್ಬಗೋಡಿ ಗ್ರಾಮದ ಸರ್ವೇ ನಂ.159 ರ 32 ಎಕರೆ 13 ಗುಂಟೆ ಸರ್ಕಾರಿ ಕೆರೆಯ ಜಮೀನನ್ನು ಆರೋಪಿಗಳಾದ ಎ1- ಕೃಷ್ಣಪ್ಪ, ಎ2- ನಂಜಪ್ಪ, ಎ3- ರಾಮಯ್ಯ, ಎ4- ಎಂ.ವೆಂಕಟೇಶ್, ಎ5- ಹೆಚ್.ಎಂ.ಸುಬ್ಬಣ್ಣ, ಎ6- ಲಕ್ಷ್ಮೀದೇವಿ, ಎ7- ಪಿಳ್ಳಪ್ಪ ರವರುಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಶೌಚಾಲಯ ಮತ್ತು ವಾಸದ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಇವರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 19/2012 : 192(ಎ) ಕೆ.ಎಲ್.ಆರ್ ಆಕ್ಟ್ ರೀತ್ಯಾ ದಿನಾಂಕ: 22-02-2012 ಪ್ರಕರಣ ದಾಖಲಾಗಿ ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿಯಲ್ಲಿ ಭಾರೀ ಭ್ರಷ್ಟಾಚಾರ, ಮಾಜಿ ಸದಸ್ಯರಿಗೀಗ ಇ.ಡಿ. ಸಂಕಷ್ಟ?
ಬಿಎಂಟಿಎಫ್ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೊಂಡು ಸಾಕ್ಷಾಧಾರಗಳನ್ನು ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಚಾರ್ಜ್‌ಶೀಟ್ ಆಧಾರದಲ್ಲಿ ನ್ಯಾಯಾಲಯ ವಿಚಾರಣೆ ಮಾಡಿದಾಗ ಆರೋಪಿಗಳು ಸರ್ಕಾರಿ ಕೆರೆಯ ಸ್ವತ್ತನ್ನು ಅಕ್ರಮವಾಗಿ ಒತ್ತುವರಿ ಮಾಡಿ ಶೌಚಾಲಯ ಮತ್ತು ಮನೆಗಳನ್ನು ನಿರ್ಮಾಣ ಮಾಡಿರುವುದು ಧೃಡಪಟ್ಟಿದೆ. ಹೀಗಾಗಿ, ಆರೋಪಿಗಳಾದ ಎ4- ಎಂ.ವೆಂಕಟೇಶ್, ಎ5- ಹೆಚ್.ಎಂ.ಸುಬ್ಬಣ್ಣ ಮತ್ತು ಎ6- ಲಕ್ಷ್ಮೀದೇವಿ ಅವರಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ಡಿ.13ರಂದು ಆದೇಶ ಹೊರಡಿಸಿದೆ.
ಸದರಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಬಿಎಂಟಿಎಫ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ ರಾಜು ರವರು ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಉತ್ತಮ ತನಿಖೆಗಾಗಿ ಮತ್ತು ತನಿಖೆಗೆ ಸಹಕರಿಸಿದ ಸಿಬ್ಬಂದಿಯವರಿಗೆ ಹಾಗೂ ನ್ಯಾಯಾಲಯದಲ್ಲಿ ಸದರಿ ಪ್ರಕರಣದ ವಿಚಾರಣಾ ಕಾಲದಲ್ಲಿ ಸಹಕರಿಸಿದ ಕೋರ್ಟ್ ಮಾನಿಟರಿಂಗ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಿಎಂಟಿಎಫ್ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಬಿಎಂಟಿಎಫ್ ಎಸ್‌ಪಿ ಡಾ.ಸುಮನ್ ಡಿ.ಪನ್ನೇಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.