ಬೆಂಗಳೂರು (ಅ.16):  ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕೋವಿಡ್‌-19ರಿಂದ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಯೊಬ್ಬರ ಶವ ಪರೀಕ್ಷೆಯನ್ನು ಖ್ಯಾತ ವಿಧಿ ವಿಜ್ಞಾನ ತಜ್ಞ ದಿನೇಶ್‌ ರಾವ್‌ ನಡೆಸಿದ್ದಾರೆ. ಈ ಶವ ಪರೀಕ್ಷೆಯ ಫಲಿತಾಂಶ ಅಕ್ಟೋಬರ್‌ 22ರಂದು ಪ್ರಕಟಿಸುವುದಾಗಿ ಅವರು  ತಿಳಿಸಿದ್ದಾರೆ.

ದೇಶದಲ್ಲಿ ಗುಜರಾತ್‌ನಲ್ಲಿ ಮಾತ್ರ ಕೋವಿಡ್‌ನಿಂದ ಸತ್ತ ವ್ಯಕ್ತಿಯೊಬ್ಬರ ಶವ ಪರೀಕ್ಷೆ ನಡೆದಿದ್ದು, ದಿನೇಶ್‌ ರಾವ್‌ ಅವರದ್ದು ಎರಡನೇ ಪ್ರಯತ್ನವಾಗಿದೆ.

ಕೊರೋನಾ ಲಸಿಕೆ ಹಾಗೂ ಸಂಶೋಧನೆ ಕುರಿತು ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ! ..

ಮಧುಮೇಹ, ಹೈಪರ್‌ ಟೆನ್ಷನ್‌ನಂತಹ ಪೂರ್ವ ಕಾಯಿಲೆಗಳಿದ್ದು, ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದ 65 ವರ್ಷದ ಗಂಡು ಶವದ ಪರೀಕ್ಷೆಯನ್ನು ನಡೆಸಲಾಗಿದೆ. ಈಗ ಕೋವಿಡ್‌ನಿಂದಾಗಿ ದೇಹದ ಅಂಗಗಳ ಮೇಲೆ ಆಗಿರುವ ಪರಿಣಾಮದ ಬಗ್ಗೆ ವಿವರವಾಗಿ ಮಾಹಿತಿ ಪಡೆಯುತ್ತಿದ್ದೇವೆ. ಅಚ್ಚರಿ ಎನಿಸುವ ಅನೇಕ ಅಂಶಗಳು ಈಗಾಗಲೇ ತಿಳಿದುಬಂದಿವೆ. ಆದರೆ ಪೋಸ್ಟ್‌ ಮಾರ್ಟಂನ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡ ಬಳಿಕವೇ ಮಾಹಿತಿಯನ್ನು ಬಹಿರಂಗ ಪಡಿಸುವುದಾಗಿ ದಿನೇಶ್‌ ರಾವ್‌ ಹೇಳುತ್ತಾರೆ.

ನಾನು ಸಾವಿರಾರು ಶವಗಳ ಪರೀಕ್ಷೆ ಮಾಡಿದ್ದೇನೆ. ಆದರೆ ಕೋವಿಡ್‌ನಿಂದ ಸತ್ತ ವ್ಯಕ್ತಿಯ ಶವ ಪರೀಕ್ಷೆ ನಡೆಸುತ್ತಿರುವುದು ವಿಭಿನ್ನ ಅನುಭವ ನೀಡಿದೆ. ಸಾಮಾನ್ಯವಾಗಿ ಶವ ಪರೀಕ್ಷೆ ನಡೆಸಿದ ಮೂರ್ನಾಲ್ಕು ದಿನದಲ್ಲಿ ವರದಿಯನ್ನು ನೀಡಲು ಸಾಧ್ಯವಾಗುತ್ತದೆ. ಆದರೆ ಕೋವಿಡ್‌ನಿಂದ ಮರಣವನ್ನಪ್ಪಿದ್ದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಅಧ್ಯಯನ ನಡೆಸುತ್ತಿದ್ದೇನೆ. ಅಂಗಾಂಗಗಳನ್ನು ನಿಗದಿಯಂತೆ 72 ಗಂಟೆಗಳ ಕಾಲ ರಾಸಾಯನಿಕದಲ್ಲಿ ಇಡಲಾಗಿದೆ. ಆ ಬಳಿಕ ಅಧ್ಯಯನ ನಡೆಸಿ ವರದಿ ರೂಪಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳುತ್ತೇನೆ ಎಂದು ದಿನೇಶ್‌ ರಾವ್‌ ಹೇಳಿದರು.

ಕೋವಿಡ್‌ನಿಂದ ಸತ್ತವರ ಶವವನ್ನು ಅಧ್ಯಯನ ನಡೆಸಲು ಕೊಡುವಂತೆ ಸರ್ಕಾರದ ಬಳಿ ಕೇಳಿ ಕೇಳಿ ಸಾಕಾಯ್ತು. ಸರ್ಕಾರದಿಂದ ಒಂದು ಶವವೂ ನಮಗೆ ಸಿಗಲಿಲ್ಲ. ಆ ಬಳಿಕ ದಾನಿಯೊಬ್ಬರು ನೀಡಿದ ಶವವನ್ನು ಅಧ್ಯಯನ ನಡೆಸುತ್ತಿದ್ದೇನೆ. ಎರಡ್ಮೂರು ಶವ ಸಿಕ್ಕಿದ್ದರೆ ಅಧ್ಯಯನ ಇನ್ನಷ್ಟುಅರ್ಥಪೂರ್ಣವಾಗುತ್ತಿತ್ತು. ರೋಗದ ಬಗ್ಗೆ ಶವ ಪರೀಕ್ಷೆಯಿಂದ ಮಾತ್ರ ತಿಳಿದುಕೊಳ್ಳಲು ಸಾಧ್ಯ. ರೋಗದಿಂದ ದೇಹದ ಯಾವ ಭಾಗಗಳಿಗೆ ಏನೆಲ್ಲ ಹಾನಿಯಾಗಿದೆ ಎಂಬ ಪೂರ್ಣ ಅರಿವು ವಿಜ್ಞಾನ ಲೋಕಕ್ಕೆ ಇರಬೇಕು. ಆಗ ಮಾತ್ರ ಪರಿಣಾಮಕಾರಿ ಚಿಕಿತ್ಸಾ ಕ್ರಮ ರೂಪಿಸಲು ಸಾಧ್ಯ. ಇಲ್ಲದಿದ್ದರೆ ಕುರುಡಾಗಿ ಚಿಕಿತ್ಸೆ ನೀಡುತ್ತಿರುತ್ತೇವೆ ಎಂದು ದಿನೇಶ್‌ ರಾವ್‌ ಹೇಳಿದರು.