ಬೆಂಗಳೂರು: ನಗರ ಬೆಳೆಯುತ್ತಿದೆ. ಅಪರಾಧ ಸಂಖ್ಯೆಯೂ ಹೆಚ್ಚುತ್ತಿದೆ. ಒಂದೆಡೆ ಹೊರ ರಾಜ್ಯಗಳಿಂದ ರಾಜ್ಯಕ್ಕೆ ವಿವಿಧ ಕಾರಣಗಳಿಂದ ವಲಸೆಗಾರರು ಬರುತ್ತಿದ್ದರೆ, ರಾಜ್ಯದ ವಿವಿಧ ಭಾಗಗಳಿಂದಲೂ ಬೆಂಗಳೂರು ಎಂಬ ಮಾಯಾನಗರಿಯನ್ನು ಹೊಕ್ಕುತ್ತಿದ್ದಾರೆ ಮಂದಿ. 

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನಮ್ಮನ್ನು ಕಾಯುವ ಪೊಲೀಸರು ಹೆಚ್ಚಲೇ ಬೇಕು. ಆದರೆ, ಅದೆಲ್ಲವನ್ನೂ ಕಾರ್ಯಗತಗೊಳಿಸುವುದು ಹೇಳಿದಷ್ಟು ಸುಲಭವಲ್ಲ. ಸರಕಾರ ನಡೆಸುವ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು. ಅದಕ್ಕೆ ಹಣ ಬೇಕು... ಆದರೆ, ಇರುವ ಪೊಲೀಸ್ ಸಂಪನ್ಮೂಲದಲ್ಲಿಯೇ ಅಪರಾಧ ಸಂಖ್ಯೆ ಕಡಿಮೆ ಮಾಡಿಕೊಳ್ಳಲು ಇತ್ತೀಚೆಗೆ ಕನಕಪುರ ರಸ್ತೆಯ ಶೋಭಾ‌ಹಿಲ್‌ವ್ಯೂನಲ್ಲಿ ನಡೆದ ಕುಂದು ಕೊರತೆ ಸಭೆಯೊಂದರಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಸಿಂಪಲ್ ಟಿಪ್ಸ್ ನೀಡಿದ್ದಾರೆ.

ಬಾಂಧವ್ಯ  ವೃದ್ಧಿಸಿಕೊಳ್ಳಿ: 
'ನಿಮ್ಮ ಏರಿಯಾದ ಬೀಟ್ ಪೊಲೀಸರೊಂದಿಗೆ ಸಂಪರ್ಕದಲ್ಲಿರಿ. ನಿಮ್ಮ ಸಮಸ್ಯೆಗಳನ್ನು ಅವರಿಗೆ ಅರ್ಥ ಮಾಡಿಸಿ. ಕಷ್ಟವೆಂದಾಗ ಅವರೂ ಸ್ಪಂದಿಸುತ್ತಾರೆ. ಅವರೊಂದಿಗೆ ಒಂದು ಬಾಂಧವ್ಯ ವೃದ್ಧಿಸಿಕೊಳ್ಳಿ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಈ ಬೀಟ್ ಪೊಲೀಸರ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಇರುವಂತೆ ನೋಡಿಕೊಳ್ಳಿ. ಸಂಘದ ಸಭೆಯ ನಡಾವಳಿಗಳು ಹಾಗೂ ನಿಮ್ಮ ಗಮನಕ್ಕೆ  ಬರುವ ಅಪರಾಧ ಚಟುವಟಿಕೆಗಳನ್ನು ಅವರು ಗಮನಕ್ಕೂ ತನ್ನಿ. ಅವರನ್ನು ಮನೆಯವರಂತೆ ನೋಡಿಕೊಳ್ಳಿ. ನಿಮ್ಮ ಮನೆ ಕಾರ್ಯಕ್ರಮಗಳಿಗೆ ಅವರನ್ನೂ ಆಹ್ವಾನಿಸಿ. ನಾಲ್ಕು ಜನರು ಸೇರಿದೆಡೆ, ನಾಲ್ಕು ಮಾತನಾಡಿದಾಗ ಸುತ್ತಮುತ್ತಲಿನ ಆಗು ಹೋಗುಗಳ ಬಗ್ಗೆ ಅವರ ಗಮನಕ್ಕೂ ಬರುತ್ತದೆ...' ಎಂದರು ಅಣ್ಣಾಮಲೈ ಅವರು.

ಯೂಫರ್‌ವಾಸ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಡಿಸಿಪಿಯವರು ಆ ಏರಿಯಾದ ಬೀಟ್ ಪೊಲೀಸರಾದ ಆಸೀಫ್ ಹಾಗೂ ಸದಾಶಿವ ಅವರನ್ನೂ ತಮ್ಮ ಪಕ್ಕದಲ್ಲಿ ವೇದಿಕೆಯಲ್ಲಿಯೇ ಕುಳ್ಳರಿಸಿಕೊಂಡಿದ್ದರು. ಅಷ್ಟೇ ಅಲ್ಲ ತಮ್ಮನ್ನು ಸನ್ಮಾನ ಮಾಡಲು ಮುಂದಾದವರಿಗೆ ತಮಗೆ ಹಾರ-ತುರಾಯಿ ಬೇಡ. ನಿಮ್ಮನ್ನು ರಾತ್ರಿ ಕಾಯುವ ಈ ಬೀಟ್ ಪೊಲೀಸರಿಗೆ ನಿಜವಾದ ಸನ್ಮಾನ ಸಲ್ಲಬೇಕೆಂದು, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿಸಿದರು. 

ಬೀಟ್ ಪೊಲೀಸರಿಗೆ ನಗದು ಬಹುಮಾನ: 
ಆಸೀಫ್ ಮತ್ತು ಸದಾಶಿವ ಅವರು ಆ ಪ್ರದೇಶದಲ್ಲಿ ರಾತ್ರಿಯೊಮ್ಮೆ ಅಹಿತಕರ ಘಟನೆ ನಡೆದಾಗ, ಬಂದು ಸ್ಪಂದಿಸಿದ ರೀತಿಯನ್ನು ಶೋಭಾ ಹಿಲ್‌ವ್ಯೂ ನಿವಾಸಿಗಳು ಡಿಸಿಪಿಯವರಿಗೆ ತಿಳಿಸಿದರು. ತಕ್ಷಣವೇ ಈ ಇಬ್ಬರ ಕಾರ್ಯವನ್ನು ಶ್ಲಾಘಿಸಿದ ಡಿಸಿಪಿಯವರು ಅವರಿಗೆ 5 ಸಾವಿರು ರೂ. ಬಹುಮಾನ ನೀಡುವುದಾಗಿ ಘೋಷಿಸಿದರು.

ಕೆಳ ಹಂತದಲ್ಲಿ ಇರುವವರು ಪ್ರಾಮಾಣಿಕವಾಗಿ, ಕಷ್ಟ ಪಟ್ಟು ಕೆಲಸ ಮಾಡುವುದರಿಂದಲೇ ಸಂಸ್ಥೆಯೊಂದು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು. ಈ ವಿಷಯವನ್ನು ಸ್ಪಷ್ಟವಾಗಿ ಅರಿತುಕೊಂಡ ಅಣ್ಣಾಮಲೈ ಅವರಂಥ ದಕ್ಷ ಧಿಕಾರಿಗಳು ಜನಸ್ನೇಹಿ ಕೆಲಸ ಮಾಡಲು ಸಾಧ್ಯವಾಗುತ್ತಿರುವುದು ಎನ್ನುವುದಕ್ಕೆ ಅವರ ಈ ನಡೆಯೇ ಸಾಕ್ಷಿ. 

ಎಲ್ಲ ಏರಿಯಾಗಳಲ್ಲಿಯೂ ಬೀಟ್ ಪೊಲೀಸರೊಂದಿಗೆ ಜನರು ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿ, ತಮ್ಮ ಸುತ್ತ ಮುತ್ತ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡಿದರೆ ಸಾಕು, ಆ ಪ್ರದೇಶ ಅಪರಾಧ ಮುಕ್ತವಾಗುವುದರಲ್ಲಿ ಅನುಮಾನವೇ ಇಲ್ಲ.