ಬೆಂಗಳೂರು(ಅ.28): ಇಡೀ ಮನುಕುಲವನ್ನೇ ತಲ್ಲಣಗೊಳಿಸಿರುವ ಕೊರೋನಾ ಸೋಂಕಿಗೆ ವಿಶ್ವದಾದ್ಯಂತ ಲಸಿಕೆ ಆವಿಷ್ಕಾರ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಯಶಸ್ವಿಯಾಗಿ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು, 2021ರ ಹೊಸ ವರ್ಷದ ಆರಂಭದಲ್ಲಿ ಲಸಿಕೆ ಲಭ್ಯವಾಗುವ ಆಶಾಭಾವನೆ ವ್ಯಕ್ತಪಡಿಸಿದೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊರೋನಾ ಲಸಿಕೆಯ ಸಂಶೋಧನೆ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿರುವ ‘ಆಸ್ಟ್ರಾಜೆನೆಕಾ’ ಸಂಸ್ಥೆಯ ಪ್ರತಿನಿಧಿಗಳ ಜತೆ ಸೋಮವಾರ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು, ಸಭೆಯಲ್ಲಿ ಲಸಿಕೆ ಅಭಿವೃದ್ಧಿಯ ಪ್ರಗತಿ, ಉತ್ಪಾದನೆ, ಲಸಿಕೆ ಹಂಚಿಕೆ ಮತ್ತು ಅದರ ಸಾಧಕ-ಬಾಧಕಗಳ ಕುರಿತು ಸಮಾಲೋಚನೆ ನಡೆಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಮುಂದಿನ ವರ್ಷದ ಆರಂಭದಲ್ಲಿ ಕೊರೋನಾ ಸೋಂಕಿಗೆ ಲಸಿಕೆ ಬರುವ ನಿರೀಕ್ಷೆ ಇದೆ. ಲಸಿಕೆ ಹಂಚಿಕೆಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಲಸಿಕೆ ತರಲು ವಿಶ್ವದ ಹಲವು ರಾಷ್ಟ್ರಗಳು ಪ್ರಯತ್ನ ನಡೆಸುತ್ತಿವೆ. ಕೆಲವು ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸುತ್ತಿವೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ಆಸ್ಟ್ರಾಜೆನೆಕಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಂಶೋಧನೆ ನಡೆಸುತ್ತಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದ್ದು, 2 ಮತ್ತು 3ನೇ ಹಂತದಲ್ಲಿ ನಡೆಯುವ ಪ್ರಯೋಗದ ಬಳಿಕ ಅಂತಿಮಗೊಳ್ಳಲಿದೆ. 2021ರ ಹೊಸ ವರ್ಷದ ಆರಂಭದಲ್ಲಿ ಲಸಿಕೆ ಸಿಗುವ ವಿಶ್ವಾಸ ಇದೆ’ ಎಂದು ಹೇಳಿದರು.

56 ದಿನದಲ್ಲಿ ರೋಗನಿರೋಧಕ ಶಕ್ತಿ:

‘ಆಸ್ಟ್ರಾಜನಿಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ನಡೆಸಿದ ಸಮಾಲೋಚನೆ ತೃಪ್ತಿದಾಯಕವಾಗಿದೆ. ಮೊದಲ ಹಂತದಲ್ಲಿ 18 ವರ್ಷ ಮೇಲ್ಪಟ್ಟಆರೋಗ್ಯವಂತ 1,600 ಮಂದಿಗೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ. 56 ದಿನದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದು ಕಂಡು ಬಂದಿದೆ. ಎರಡನೇ ಹಂತದಲ್ಲಿ 5 ವರ್ಷ ಮೇಲ್ಪಟ್ಟಮಕ್ಕಳ ಮೇಲೆ ಪ್ರಯೋಗ ನಡೆಸಲಿದ್ದಾರೆ. ಈ ವೇಳೆ ಕೊರೋನಾ ಸೋಂಕಿತರ ಮೇಲೂ ಲಸಿಕೆ ಪ್ರಯೋಗಿಸುವುದಾಗಿಯೂ ಹೇಳಿದ್ದಾರೆ. ಮೂರನೇ ಹಂತದಲ್ಲಿ 55 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪ್ರಯೋಗಿಸಲಿದ್ದಾರೆ. ಈ ಎಲ್ಲಾ ಹಂತವೂ ಯಶಸ್ವಿಯಾದಲ್ಲಿ 2021ರ ಪ್ರಾರಂಭದಲ್ಲಿಯೇ ಲಸಿಕೆ ಆರಂಭವಾಗಲಿದೆ. ಮೈಸೂರಿನ ಜೆಎಸ್‌ಎಸ್‌ ಸಂಸ್ಥೆಯಲ್ಲಿ ಪ್ರಾಯೋಗಿಕವಾಗಿ ಲಸಿಕೆಯನ್ನು ನೀಡುತ್ತಿದ್ದಾರೆ. ಪುಣೆಯ ಸೀರಂ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ನೀಡಲಾಗುತ್ತಿದೆ. 100 ಕೋಟಿ ಜನರಿಗೆ ಲಸಿಕೆ ನೀಡುವ ಭರವಸೆಯನ್ನು ನೀಡಿದ್ದಾರೆ’ ಎಂದರು.

‘ಲಸಿಕೆ ನೀಡಿದ 28 ದಿನದಲ್ಲಿ ಆ್ಯಂಟಿ ಬಾಡಿ ಇಮ್ಯುನಿಟಿ ಹೆಚ್ಚಾಗಿದೆ. ಯಾವುದೇ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಕನಿಷ್ಠ 5-6 ವರ್ಷ ಬೇಕಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಏಳೆಂಟು ತಿಂಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕೊರೋನಾ ಸೋಂಕು ಇಲ್ಲದ ವ್ಯಕ್ತಿಗಳಿಗೆ ಲಸಿಕೆ ನೀಡಲಾಗಿದೆ. 2,3ನೇ ಹಂತದಲ್ಲಿ ಕೊರೋನಾ ಸೋಂಕು ಬಂದಿರುವವರಿಗೂ ಲಸಿಕೆ ನೀಡಲಾಗುತ್ತದೆ. ಪ್ರಯೋಗ ಯಶಸ್ವಿಯಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರ ಕೇಂದ್ರದೊಂದಿಗೆ ಮಾತುಕತೆ ನಡೆಸಿ ರಾಜ್ಯದಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ’ ಎಂದರು.

ಉನ್ನತ ಮಟ್ಟದ ಸಮಿತಿ:

ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗದೊಂದಿಗೆ ಆರೊಗ್ಯ ತಜ್ಞರು, ತಾಂತ್ರಿಕ ಪರಿಣತರು, ಪೂರೈಕೆದಾರರನ್ನು ಒಳಗೊಂಡಂತೆ ತಾಂತ್ರಿಕ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಲಾಜಿಸ್ಟಿಕ್‌ ಸಂಸ್ಥೆಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳು ಸಹ ಇರಲಿದ್ದಾರೆ. ಇದರ ಜತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ರಾಜ್ಯದಲ್ಲಿ ಲಸಿಕೆಯನ್ನು ವಿತರಿಸುವ ಮಾರ್ಗೋಪಾಯಗಳ ಬಗ್ಗೆ ಸಮಾಲೋಚಿಸಿ ಶೀಘ್ರದಲ್ಲಿಯೇ ಒಂದು ತೀರ್ಮಾನಕ್ಕೆ ಬರಲಿದ್ದೇವೆ. ಲಸಿಕೆಯ ಪೂರೈಕೆ, ಸಂಗ್ರಹಣೆ, ವಿತರಣೆ ಕುರಿತು ಸಮಿತಿ ಸಲಹೆ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ಯಾರಿಗೆ ಮೊದಲ ಲಸಿಕೆ?:

ಲಸಿಕೆಯನ್ನು ಮೊದಲು ಕೊರೋನಾ ವಾರಿಯರ್ಸ್‌ಗೆ ನೀಡಲಾಗುತ್ತದೆ. ನಂತರದಲ್ಲಿ ವಯೋವೃದ್ಧರು, ಇತರೆ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ, ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದ ಅವರು, ಲಸಿಕೆಗೆ ದರ ನಿಗದಿ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಲಸಿಕೆ ಪ್ರಯೋಗದ ಹಂತದಲ್ಲಿದೆ. ಸಂಸ್ಥೆಯವರು ಇದರಲ್ಲಿ ಯಾವುದೇ ಪಡೆಯುವುದಿಲ್ಲ. ಲಸಿಕೆಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಕೋವಿಡ್‌ ಪರೀಕ್ಷೆ, ಚಿಕಿತ್ಸೆ ಮೊದಲಾದ ವೆಚ್ಚಗಳನ್ನು ಭರಿಸಿದೆ. ಅದೇ ರೀತಿ ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಸರ್ಕಾರ ಬದ್ಧ ಇದೆ ಎಂದು ನುಡಿದರು.

‘ಸೋಂಕು, ಸಾವಿನ ಪ್ರಮಾಣ ಇಳಿಕೆ: ಸಂಶಯ ಬೇಡ’ 

ಕಳೆದ ಹತ್ತು ದಿನಗಳಿಂದ ಕೊರೋನಾ ಸೋಂಕು ಮತ್ತು ಸಾವಿನ ಪ್ರಮಾಣ ಇಳಿಕೆಯಾಗುತ್ತಿರುವ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಹೇಳಿದ್ದಾರೆ.

ಆರೋಗ್ಯ ಖಾತೆ ವಹಿಸಿಕೊಂಡ ಬಳಿಕ ಕಳೆದ 10 ದಿನಗಳಿಂದ ಕೊರೋನಾ ಸೋಂಕು ಮತ್ತು ಕೋವಿಡ್‌ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಮುಂದಿನ ಮೂರು ತಿಂಗಳು ಚಳಿಗಾಲದಲ್ಲಿ ಕೊರೋನಾ ಹೇಗೆ ವರ್ತಿಸುತ್ತದೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಆದರೆ, ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಕೋವಿಡ್‌ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕೆಲವರು ಸಂಶಯದಿಂದ ನೋಡುತ್ತಿದ್ದಾರೆ. ಯಾವುದೇ ಅಂಕಿ-ಸಂಖ್ಯೆಯನ್ನು ನಾವು ವ್ಯತ್ಯಾಸ ಮಾಡುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯೇ ರಾಜ್ಯ ಸರ್ಕಾರ ಅತ್ಯಂತ ಪಾರದರ್ಶಕವಾಗಿ ನಡೆದುಕೊಂಡಿದೆ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದೆ. ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ನೀಡಲಾಗುತ್ತಿದೆ. ಇಳಿಮುಖವಾಗಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಯೊಬ್ಬ ಕೊರೋನಾ ಯೋಧರ ಪ್ರಯತ್ನ ಕಾರಣವಾಗಿದೆ ಎಂದು ಸಚಿವರು ತಿಳಿಸಿದರು.