Asianet Suvarna News Asianet Suvarna News

New Year 2023: ಹೊಸ ವರ್ಷ ಅದ್ಧೂರಿ ಸ್ವಾಗತಕ್ಕೆ ಬೆಂಗ್ಳೂರು ಸಜ್ಜು..!

ಎರಡು ವರ್ಷದ ಬಳಿಕ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರಿಗೇಡ್‌ ರಸ್ತೆಯಲ್ಲಿ ಅವಕಾಶ, ಲಕ್ಷಾಂತರ ಜನ ನಿರೀಕ್ಷೆ, ದೀಪಾಲಂಕಾರಗಳಿಂದ ಝಗಮಗಿಸುತ್ತಿರುವ ತಾರಾ ಹೋಟೆಲ್‌ಗಳು, ಮಾಲ್‌ಗಳು, ಪಬ್‌, ಕ್ಲಬ್‌ಗಳು. 

Bengaluru Gearing up for Grand Welcome to the New Year 2023 grg
Author
First Published Dec 31, 2022, 6:30 AM IST

ಬೆಂಗಳೂರು(ಡಿ.31):  ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ. ‘ಕ್ಯಾಲೆಂಡರ್‌ ವರ್ಷ 2023’ ಆರಂಭವಾಗುವ ಕ್ಷಣವನ್ನು ಸ್ಮರಣೀಯ ವಾಗಿಸಲು ನಗರದ ಪಬ್‌, ಕ್ಲಬ್‌, ಬಾರ್‌ ಅಂಡ್‌ ರೆಸ್ಟೋರಂಟ್‌ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೊರೋನಾ ವೈರಸ್‌ ಕಾಟದಿಂದಾಗಿ 2021 ಹಾಗೂ 2022ರ ಹೊಸವರ್ಷ ಸ್ವಾಗತ ಸಂಭ್ರಮಾಚರಣೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಒಂದಿಷ್ಟುಮುಂಜಾಗ್ರತಾ ಕ್ರಮಗಳೊಂದಿಗೆ ಹೊಸವರ್ಷ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಶನಿವಾರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಲು ಜನರು, ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ನೇಹಿತರು ಹಾಗೂ ಕುಟುಂಬ ಸ್ಥರು, ಮನೆ ಹಾಗೂ ಕಚೇರಿಗಳಲ್ಲಿ ಪಾರ್ಟಿಗಳನ್ನು ಆಯೋಜಿಸಲು ತಯಾರಿ ನಡೆಸಿದ್ದಾರೆ. ನಗರದ ಪ್ರಮುಖ ಕಟ್ಟಡಗಳು, ತಾರಾ ಹೋಟೆಲ್‌ಗಳು, ಮಾಲ್‌ಗಳು, ಪಬ್‌, ಕ್ಲಬ್‌, ಬಾರ್‌ ಮತ್ತು ರೆಸ್ಟೋರಂಟ್‌ಗಳು ಹಾಗೂ ಪ್ರವಾಸಿ ತಾಣಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಈ ದೀಪಗಳು ರಾತ್ರಿ ಹೊತ್ತು ಝಗಮಗಿಸುತ್ತ ನಗರದ ಸೌಂದರ್ಯವನ್ನು ಹೆಚ್ಚಿಸಿವೆ.

Bengaluru: ಹೊಸ ವರ್ಷಕ್ಕೆ ಉಗ್ರರ ಕರಿನೆರಳು: ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ

ಎರಡು ವರ್ಷದ ಬಳಿಕ ಅವಕಾಶ: 

ಬೆಂಗಳೂರಿನ ಹೊಸ ವರ್ಷ ಆಚರಣೆಯ ಕೇಂದ್ರ ಬಿಂದುವಾದ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್‌ ಸ್ಟ್ರೀಟ್‌ಗೆ ಸಾರ್ವಜನಿಕರಿಗೆ ಕಳೆದ ವರ್ಷಗಳಲ್ಲಿಯೂ ಡಿ.31 ಮಧ್ಯರಾತ್ರಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಅನುಮತಿ ನೀಡಿದ್ದು, ತಯಾರಿ ಜೋರಾಗಿದೆ. ಈ ರಸ್ತೆಗಳ ಪ್ರತಿ ಅಂಗಡಿಯನ್ನೂ ದೀಪಗಳಿಂದ ಅಲಂಕರಿಸಲಾಗಿದೆ. ಕೊರೋನಾ ಪೂರ್ವದಂತೆಯೇ ಲಕ್ಷಾಂತರ ಮಂದಿ ಈ ರಸ್ತೆಗಳಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ, ರಿಚ್ಮಂಡ್‌ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಮೂರು ಸಾವಿರ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ.

ಮಧ್ಯಾಹ್ನದಿಂದಲೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ: 

ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 1 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಬ್ರಿಗೇಡ್‌ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಎರಡು ರಸ್ತೆಗಳ ಜಂಕ್ಷನ್‌ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ ಉಪಕರಣವನ್ನು ಅಳವಡಿಸ ಲಾಗಿದ್ದು, ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತದೆ.

ಮುಂಗಡ ಬುಕ್ಕಿಂಗ್‌:

ಎಂ.ಜಿ.ರಸ್ತೆ, ಇಂದಿರಾನಗರ, ರೆಸಿಡೆನ್ಸಿ ರಸ್ತೆ, ಕಮರ್ಷಿಯಲ್‌ ಸ್ಟ್ರೀಲ್‌, ಮಲ್ಲೇಶ್ವರದ ಸಂಪಿಗೆ ರಸ್ತೆ, ಕೋರಮಂಗಲ ಸೇರಿದಂತೆ ಪ್ರಮುಖ ನಗರಗಳ ಬಾರ್‌ ಮತ್ತು ರೆಸ್ಟೋರಂಟ್‌ಗಳು, ಪಬ್‌, ಡಿಸ್ಕೋಥೆಕ್‌ಗಳಲ್ಲಿ ಡಿ.ಜೆ.ಗಳು ಹಾಗೂ ಗಾಯಕರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶನಿವಾರ ಸಂಜೆ 6 ಗಂಟೆಯಿಂದಲೇ ಆರಂಭಗೊಳ್ಳಲಿವೆ. ಅಂತೆಯೇ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹಲವು ಪಬ್‌ ಹಾಗೂ ರೆಸ್ಟೋರೆಂಟ್‌ಗಳು ರಿಯಾಯಿತಿ ದರಗಳನ್ನು ಘೋಷಿಸಿವೆ. ಈಗಾಗಲೇ ಆ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಜನರು, ಮುಂಗಡವಾಗಿಯೇ ಕಾಯ್ದಿರಿಸಿದ್ದಾರೆ.

ಬಿಎಂಟಿಸಿ ಮತ್ತು ಮೆಟ್ರೋ ಸೇವೆ:

ಶನಿವಾರ ಮಧ್ಯರಾತ್ರಿ 2ಗಂಟೆವರೆಗೂ ಎಂ.ಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್‌ ಸೌಲಭ್ಯವಿದೆ. ಜತೆಗೆ ಮೆಟ್ರೋ ರೈಲು ಸೇವೆಯು ರಾತ್ರಿ 2ಗಂಟೆವರೆಗೂ ಇರಲಿದ್ದು, ಮೆಜೆಸ್ಟಿಕ್‌ನಿಂದ ಬೈಯ್ಯ ಪ್ಪನಹಳ್ಳಿ, ಕೆಂಗೇರಿ, ರೇಷ್ಮೆ ಮಂಡಳಿ ಹಾಗೂ ನಾಗಸಂದ್ರ ಮಾರ್ಗಕ್ಕೆ ರಾತ್ರಿ 2ಕ್ಕೆ ಕೊನೆಯ ರೈಲು ಹೊರಡಲಿದೆ.

1 ಗಂಟೆವರೆಗೂ ಮಾತ್ರ ಅವಕಾಶ:

ಕೊರೋನಾ ಹಿನ್ನೆಲೆ ರಾಜ್ಯ ಸರ್ಕಾರ ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಹೋಟೆಲ್‌, ಬಾರ್‌, ಪಬ್‌, ರೆಸ್ಟೋರೆಂಟ್‌ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಭಾಗವಹಿಸುವ ಎಲ್ಲರಿಗೂ ಮಾಸ್ಕ್‌ , ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಮಾಸ್ಕ್‌ ಜತೆಗೆ 2 ಡೋಸ್‌ ಲಸಿಕೆ ಕಡ್ಡಾಯಗೊಳಿಸಲಾಗಿದೆ. ನಿಗದಿತ ಆಸನಗಳಷ್ಟೇ ಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಅಂತೆಯೇ ಸಾರ್ವಜನಿಕ ಕಾರ್ಯಕ್ರಮಗಳನ್ನು ರಾತ್ರಿ 1 ಗಂಟೆ ಮೊದಲೇ ಮುಕ್ತಾಯಗೊಳಿಸಬೇಕಿದೆ. ಇವುಗಳನ್ನು ಮರೆಯದಂತೆ ಪಾಲನೆ ಮಾಡಲು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಕೋರಿವೆ.

New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ

ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್‌: 

ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲ ಮೇಲ್ಸೇತುವೆಗಳಲ್ಲಿ (ಹೆಬ್ಬಾಳ ಹೊರತುಪಡಿಸಿ) ಡಿ.31ರ ರಾತ್ರಿ 9 ಗಂಟೆಯಿಂದ ಜ. 1ರ ಬೆಳಿಗ್ಗೆ 6 ಗಂಟೆವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

10 ಸಾವಿರ ಪೊಲೀಸ್‌; 1.70 ಲಕ್ಷ ಸಿಸಿಟಿವಿಯ ಕಣ್ಗಾವಲು

ಹೊಸವರ್ಷ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯಂತೆ ಎಚ್ಚರಿಕೆ ವಹಿಸಲು ಪೊಲೀಸ್‌ ಇಲಾಖೆ ರಾಜಧಾನಿಯಲ್ಲಿ 10 ಸಾವಿರ ಪೊಲೀಸರು ಹಾಗೂ 1.70 ಲಕ್ಷ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನೊಂದಿದೆ ಬಿಗಿ ಭ ದ್ರತಾ ಕೋಟೆ ನಿರ್ಮಿಸಲಾಗಿದೆ. ಹೆಚ್ಚು ಜನ ಸಂದಣಿ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗೆ ವಾಚ್‌ ಟವರ್‌ ನಿರ್ಮಿಸಿದ್ದು, ನಗರದ ಪ್ರಮುಖ ಸ್ಥಗಳಲ್ಲಿ ಶ್ವಾನದಳ ಹಾಗೂ ಬಾಂಬ್‌ ನಿಷ್ಕ್ರೀಯ ದಳಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಮಹಿಳೆಯರ ಸುರಕ್ಷತೆಗಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ.

Follow Us:
Download App:
  • android
  • ios