ಬೆಂಗಳೂರಿನ ಪಾರ್ಕ್‌ಗಳಲ್ಲಿ ಪ್ರೇಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆಸೀಫ್ ಎಂಬ ನಕಲಿ ಪೊಲೀಸನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕನಾಗಿದ್ದ ಆಸೀಫ್, ತಾನು ಪೊಲೀಸ್ ಎಂದು ಹೇಳಿಕೊಂಡು, ಪ್ರೇಮಿಗಳಿಗೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿದ್ದನು. ಈತನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಅ.21): ಕರ್ನಾಟಕದ ಉದ್ಯಾನ ನಗರಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿಯೂ ಪಾರ್ಕ್‌ಗಳಿವೆ. ಜೊತೆಗೆ, ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಂತಹ ದೊಡ್ಡ ಪಾರ್ಕ್‌ಗಳು ಪ್ರೇಮಿಗಳು ಕಾಲ ಕಳೆಯಲು ತುಂಬಾ ಪ್ರಾಶಸ್ತ್ಯವಾಗಿವೆ. ಹೀಗಿರುವಾಗ, ಇಲ್ಲೊಬ್ಬ ವ್ಯಕ್ತಿ ಪೊಲೀಸ್ ಎಂದು ಹೇಳಿಕೊಂಡು ಪಾರ್ಕ್‌ಗಳಲ್ಲಿ ಪ್ರೇಮಿಗಳು ಕುಳಿತಿರುವ ಸ್ಥಳಕ್ಕೆ ತೆರಳಿ ಅವರಿಂದ ಹಣ ವಸೂಲಿ ಮಾಡುತ್ತಿದ್ದನು. ಈ ಬಗ್ಗೆ ಒಬ್ಬ ಜೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ನಕಲಿ ಪೊಲೀಸ್‌ನನ್ನು ಬಂಧಿಸಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಸುತತಾಡುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಅಸಲಿ ಪೊಲೀಸರು ಬಂಧನ ಮಾಡಿದ್ದಾರೆ. ಪಾರ್ಕ್ ನಲ್ಲಿ ಕುಳಿತಿರುವ ಪ್ರೇಮಿಗಳೇ ಇವನ ಟಾರ್ಗೆಟ್ ಆಗಿದ್ದರು. ಬಂಧಿತ ನಕಲಿ ಪೊಲೀಸ್ ಹೆಸರು ಆಸೀಫ್. ಜಯನಗರ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಆರೋಪಿ ಆಸೀಫ್, ಪಾರ್ಕ್ ನಲ್ಲಿ ಕುಳಿತಿರುವ ಪ್ರೇಮಿಗಳ ಬಳಿ ತೆರಳುತ್ತಿದ್ದನು. ನಂತರ ನಾನು ಪೊಲೀಸ್ ಈ ತರಹ ನೀವು ಪಾರ್ಕ್‌ನಲ್ಲಿ ಕೂರುವ ಹಾಗಿಲ್ಲ ಎಂದು ಬೆದರಿಕೆ ಹಾಕುತ್ತಿದ್ದನು. ಜೊತೆಗೆ, ನೀವು ಪಾರ್ಕ್‌ನಿಂದ ಹೊರಗೆ ಬನ್ನಿ ಇನ್ಸ್‌ಪೆಕ್ಟರ್ ಕಾಯುತ್ತಿದ್ದಾರೆ ಎಂದು ಹೆದರಿಸುತ್ತಿದ್ದನು.
ಹೀಗೆ ಬೆದರಿಕೆ ಹಾಕಿದ ನಂತರ ಯುವತಿಯನ್ನ ಪಾರ್ಕ್‌ನಲ್ಲಿಯೇ ಬಿಟ್ಟು ಯುವಕನನ್ನ ಸ್ವಲ್ಪ ಪಕ್ಕದಲ್ಲಿ ಅಥವಾ ಹೊರಗಡೆ ಕರೆತರುತ್ತಿದ್ದನು. ಯುವಕ ಒಬ್ಬನೇ ಜೊತೆಗೆ ಬಂದ ಇಲ್ಲಸಲ್ಲದ ಕೇಸು ಹಾಕುವುದಾಗಿ ಹೇಳಿ, ನಿಮ್ಮಿಬ್ಬರ ಫೋಟೋ, ವಿಡಿಯೋ ನ್ಯೂಸ್‌ನಲ್ಲಿ ಬರುವುದಾಗಿ ಬೆದರಿಕೆ ಹಾಕಿ ಎಷ್ಟು ಹಣವಿದೆಯೋ ಅಷ್ಟು ಹಣವನ್ನು ಕೊಡುವಂತೆ ಹೇಳುತ್ತಾರೆ. ನಂತರ, ಹಣ ಕಡಿಮೆಯಿದ್ದರೆ ಯುವಕನ ಮೈಮೇಲೆ ಇದ್ದ ಎಲ್ಲ ಆಭರಣಗಳನ್ನು ಸುಲಿಗೆ ಮಾಡುತ್ತಿದ್ದನು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಂದಿ ಅಧಿಕೃತ ಭಾಷೆ ಎಂದು ಫಲಕ ಪ್ರದರ್ಶಿಸಿದ ಹೋಟೆಲ್!
ಇದೇ ರೀತಿ ಪಾರ್ಕ್ ನಲ್ಲಿ ಕುಳಿತಿದ್ದ ಇಬ್ಬರು ಪ್ರೇಮಿಗಳ ಬಳಿ 12 ಗ್ರಾಂ ಚಿನ್ನದ ಸರ, 5 ಗ್ರಾಂ ಉಂಗುರ ಹಾಗೂ 10 ಸಾವಿರ ಹಣ ಡ್ರಾ ಮಾಡಿಸಿಕೊಂಡು ನಕಲಿ ಪೊಲೀಸ್ ಆಸೀಫ್ ಪರಾರಿ ಆಗಿದ್ದನು. ಇದೆ ರೀತಿ ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಈ ಬಗ್ಗೆ ಹಣ, ಚಿನ್ನಾಭರಣ ಕಳೆದಿಕೊಂಡ ಪ್ರೇಮಿಗಳಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಆಸೀಫ್‌ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
