*ಈ ಮೊದಲು ನಿತ್ಯ 3.5 ಲಕ್ಷ ಮಂದಿ ಆಹಾರ ಸೇವನೆ: ಇದೀಗ 1.5 ಲಕ್ಷಕ್ಕೆ ಕುಸಿತ*ಕಳಪೆ ಗುಣಮಟ್ಟದ ಆಹಾರವೇ ಕಾರಣ?: ಹಳ್ಳ ಹಿಡಿದ ಮಹತ್ವಕಾಂಕ್ಷಿ ಯೋಜನೆ

ಬೆಂಗಳೂರು (ಮಾ. 14):  ಕಡು ಬಡವರು ಹಾಗೂ ಕಾರ್ಮಿಕ ವರ್ಗದ ಮೆಚ್ಚಿನ ಆಹಾರ ತಾಣವಾಗಿ ಒಂದು ಕಾಲದಲ್ಲಿ ಮಿಂಚಿದ್ದ ಇಂದಿರಾ ಕ್ಯಾಂಟೀನ್‌ಗಳು ಕ್ರಮೇಣ ತಮ್ಮ ಕಳೆ ಕಳೆದುಕೊಳ್ಳುತ್ತಿವೆ. ಅದೇನು ಆಹಾರ ಗುಣಮಟ್ಟದ ಸಮಸ್ಯೆಯೋ ಅಥವಾ ಜನರೇ ಕ್ಯಾಂಟೀನ್‌ನಿಂದ ದೂರವಾಗುವ ಮನಸ್ಸು ಮಾಡಿದರೋ ನಿಖರವಾಗಿ ಗೊತ್ತಿಲ್ಲ. ಆದರೆ, ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ಶೇ.50ರಷ್ಟುಕಡಿಮೆಯಾಗಿದೆ! ಹೀಗಾಗಿ, ಗುಣಮಟ್ಟಆಹಾರ ಪೂರೈಕೆ ಮೂಲಕ ಬಿಬಿಎಂಪಿಯ ಇಂದಿರಾ ಕ್ಯಾಂಟೀನ್‌ಗಳಿಂದ ಗ್ರಾಹಕರನ್ನು ದೂರವಿರಿಸಿ ಮಹತ್ವಕಾಂಕ್ಷಿ ಯೋಜನೆಯನ್ನು ಜನ ಮಾನಸದಿಂದ ದೂರಗೊಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ರಾಜಕೀಯ ವಲಯಗಳಿಂದ ಕೇಳಿ ಬಂದಿದೆ.

ಶೇ.50ರಷ್ಟು ಗ್ರಾಹಕರ ಇಳಿಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಸ್ಥಿರ ಹಾಗೂ 24 ಮೊಬೈಲ್‌ ಕ್ಯಾಂಟೀನ್‌ಗಳಿದ್ದು, ಆರಂಭಗೊಂಡ ಎರಡು ವರ್ಷ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಲಾ 300ರಿಂದ 450 ಮಂದಿಯಂತೆ 3 ಲಕ್ಷದಿಂದ 3.5 ಲಕ್ಷ ಮಂದಿಗೆ ಆಹಾರ ವಿತರಣೆ ಮಾಡಲಾಗುತ್ತಿತ್ತು. ಆದರೆ, ಪ್ರತಿ ಕ್ಯಾಂಟೀನ್‌ನಲ್ಲಿ ಈಗ ದಿನಕ್ಕೆ 50ರಿಂದ 100 ಮಂದಿ ಮಾತ್ರ ಊಟ, ತಿಂಡಿಗೆ ಬರುತ್ತಿದ್ದಾರೆ. 198 ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ದಿನಕ್ಕೆ 1 ರಿಂದ 1.5 ಲಕ್ಷ ಮಂದಿಗೆ ಕುಸಿದಿದೆ.

ಇದನ್ನೂ ಓದಿ: BBMP ಮಾರ್ಚ್ 28 ರಂದು ಬಿಬಿಎಂಪಿ ಬಜೆಟ್ ಮಂಡನೆ?

ಕಡಿಮೆ ದರದಲ್ಲಿ ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ(2017) ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿತ್ತು. ಶುರುವಿನಲ್ಲಿ ಈ ಕ್ಯಾಂಟೀನ್‌ಗಳ ಮುಂದೆ ಉದ್ದದ ಸಾಲುಗಳಿರುತ್ತಿದ್ದವು. ಆದರೀಗ ಬೆರಳೆಣಿಕೆಯಷ್ಟುಜನ ಮಾತ್ರ ಇಂದಿರಾ ಕ್ಯಾಂಟೀನ್‌ ಗ್ರಾಹಕರಾಗಿದ್ದಾರೆ. 

ಇದಕ್ಕೆ ಕಾರಣ ಮುಖ್ಯ ಕಾರಣ ಸರ್ಕಾರ ಮತ್ತು ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು. ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆದಾರರು ಅತ್ಯಂತ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದರಿಂದ ಈ ಬೆಳವಣಿಗೆಗೆ ಕಾರಣ ಎಂದು ಆರೋಪಿಸಲಾಗುತ್ತಿದೆ.

ಇದಲ್ಲದೇ ಕ್ಯಾಂಟೀನ್‌ ನಿರ್ವಹಣೆಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಅನುದಾನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಬಿಬಿಎಂಪಿ ತನ್ನ ಆದಾಯದಲ್ಲಿಯೇ ನಿರ್ವಹಣೆ ಮಾಡಬೇಕಾಗಿದೆ. ಈ ಎಲ್ಲ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ಗಳು ತಮ್ಮ ಗತ ವೈಭವವನ್ನು ಕಳೆದುಕೊಂಡು ಗ್ರಾಹಕರಿಲ್ಲದೇ ಸೊರಗುತ್ತಿವೆ ಎಂದು ದೂರುಗಳು ಕೇಳಿ ಬರುತ್ತಿವೆ.́

ಗ್ರಾಹಕರ ಸಂಖ್ಯೆಯಲ್ಲಿ ಗೋಲ್ಮಾಲ್‌?: ಆದರೆ, ಬಿಬಿಎಂಪಿ ಅಧಿಕಾರಿಗಳು ಇದನ್ನು ನಿರಾಕರಿಸುತ್ತಾರೆ. ಗ್ರಾಹಕರ ಸಂಖ್ಯೆಯಲ್ಲಿ ಈ ಹಿಂದೆ ಗೋಲ್‌ಮಾಲ್‌ ನಡೆಯುತ್ತಿತ್ತು. ಅದನ್ನು ಈಗ ನಾವು ತಡೆದಿದ್ದೇವೆ. ಹೀಗಾಗಿ ನಿಜ ಸಂಖ್ಯೆ ಬಹಿರಂಗಕ್ಕೆ ಬರುತ್ತಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:Bengaluru ಒಂದೇ ಸೂರಿನಡಿ ನಗರದ 14 ಇಲಾಖೆಗಳು!

ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾದರೂ ಗುತ್ತಿಗೆ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಆಹಾರ ವಿತರಣೆ ಮಾಡಿರುವುದಾಗಿ ಬಿಬಿಎಂಪಿಗೆ ಬಿಲ್‌ ಸಲ್ಲಿಸುತ್ತಿವೆ. ಈ ಬಗ್ಗೆ ಪರಿಶೀಲಿಸಲು ಪ್ರತಿ ಕ್ಯಾಂಟೀನ್‌ಗೆ ಮಾರ್ಷಲ್‌ಗಳನ್ನು ನಿಯೋಜಿಸಿದ್ದು, ಗ್ರಾಹಕರ ಆಹಾರ ಸೇವನೆ ಕುರಿತು ಮಾರ್ಷಲ್‌ಗಳು ನೀಡುವ ವರದಿ ಆಧಾರದ ಮೇಲೆ ಬಿಬಿಎಂಪಿ ಬಿಬಿಎಂಪಿ ಬಿಲ್‌ ಪಾವತಿಸುತ್ತಿದೆ.

ಮಾರ್ಷಲ್‌ ವರದಿ ಹಾಗೂ ಗುತ್ತಿಗೆ ಸಂಸ್ಥೆಗಳು ಸಲ್ಲಿಸಿದ ಬಿಲ್‌ಗಳು ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಬಿಲ್‌ ಪಾವತಿ ಬಾಕಿ ಉಳಿದಿದೆ. ಸರಿಯಾದ ಬಿಲ್‌ ಪಾವತಿ ಮಾಡಿದವರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ರೂ. 70 ಕೋಟಿ ಬಾಕಿ: ಕಳೆದ ಎರಡು ಮೂರು ವರ್ಷದಿಂದ ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಬಿಬಿಎಂಪಿ ತನ್ನ ಆದಾಯದಲ್ಲಿಯೇ ನಿರ್ವಹಣೆ ಮಾಡುತ್ತಿದೆ. ಕಳೆದ 11 ತಿಂಗಳಿನಿಂದ ಸುಮಾರು ರೂ. 70 ಕೋಟಿ ಗುತ್ತಿಗೆದಾರರಿಗೆ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಹೀಗಾಗಿ, ಗುತ್ತಿಗೆದಾರರು ಕ್ಯಾಂಟೀನ್‌ಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ.

"ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಗುಣಮಟ್ಟಪರಿಶೀಲಿಸಿ ಉತ್ತಮ ಊಟ ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗುತ್ತಿತ್ತು. ಈಗ ಮೇಲ್ವಿಚಾರಣೆ ನಡೆಸುವವರಿಲ್ಲ. ಹೀಗಾಗಿ, ಗುಣಮಟ್ಟಕಳೆದುಕೊಂಡಿದೆ. ಸರಿಪಡಿಸಿ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ ಕಡಿಮೆ ದರದಲ್ಲಿ ಒಳ್ಳೆಯ ಆಹಾರ ಸಿಗುವಂತಾಗಬೇಕು" ಎಂದು ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಹೇಳಿದ್ದಾರೆ

"ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಸಂಖ್ಯೆಯ ಕಡಿಮೆ ಆಗಿರುವುದು ಸೇರಿದಂತೆ ಆಹಾರದ ಗುಣಮಟ್ಟಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ" ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ

-ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ