ಬೆಂಗಳೂರಿನ ಪೊಲಮ್ಮಾಸ್ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಪೋಟ: ವೃದ್ಧನ ದೇಹ ಛಿದ್ರ ಛಿದ್ರ
ಬೆಂಗಳೂರಿನ ಡೈರಿ ಸರ್ಕಲ್ ಬಳಿಯಿರುವ ಪೊಲಮ್ಮಾಸ್ ಹೋಟೆಲ್‌ನ ಸಿಲಿಂಡರ್ ಸ್ಫೋಟಗೊಂಡಿದ್ದು, ಹೋಟೆಲ್ ಮುಂಭಾಗದಲ್ಲಿದ್ದ ವೃದ್ಧನೊಬ್ಬನ ದೇಹ ಛಿದ್ರಗೊಂಡಿದೆ.
ಬೆಂಗಳೂರು (ಆ.24): ರಾಜ್ಯ ರಾಜಧಾನಿ ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಲಕ್ಕಸಂದ್ರ ವಾರ್ಡ್‌ನಲ್ಲಿರುವ ಪೊಲಮ್ಮಾಸ್ (Polamma's Hotel) ಹೋಟೆಲ್‌ನಲ್ಲಿ ಇಟ್ಟಿದ್ದ ಕಮರ್ಷಿಯಲ್ ಸಿಲಿಂಡರ್ ಸ್ಪೋಟಗೊಂಡಿದ್ದು, ಅಂಗಡಿಯ ಬಾಗಿಲ ಮುಂದೆ ಮಲಗಿದ್ದ ವೃದ್ಧನ ದೇಹ ಛಿದ್ರಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಸಿಲಿಂಡರ್ ಬ್ಲಾಸ್ಟ್ ಆಗಿರುವುದು ಬಾಂಬ್ ಸಿಡಿದಷ್ಟೇ ಭಯಂಕರವಾಗಿತ್ತು ಎಂದು ಸ್ಥಳೀಯರು ತಮಗಾದ ಭಯದ ಅನುಭವವನ್ನು ಹಂಚಕೊಂಡಿದ್ದಾರೆ.
ಹೌದು, ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಡೈರಿ ಸರ್ಕಲ್ ಬಳಿ ಯಾರೋ ಕಿಡಿಗೇಡಿಗಳಿ ಬಾಂಬ್ ಹಾಕಿ ಬ್ಲಾಸ್ಟ್ ಮಾಡಿದ್ದಾರೆ ಎನ್ನುವ ಭಯಂಕರ ಶಬ್ದ ಹಾಗೂ ಕಟ್ಟಡವೆಲ್ಲಾ ಅಲುಗಾಡಿದ ಅನುಭವ ಜನರಿಗೆ ಉಂಟಾಗಿದೆ. ಮನೆಯಲ್ಲಿ ಸುಖ ನಿದ್ರೆಯಲ್ಲಿದ್ದವರು ತಮ್ಮ ಪ್ರಾಣಕ್ಕೆ ಸಂಚಕಾರ ಬಂದಿತೇನೋ ಎಂದು ಧಿಡೀರನೆ ಮನೆಯಿಂದ ಹೊರಬಂದು ಪ್ರಾಣ ಉಳಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಆದರೆ, ಮನೆಯಿಂದ ಹೊರಬಂದು ನೋಡಿದವರಿಗೆ ಹೋಟೆಲ್ ಮುಂದಿನ ಬಾಗಿಲು (ಸೆಟ್ರಸ್) ಸಿಡಿದು, ಅದರ ಮುಂಭಾಗದಲ್ಲಿ ಮಲಗಿದ್ದ ವೃದ್ಧನ ದೇಹ ಛಿದ್ರಗೊಂಡ ಬಿದ್ದಿರುವುದನ್ನು ಕಂಡಿದ್ದಾರೆ. ಇದಾದ ನಂತರ, ಸಿಲಿಂಡರ್ ಸ್ಪೋಟದ ಬಗ್ಗೆ ಅರಿವಿಗೆ ಬಂದಿದ್ದು ಕೂಡಲೇ ಅಗ್ನಿಶಾಮಕ ದಳಕ್ಕೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ವಿವಿಧೆಡೆ ಆ.26ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಇನ್ನು ಘಟನೆ ನಡೆದ ಸ್ಥಳ ಬೆಂಗಳೂರಿನ ಲಕ್ಕಸಂದ್ರ ವಾರ್ಡ್‌ನ ಡೈರಿ ಸರ್ಕಲ್ ಬಳಿಯ ಮಹಾಲಿಂಗೇಶ್ ಬಡಾವಣೆಯಲ್ಲಿ ಘಟನೆ ನಡೆದಿದೆ. ಈ ರಸ್ತೆಯಲ್ಲಿದ್ದ ಪೋಲಮಸ್ ಹೋಟೆನಲ್ಲಿದ್ದ ಕಮರ್ಷಿಯಲ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ಸ್ಪೋಟದ ತೀವ್ರತೆಗೆ ಹೋಟೆಲ್ ಮುಂದಿನ ಕಟ್ಟೆಯಲ್ಲಿ ಮಲಗಿದ್ದ ವಯೋವೃದ್ಧ ದೇವೆಲ್ಲಾ ಛಿಧ್ರಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು. ಇನ್ನು ಹೋಟೆಲ್‌ನ ಮೇಲ್ಮಹಡಿಯಲ್ಲಿದ್ದ ಇಬ್ಬರು ಕಾರ್ಮಿಕರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಸ್ಥಳೀಯರ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಮುಂದಾಗುವ ಅಪಘಾತವನ್ನು ತಡೆಯುವ ದೃಷ್ಟಿಯಿಂದ ಹೋಟೆಲ್ ಜನರನ್ನು ಅಲ್ಲಿಂದ ದೂರ ಕಳುಹಿಸಿ ಬ್ಯಾರಿಕೇಡ್ ಹಾಕಿದ್ದಾರೆ. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಬಂದ ನಂತರ ಬೆಂಕಿಯನ್ನು ನಂದಿಸಲು ನೆರವು ನೀಡಿದ್ದಾರೆ. ಇನ್ನು ಘಟನೆ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವರಮಹಾಲಕ್ಷ್ಮಿ ಪೂಜಿಸುವ ಹೂವು, ಹಣ್ಣಿನ ಮೇಲೆ ವಕ್ರದೃಷ್ಟಿ ಬೀರಿದಳೇ ಧನಲಕ್ಷ್ಮಿ: ಗಗನಕ್ಕೇರಿದ ಬೆಲೆಗಳು
ಸಿಲಿಂಡರ್ ಬ್ಲಾಸ್ಟ್ ಪ್ರಕರಣ ತಪ್ಪಿದ ಬಾರಿ ಅನಾಹುತ: ಇಂದು ಬೆಳಿಗ್ಗೆ 9 ಗಂಟೆಗೆ ಘಟನೆ ಸಂಭವಿಸಿದೆ. ಪೋಲಮ್ಮಸ್ ಮೆಸ್ ಮೊದಲ ಮಹಡಿಯಲ್ಲಿ ಹೋಟೆಲ್ ನಡೆಸಲಾಗುತ್ತದೆ. ಕೆಳ ಮಹಡಿಯಲ್ಲಿ ಸಿಲಿಂಡರ್ ಗಳನ್ನ ಇಡಲಾಗಿತ್ತು. ಇಲ್ಲಿ ಒಟ್ಟು 10 ಕಮರ್ಷಿಯಲ್ ಸಿಲಿಂಡರ್ ಗಳನ್ನ ಇಡಲಾಗಿದೆ. ಇಂದು ಬೆಳಿಗ್ಗೆ ಎಂದಿನಂತೆ ಅಡುಗೆ ಭಟ್ಟರು ಟಿಫನ್‌ಗೆ ರೆಡಿ ಮಾಡುತ್ತಿದ್ದರು. ಮೊದಲ ಮಹಡಿಯಲ್ಲಿ ಅಡುಗೆ ಮಾಡುತ್ತಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮೊದಲ ಮಹಡಿಯಲ್ಲಿದ್ದ ಸ್ಥಳೀಯ ನಾಗರಾಜ್ ಹಾಗೂ ರೋಮಯ್ಯ ಚೋರ್ಲಾ ಅಸ್ಸಾಂ ಮೂಲದವರ ರಕ್ಷಣೆ ಮಾಡಲಾಗಿದೆ. ಆದರೆ, ಸಿಲಿಂಡರ್ ಜಾಗದಲ್ಲಿ ಮಲಗಿದ್ದ ರವಿ (55) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಕೇವಲ ಒಂದು ಸಿಲಿಂಡರ್ ಮಾತ್ರ ಸ್ಪೋಟವಾಗಿದ್ದು, ಅದರ ಬಳಿ ಇಡಲಾಗಿದ್ದ ಉಳಿದ 9 ಸಿಲಿಂಡರ್‌ಗಳಿಗೆ ಸ್ಫೋಟಗೊಂಡಿಲ್ಲ. ಈ ಸಿಲಿಂಡರ್‌ಗಳೂ ಕೂಡ ಸ್ಫೋಟವಾಗಿದ್ದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು.