ಉತ್ತರ ಕನ್ನಡದ ದಾಂಡೇಲಿಯಲ್ಲಿ, ಮಲೇಷ್ಯಾದಿಂದ ಹಿಂದಿರುಗಿದ್ದ ರಾಘವೇಂದ್ರ ವಾಡಕರ ಎಂಬ ಯುವಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಅತ್ತೆಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ಈ ಘಟನೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬಾಂಬೆಚಾಳ ಪ್ರದೇಶದ ಮನೆಯಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಮೇ 1, 2026ರಂದು ಸಂಭವಿಸಿದ್ದು, ಮೃತರು ರಾಘವೇಂದ್ರ ದೇವೇಂದ್ರ ವಾಡಕರ (32) ಎಂದು ಗುರುತಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ದಾಂಡೇಲಿಯವರಾದ ರಾಘವೇಂದ್ರ ವಾಡಕರ ಅವರು ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದು, ಕೆಲವು ದಿನಗಳ ಹಿಂದೆ ತಮ್ಮ ಹುಟ್ಟೂರಿಗೆ ಆಗಮಿಸಿದ್ದರು. ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ತನ್ನ ಕೈಯನ್ನು ಕೊಯ್ದುಕೊಂಡು ನೇಣಿಗೆ ಶರಣಾಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ನನ್ನ ಸಾವಿಗೆ ಪತ್ನಿ ಹಾಗೂ ಅತ್ತೆ ಕಾರಣ ಎಂದ ಮೃತ

ಘಟನಾ ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, ನನ್ನ ಸಾವಿಗೆ ಪತ್ನಿ ಮೇಘಾ ಹಾಗೂ ಅತ್ತೆಯೇ ಕಾರಣ” ಎಂದು ರಾಘವೇಂದ್ರ ಆರೋಪಿಸಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಪತ್ನಿ ಮೇಘಾ ಮತ್ತು ಮಗು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ತಮ್ಮ ಮೇಲೆ ಕಿರುಕುಳ ನೀಡುತ್ತಿದ್ದಳು ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದೇ ವೇಳೆ, ರಾಘವೇಂದ್ರ ಅವರ ಸಹೋದರಿ ನರ್ಮದಾ ಅವರು ಪತ್ನಿ ಮೇಘಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಅವಳಿಗೆ ಅನೈತಿಕ ಸಂಬಂಧವಿತ್ತು ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆ ಆರಂಭಿಸಿದ್ದಾರೆ

ಪತ್ನಿ ಮೇಘಾಳನ್ನು ವಶಕ್ಕೆ ಪಡೆದು ವಿಚಾರಣೆ

ಘಟನೆಯ ಮಾಹಿತಿ ತಿಳಿದುಕೊಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ ನಾಯ್ಕ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ರಾಘವೇಂದ್ರ ಅವರ ಪತ್ನಿ ಮೇಘಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಈ ಘಟನೆ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಮೃತ ರಾಘವೇಂದ್ರ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಭದ್ರತೆಯೊಂದಿಗೆ ನೆರವೇರಿಸಲಾಯ್ತು. ಒಟ್ಟಿನಲ್ಲಿ, ಡೆತ್ ನೋಟ್‌ನಲ್ಲಿರುವ ಆರೋಪಗಳು, ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಇತರೆ ಆರೋಪಗಳ ಹಿನ್ನೆಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಿಖರ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ. ಇನ್ನು ಘಟನೆ ಬಳಿಕ ಮೇಘಾಳ ರೀಲ್ಸ್ ವಿಡಿಯೋಗಳು ವೈರಲ್ ಆಗುತ್ತಿದೆ.