ಬೆಂಗಳೂರಿನಲ್ಲಿ ತಡರಾತ್ರಿ ಎರಡು ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿವೆ. ನಾಗರಬಾವಿ ಬಳಿಯ ಹೊಟೇಲ್‌ನಲ್ಲಿ ನಡೆದ ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು ನಾಲ್ವರು ಗಾಯಗೊಂಡರೆ, ಕೆ.ಆರ್ ಪುರಂ ಬಳಿಯ ಬೈಕ್ ಶೋರೂಂನಲ್ಲಿ 20 ಹೊಸ ಬೈಕ್‌ಗಳು ಸುಟ್ಟು ಕರಕಲಾಗಿವೆ.
ಬೆಂಗಳೂರು ನಗರದಲ್ಲಿ ತಡರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಬೆಂಕಿ ಅವಘಡಗಳು ಅನಾಹುತ ಸಂಭವಿಸಿದೆ. ಒಂದರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಇನ್ನೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಆಸ್ತಿ ನಾಶವಾಗಿದೆ.

ಹೊಟೇಲ್ ನಲ್ಲಿ ಅಗ್ನಿ ದುರಂತ ಓರ್ವ ಸಾವು, ನಾಲ್ವರು ಗಂಭೀರ
ನಗರದ ನಾಗರಬಾವಿ ಸಮೀಪದ ಮಾಳಗಾಳದಲ್ಲಿ ಇರುವ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಹೋಟೆಲ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಅದು ವ್ಯಾಪಕವಾಗಿ ಹರಡಿದೆ. ಹೋಟೆಲ್‌ನ ಮೇಲ್ಮಹಡಿಯಲ್ಲಿ ವಾಸವಾಗಿದ್ದ ಸಿಬ್ಬಂದಿ ಕೊಠಡಿಗಳಿಗೂ ಬೆಂಕಿ ತಗುಲಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ.
ಘಟನೆಯ ವೇಳೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಕಾರಣ, ನಿದ್ರೆಯಲ್ಲಿದ್ದ ಅವರಿಗೆ ಹೊರಬರಲು ಸಾಧ್ಯವಾಗದೆ ಒಳಗೇ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾದಂತೆ, ಮೇಲಿನ ಮಹಡಿಯನ್ನೇ ಆವರಿಸಿಕೊಂಡಿದ್ದು, ಒಳಗಿದ್ದವರ ರಕ್ಷಣೆ ಕಷ್ಟಕರವಾಗಿತ್ತು.
ಈ ದುರ್ಘಟನೆಯಲ್ಲಿ ಮಧ್ಯಪ್ರದೇಶ ಮೂಲದ ರಾಜ್ ಕುಮಾರ್ (40) ಎಂಬ ಕಾರ್ಮಿಕ ದುರ್ಮರಣಕ್ಕೀಡಾಗಿದ್ದಾನೆ. ಉಳಿದ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹಲವು ಗಂಟೆಗಳ ಶ್ರಮದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಹೋಟೆಲ್ ನಲ್ಲಿ ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ದುರ್ಗಾ ಗ್ರ್ಯಾಂಡ್ ಮ್ಯಾನೇಜರ್ ಯತೀಶ್ ಹೇಳಿಕೆ ನೀಡಿ, ಬೆಳಗಿನ ಜಾವ ಈ ಘಟನೆ ನಡೆದಿದೆ. 30-35 ಜನ ಹೋಟೆಲ್ ನಲ್ಲಿ ಕೆಲಸ ಮಾಡ್ತಾ ಇದ್ರು. ಕೆಲಸಗಾರರು ಒಂದನೇ ಮಹಡಿಯಲ್ಲಿ ಮಲಗಿದ್ದರು. ಐವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಬೆಂಕಿ ಬಿದ್ದಿದ್ದೇ ಹೊರಗಡೆ ಬರೋಕೆ ಪ್ರಯತ್ನ ಮಾಡಿದ್ದಾರೆ. ಈ ವೇಳೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಮಾತ್ರ ಹೊಗೆಯಿಂದ ಉಸಿರಾಡಲು ಆಗಿಲ್ಲ. ಈತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ, ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ. 15 ದಿನಗಳ ಹಿಂದೆಯಷ್ಟೇ ರಾಜಕುಮಾರ್ ಕೆಲಸಕ್ಕೆ ಸೇರಿದ್ದ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ಆಗಿರಬಹುದು. ಪೊಲೀಸರು ಬಂದಿದ್ರೂ ತನಿಖೆ ಮಾಡ್ತಾ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
20 ಹೊಸ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮ!
ಇದಕ್ಕೂ ಬೆನ್ನಲ್ಲೇ ನಗರದ ಕೆ.ಆರ್ ಪುರಂ ಟಿನ್ ಫ್ಯಾಕ್ಟರಿ ಪ್ರದೇಶದ ಸಮೀಪದಲ್ಲಿರುವ ಹೋಂಡಾ ಬೈಕ್ ಶೋ ರೂಮ್‌ನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ನಿನ್ನೆ ತಡರಾತ್ರಿ ನಡೆದ ಈ ಘಟನೆಯಲ್ಲಿ ಶೋ ರೂಮ್‌ನೊಳಗೆ ಇರಿಸಲಾಗಿದ್ದ ಸುಮಾರು 20 ಹೊಸ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಮಹಾದೇವಪುರ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡವು. ಅಗ್ನಿ ಅವಘಡದಿಂದ ಉಂಟಾದ ನಷ್ಟದ ಅಂದಾಜು ಇನ್ನಷ್ಟೇ ತಿಳಿದುಬರಬೇಕಿದೆ. ಪ್ರಾಥಮಿಕವಾಗಿ ಇಲ್ಲಿ ಕೂಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಈ ಎರಡೂ ಘಟನೆಗಳು ನಗರದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೆ ಪ್ರಶ್ನೆ ಎಬ್ಬಿಸುತ್ತಿದ್ದು, ವಿಶೇಷವಾಗಿ ವಾಣಿಜ್ಯ ಕಟ್ಟಡಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆ ತೀವ್ರವಾಗಿ ವ್ಯಕ್ತವಾಗುತ್ತಿದೆ.


