ಬೆಂಗಳೂರಿನ ಹೋಟೆಲ್‌ನಲ್ಲಿ ಹಿಂದಿ ಅಧಿಕೃತ ಭಾಷೆಯೆಂದು ಬೋರ್ಡ್ ಹಾಕಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನೇಜರ್ ಕೃತ್ಯ ಎಸಗಿ ಪರಾರಿಯಾಗಿದ್ದು, ಹೋಟೆಲ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಹಿಂದಿ ಹೇರಿಕೆ ವಿರೋಧದ ನಡುವೆ ನಡೆದಿದೆ.
ಬೆಂಗಳೂರು (ಅ.21): ರಾಜ್ಯದಲ್ಲಿ ಮರಾಠಿಗಳ ಪುಂಡಾಟ ಹಾಗೂ ಬೆಂಗಳೂರಿನಲ್ಲಿ ಅನ್ಯಭಾಷಿಕರ ಹಾವಳಿ ತಡೆಯಲು ನಾಳೆ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಒಂದು ಹೋಟೆಲ್ ಮ್ಯಾನೇಜರ್ ನಮ್ಮ ಹೋಟೆಲ್‌ನಲ್ಲಿ ಹಿಂದಿ ಅಧಿಕೃತ ಭಾಷೆಯಾಗಿದೆ. ಇಲ್ಲಿ ಹಿಂದಿ ಅಫೀಶಿಯಲ್ ಲಾಂಗ್ವೇಜ್ ಎಂದು ಫಲಕ ಅಳವಡಿಕೆ ಮಾಡಿ ಉದ್ಧಟತನ ಮೆರೆದಿದ್ದಾರೆ. ಈ ಮೂಲಕ ಕನ್ನಡಿಗರನ್ನು ಕೆರಳಿಸುವ ಕಾರ್ಯ ಮಾಡುತ್ತಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಹಿಂದಿ ಏರಿಕೆಗೆ ವಿರೋಧ ವ್ಯಕ್ತವಾಗಿದ್ದರೂ, ಇದರ ನಡುವೆ ಅನ್ಯ ರಾಜ್ಯದಿಂದ ಮ್ಯಾನೇಜರ್ ಕೆಲಸಕ್ಕೆ ಬಂದಿರುವ ವ್ಯಕ್ತಿಯೊಬ್ಬ ಬೆಂಗಳೂರಿನ ಹೊಟೇಲ್ ಒಂದರಲ್ಲಿ ಹಿಂದಿ ಬೋರ್ಡ್ ಅಳವಡಿಕೆ ಮಾಡಿ ಉದ್ದಟತನ ಮೆರೆದಿದ್ದಾನೆ. ಹಿಂದಿ ಇಸ್ ಎ ಅಫೀಷಿಯಲ್ ಲಾಂಗ್ವೇಜ್ (Hindi is an official language) ಬೋರ್ಡ್ ಅಳವಡಿಕೆ ಮಾಡಿದ್ದಾರೆ. ಇಲ್ಲಿ ಕನ್ನಡ ಬೋರ್ಡ್ ಬದಲು ಹಿಂದಿ ಭಾಷೆ ಬೋರ್ಡ್ ಅಳವಡಿಕೆಯನ್ನೂ ಮಾಡಿದ್ದಾನೆ.
ಇನ್ನು ಹೋಟೆಲ್‌ನ ಹೊರಗಡೆ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ಕೆರಳಿಸುವ ಕೆಲಸ ಮಾಡಿದ್ದಾನೆ. ಇಲ್ಲಿಯೂ ಕೂಡ ಹಿಂದಿ ಅಫೀಷಿಯಲ್ ಲಾಂಗ್ವೇಜ್ ಎಂದು ಫಲಕ ಹಾಕಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜೊತೆಗೆ ಕನ್ನಡಿಗರ ಆಕ್ರೋಶ ವ್ಯಕ್ತವಾಗುವುದನ್ನು ಅರಿತ ಮ್ಯಾಜೇಜರ್ ಹೋಟೆಲ್‌ನಲ್ಲಿ ಕೆಲಸ ಬಿಟ್ಟು ಪರಾರಿ ಆಗಿದ್ದಾನೆ, ಈತನೇ ಈ ಕೃತ್ಯ ಎಸಗಿ ಬಿಟ್ಟು ಹೋಗಿದ್ದಾನೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ವಿದ್ಯಾರಣ್ಯಪುರದ ಎಂ.ಎಸ್.ಪಾಳ್ಯ ಸರ್ಕಲ್‌ನಲ್ಲಿ ಇರುವ ಗುರು ದರ್ಶನ್ ಕೆಫೆಯಲ್ಲಿ ಈ ಕುಕೃತ್ಯ ನಡೆಸಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಹೈಡ್ರಾಮಾ, ಸ್ಪೀಕರ್ ಮೇಲೆ ಬಜೆಟ್ ಪ್ರತಿ ಎಸೆದು ಧಿಕ್ಕಾರ ಕೂಗಿದ ಶಾಸಕರು!
ಗುರು ದರ್ಶನ್ ಹೋಟೆಲ್ ಮೇಲ್ಭಾಗದಲ್ಲಿ ಹಿಂದಿ ಭಾಷೆ ಅಧುಕೃತ ಎಂಬುದನ್ನು ಯಾವಾಗ ಪ್ರದರ್ಶನ ಮಾಡಿದರೋ ಅದನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೆಲವರಿಂದ ಆಕ್ರೋಶವೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು ಹೋಟೆಲ್ ಮೇಲೆ ಅಳವಡಿಕೆ ಮಾಡಿದ್ದ ಹಿಂದಿ ಭಾಷೆ ಅಧಿಕೃತ ಎಂಬ ಬೋರ್ಡ್ ತೆರವು ಮಾಡಿಸಿದ್ದಾರೆ. ಜೊತೆಗೆ, ಈ ಬಗ್ಗೆ ಕಟ್ಟಡದ ಮಾಲೀಕರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ.
ಕಟ್ಟಡ ಹಾಗೂ ಹೋಟೆಲ್ ಮಾಲೀಕರು ಹೇಳುವ ಪ್ರಕಾರ ಹೋಟೆಲ್ ಮ್ಯಾನೇಜರ್ ಈ ರೀತಿ ಕೃತ್ಯ ಎಸಗಿದ್ದಾರೆ. ವಿಚಾರಣೆ ವೇಳೆ ಹಳೇ ಮ್ಯಾನೇಜರ್ ಕೃತ್ಯ ಬಯಲಾಗಿದೆ. ಸದ್ಯ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೂ, ಪೊಲೀಸರು ಕೃತ್ಯದ ಹಿಂದಿರುವ ಉದ್ದೇಶವನ್ನು ತಿಳಿದುಕೊಳ್ಳಲು ತನಿಖೆ ಕೈಗೊಂಡಿದ್ದಾರೆ. ಇದೀಗ ಬೆಂಗಳೂರು ಸೇರಿದಂತೆ ವಿವಿಧೆಡೆ ಹಿಂದಿ ಏರಿಕೆ ವಿರುದ್ಧ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಕರ್ನಾಟಕ ,ತಮಿಳುನಾಡು ಸೇರಿದಂತೆ ದಕ್ಷಿಣ ಭಾರತ ರಾಜ್ಯಗಳ ವಿರೋಧಿಸಿವೆ. ಇದರ ಮಧ್ಯೆ ಹಿಂದಿ ಭಾಷೆ ಅಧಿಕೃತವಾದ ಭಾಷೆ ಎಂದು ಹಾಕಿರೋದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಕೇವಲ ₹15000 ಬಂಡವಾಳ ಹಾಕಿ ಈ ಬಿಸಿನೆಸ್, ಆರಂಭಿಸಿ ಲಕ್ಷಗಳಲ್ಲಿ ಲಾಭ ಗಳಿಸಿ!
