ಬೆಂಗಳೂರು (ಅ.28): ಹಣ ಪಡೆದು ಕೊರೋನಾ ಸೋಂಕು ಪರೀಕ್ಷೆಯಲ್ಲಿ ‘ನೆಗೆಟಿವ್‌ ವರದಿ’ ನೀಡುತ್ತಿದ್ದ ಇಬ್ಬರು ಬಿಬಿಎಂಪಿ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ನಡುವೆ, ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

‘ಪೊಬ್ಬತ್ತಿ ಆರೋಗ್ಯ ಕೇಂದ್ರ’ದಲ್ಲಿನ ಆಶಾ ಕಾರ್ಯಕರ್ತೆ ಶಾಂತಿ ಹಾಗೂ ಎನ್‌ಯುಎಚ್‌ಎಂ ಅಡಿ ಲ್ಯಾಬ್‌ ಟೆಕ್ನಿಷಿಯನ್‌ ಮಹಾಲಕ್ಷ್ಮಿ ತಲಾ 2,500 ರು. ಹಣ ಪಡೆದು ಕೊರೋನಾ ಪರೀಕ್ಷೆಯ ನೆಗೆಟಿವ್‌ ವರದಿ ನೀಡುತ್ತಿರುವುದು ದೃಢಪಟ್ಟಹಿನ್ನೆಲೆಯಲ್ಲಿ ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ.

ಇನ್ನು ಪಾಲಿಕೆಯ ಆರೋಗ್ಯ ಕೇಂದ್ರದ ಗುತ್ತಿಗೆ ವೈದ್ಯಾಧಿಕಾರಿ ಡಾ. ಶೈಲಜಾ ಅವರನ್ನು ಕರ್ತವ್ಯ ನಿರ್ಲಕ್ಷ್ಯ ಹಿನ್ನಲೆಯಲ್ಲಿ ಸೇವೆಯಿಂದ ಬಿಡುಗಡೆಗೊಳಿಸಿ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಆದೇಶಿಸಿದ್ದಾರೆ.

ರಾಜ್ಯದಲ್ಲೂ ಲಸಿಕೆ ಪ್ರಯೋಗ ಯಶಸ್ವಿ: ಹೊಸ ವರ್ಷಕ್ಕೆ ಕೊರೋನಾ ವ್ಯಾಕ್ಸಿನ್? .

ಕ್ರಮ- ಸುಧಾಕರ್‌:  ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುಧಾಕರ್‌, ‘ಕೊರೋನಾ ನೆಗೆಟಿವ್‌ ಎಂದು ಸುಳ್ಳು ವರದಿ ನೀಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದೆ. ಸುಳ್ಳು ವರದಿ ನೀಡುತ್ತಿದ್ದ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಈ ಘಟನೆ ಒಬ್ಬ ವೈದ್ಯನಾಗಿ ನನಗೆ ನೋವಾಗಿದೆ. ಅನೈತಿಕವಾಗಿ ಹಣ ಮಾಡುವುದು ವೈದ್ಯ ವೃತ್ತಿಗೆ ಅನ್ಯಾಯ ಮಾಡಿದಂತೆ. ಮುಂದಿನ ದಿನದಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದರು.