ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಆಗಮಿಸುತ್ತಿದ್ದ ವೇಳೆ ಚಾಮರಾಜನಗರ ಜಿಲ್ಲೆಯ ರೈತ ಈಶ್ವರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಂಗಳೂರು (ಜು. 4): ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಆಗಮಿಸುತ್ತಿದ್ದ ವೇಳೆ ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆಯ ರೈತ ಈಶ್ವರ್ (50) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಮಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ. ರೈತ ಹೋರಾಟದ ಮೂಲಕವೇ ಗುರುತಿಸಿಕೊಂಡ ಈಶ್ವರ್ ಅವರ ದುರ್ಮರಣವು ರೈತ ಸಂಘಟನೆಗಳಲ್ಲಿ ನೋವು ಮತ್ತು ಸರ್ಕಾರದ ನಿಷ್ಕಾಳಜಿ ವಿರುದ್ಧ ಆಕ್ರೋಶ ಉಂಟುಮಾಡಿದೆ.

ಘಟನೆ ವಿವರ: ರೈಲು ನಿಲ್ದಾಣದ ಬಳಿ ಕುಸಿತ

ಗುಂಡ್ಲಪೇಟೆಯ ಕುರುಬರಹುಂಡಿ ಗ್ರಾಮದ ಈಶ್ವರ್, ಬೆಳಗ್ಗೆ ಗುಂಡ್ಲಪೇಟೆಯಿಂದ ಮೈಸೂರಿಗೆ ಬಂದು, ಅಲ್ಲಿ ರೈಲಿಗೆ ಹತ್ತಿ ಬೆಂಗಳೂರಿಗೆ ಆಗಮಿಸಿದ್ದರು. ಮಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ರೈಲು ಇಳಿದು ಹೊರ ಬರುತ್ತಿದ್ದಾಗ ಅವರು ದಿಢೀರನೆ ಅಸ್ವಸ್ಥರಾಗಿ ನೆಲಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಪೊಲೀಸರ ತಂಡ ಕೂಡಲೇ ಸಿಪಿಆರ್ (CPR) ನೀಡಿ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು.

ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು:

ಅಸ್ವಸ್ಥ ರೈತ ಈಶ್ವರ್ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ತಕ್ಷಣ ಶಿಫ್ಟ್ ಮಾಡಲು ಆಂಬುಲೆನ್ಸ್ ತಯಾರಿ ಮಾಡಲಾಯಿತು. ಆದರೆ, ಚಿಕಿತ್ಸೆಗೆ ಕೊಂಡೊಯ್ಯುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿರಬಹುದು ಎಂದು ವೈದ್ಯರು ದೃಢಪಡಿಸಿದರು. ಪ್ರಾಥಮಿಕ ತನಿಖೆಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಅವರಿಗೆ ಈಗಾಗಲೇ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಇರುವ ಇತಿಹಾಸವಿತ್ತು ಎಂದು ಅವರ ಪರಿಚಿತ ರೈತರು ತಿಳಿಸಿದ್ದಾರೆ.

ಸರ್ಕಾರವೇ ರೈತನ ಸಾವಿಗೆ ಕಾರಣ

ರೈತ ಸಂಘದ ಕಾರ್ಯದರ್ಶಿ ಕಿರಣ್ ಸಿದ್ದಾಪುರ ಮಾತನಾಡಿ, ಈಶ್ವರ್ ಅವರು ರೈತರ ಪರವಾಗಿ ಹೋರಾಟ ಮಾಡುತ್ತಿದ್ದರು. ಇಂದು ಬೆಳಗ್ಗೆ ಗುಂಡ್ಲಪೇಟೆಯಿಂದ ಮೈಸೂರಿಗೆ ಬಂದು ರೈಲಿಗೆ ಹತ್ತಿದ್ದಾರೆ. ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದಾರೆ. ರೈಲು ಇಳಿದು ಹೊರ ಬರುವಾಗ ಅಸ್ವಸ್ಥರಾಗಿದ್ದಾರೆ. ಬಳಿಕ ರೈತ ಈಶ್ವರ್‌ಗೆ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದೆ. ಆ ಬಳಿಕ ಆಂಬ್ಯುಲೆನ್ಸ್ ಕರೆಸಿ ಅಪೋಲೋಗೆ ಶಿಫ್ಟ್ ಮಾಡಿದ್ದಾರೆ. ವೈದ್ಯರು ಪರೀಕ್ಷೆ ನಡೆಸಿ ಹಾರ್ಟ್ ಅಟ್ಯಾಕ್ ಅಂತ ಹೇಳಿದ್ದಾರೆ. ರೈತ ಈಶ್ವರ್ ದೇವನಹಳ್ಳಿ ಬಳಿ ನಡೆದಿದ್ದ ಹೋರಾಟಕ್ಕೆ ಕೂಡ ಬಂದಿದ್ದರು. ರೈತ ಈಶ್ವರ್ ಸಾವಿಗೆ ಸರ್ಕಾರವೇ ಹೊಣೆ. ರೈತರ ಪ್ರತಿಭಟನೆ ಫ್ರೀಡಂ ಪಾರ್ಕ್ ನಲ್ಲಿ ಇಲ್ಲದಿದ್ದರೆ ನಾವು ಬರುತ್ತಿರಲಿಲ್ಲ. ರೈತನ ಸಾವಿಗೆ ಸರ್ಕಾರವೇ ಹೊಣೆ. ರೈತರಿಗೆ ಈ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕಿರಣ್ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಭೇಟಿ ನಿರಾಕರಣೆ:

ಸಿಎಂ ಸಿದ್ದರಾಮಯ್ಯ ಅಪೋಲೋ ಆಸ್ಪತ್ರೆಗೆ ಬಂದು ಮೃತ ರೈತ ಈಶ್ವರ್ ಅವರನ್ನು ಭೇಟಿಯಾಗುವುದಾಗಿ ಮೊದಲು ಹೇಳಿದ್ದರೂ, ಕೊನೆ ಕ್ಷಣದಲ್ಲಿ ನಿರಾಕರಿಸಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ, ಮೃತದೇಹವನ್ನು ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.