ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಆರಂಭದಲ್ಲಿ ಖಡಕ್ ಮಾರ್ಗಸೂಚಿ ಪ್ರಕಟಿಸಿದೆ. ಕೆಲ ಪ್ರಮುಖ ನಿರ್ಬಂಧನೆ, ನಿಷೇಧಗಳನ್ನು ಹೇರಲಾಗಿದೆ.
ಬೆಂಗಳೂರು (ಆ.08) ಗಣೇಶ ಹಬ್ಬಕ್ಕಾಗಿ ತಯಾರಿಗಳು ಈಗಿನಿಂದಲೇ ಆರಂಭಗೊಂಡಿದೆ. ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಸಂಭ್ರಮ. ಈಗಾಗಲೇ ಗಣೇಶನ ವಿಗ್ರಹ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರು ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ ಹೊರಬಂದಿದೆ. ಆರಂಭಿಕ ಹಂತದಲ್ಲಿ ಪರಿಸರ ಪೂರಕ ಗಣೇಶ ವಿಗ್ರಹಗಳಿಗೆ ಮಾತ್ರ ಅವಕಾಶವಿದೆ. ಪಿಒಪಿ ಹಾಗೂ ಯಾವುದೇ ರಾಸಾಯನಿಕ ವಸ್ತುಗಳ ಗಣೇಶ ವಿಗ್ರಹ ತಯಾರಿಗೆ, ಮಾರಾಟ, ವಿಸರ್ಜನೆಗೆ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
Pop ಹಾಗೂ ರಾಸಾಯನಿಕ ಗುಣವುಳ್ಳ ಗಣೇಶ ವಿಗ್ರಹ ತಯಾರಿಕೆ, ಮಾರಾಟ, ಸಂಗ್ರಹ, ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳಿಗೆ ಬ್ರೇಕ್ ಹಾಕಲಾಗಿದೆ. ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣ ಬಳಕೆಯ ವಿಗ್ರಹಗಳಿಗೂ ನಿಷೇಧ ಹೇರಲಾಗಿದೆ. ಹೀಗಾಗಿ POP ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟೇ ಅಲ್ಲ ಕೆರೆ, ಬಾವಿ ಸೇರಿದಂತೆ ಯಾವುದೇ ಜಲಮೂಲದಲ್ಲಿ POP ವಿಗ್ರಹ ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ.
ನಿಯಮ ಉಲ್ಲಂಘಿಸಿದರೆ 1986ರ ಕಾಯ್ದೆ ಅಡಿ ಕ್ರಮ
ಜಲಮೂಲಗಳ ಮಾಲಿನ್ಯ ತಡೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರಾಜ್ಯಾದ್ಯಂತ ನೀರಿನ ಮೂಲಗಳು ಯಾವುದೇ ಮಾಲಿನ್ಯಕ್ಕೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಭಾರ ಲೋಹಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ವಿಗ್ರಹಗಳು ಹಾಗು ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿ ಉಲ್ಲಂಘನೆ ದಂಡನೀಯ ಅಪರಾಧವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವಂತಹ ಪ್ರದೇಶಗಳಲ್ಲಿ ಪ್ರತಿ ವರ್ಷ ಹಬ್ಬ-ಹರಿದಿನಗಳಂದು ಪೂಜಿಸಲ್ಪಟ್ಟ ವಿಗ್ರಹಗಳನ್ನು ಕೆರೆ, ಬಾವಿ ಹಾಗೂ ಇತರೆ ನೀರಿನ ಮೂಲಗಳಲ್ಲಿ ವ್ಯಾಪಕವಾಗಿ ವಿಸರ್ಜನೆ ಮಾಡಲಾಗುತ್ತಿದೆ. ಈ ವಿಗ್ರಹಗಳಿಗೆ ಭಾರೀ ಲೋಹಗಳನ್ನೊಳಗೊಂಡ ರಾಸಾಯನಿಕ ಬಣ್ಣಗಳನ್ನು ಅಳವಡಿಸಿ ಮತ್ತು ಕೃತಕ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗುತ್ತದೆ. ಜಾಗರೂಕತೆ ಹಾಗೂ ಕಾಳಜಿ ವಹಿಸದೆ ವಿಗ್ರಹಗಳ ವಿಸರ್ಜನೆ ಮಾಡಲಾಗುತ್ತದೆ. ಇದರಿಂದ ಜಲ ಹಾಗೂ ಭೂಮಿ ಕಲುಷಿತಗೊಂಡು ಪರಿಸರಕ್ಕೆ ಹಾನಿಯಾಗುತ್ತದೆ. ಜಲ ಮೂಲಗಳಲ್ಲಿರುವ ಜೀವ ರಾಶಿಗೆ ಅಪಾಯವಾಗುತ್ತದೆ. ಪರಿಸರ ಹಾನಿಯನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ ಹಾಗು ಆದ್ಯ ಕರ್ತವ್ಯವಾಗಿದೆ ಎಂದು ಜಿಬಿಎ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.


