ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಫೆ.12): ಇತ್ತೀಚೆಗೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ನಡುವೆ ಬೀದಿ ಜಗಳಕ್ಕೆ ಕಾರಣವಾಗಿದ್ದ ನಿರ್ಭಯಾ ನಿಧಿಯಡಿ ರಾಜಧಾನಿ ಬೆಂಗಳೂರಿನಲ್ಲಿ 670 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಅಳವಡಿಸುವ ಕಾಮಗಾರಿಯ ಗುತ್ತಿಗೆ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ಟೆಂಡರ್‌ ಕರೆಯುವುದು ಬಹುತೇಕ ನಿಶ್ಚಿತವಾಗಿದೆ.

"

ಈ ಕಾಮಗಾರಿ ಸಂಬಂಧ ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿರುವ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಪ್ರಸ್ತುತ ಜಾರಿಯಲ್ಲಿದ್ದ ಗುತ್ತಿಗೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಟೆಂಡರ್‌ ಪುನರ್‌ ಪರಿಶೀಲನೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ನೇತೃತ್ವದ ಉನ್ನತ ಮಟ್ಟದ ಸಮಿತಿ (ಎಸ್‌ಎಲ್‌ಸಿ) ಮುಂದೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಈಗಾಗಲೇ ಈ ನಿಟ್ಟಿನಲ್ಲಿ ಟೆಂಡರ್‌ ಆಹ್ವಾನ ಸಮಿತಿ ಅಧ್ಯಕ್ಷ ಹಾಗೂ ಬೆಂಗಳೂರು ಹೆಚ್ಚುವರಿ ಪೊಲೀಸ್‌ ಆಯುಕ್ತ (ಪಶ್ಚಿಮ) ಸೌಮೆಂದು ಮುಖರ್ಜಿ ಜತೆ ಆಯುಕ್ತ ಕಮಲ್‌ ಪಂತ್‌ ಸಮಾಲೋಚಿಸಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಕೆಯಾಗಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ತಮ್ಮ ಮೇಲಿನ ಆರೋಪಕ್ಕೆಲ್ಲ ಸ್ಪಷ್ಟ ಉತ್ತರ ಕೊಟ್ಟ  ಹೇಮಂತ್ ನಿಂಬಾಳ್ಕರ್

ಈ ನಿರ್ಧಾರದಿಂದ ಎರಡು ವರ್ಷಗಳ ಅವಧಿಯಲ್ಲಿ ನಗರ ಸುರಕ್ಷಾ ಯೋಜನೆ ಸಂಬಂಧ ಮೂರು ಬಾರಿ ಟೆಂಡರ್‌ ರದ್ದುಗೊಂಡಂತಾಗುತ್ತದೆ. ಈ ಬಾರಿ ಅಧಿಕಾರಿಗಳ ಜಟಾಪಟಿ ಹಾಗೂ ವಿವಾದಿತ ಅಧಿಕಾರಿಗಳ ವರ್ಗಾವಣೆ ಟೆಂಡರ್‌ ಸ್ಥಗಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ.

7200 ಸಿಸಿಟಿವಿ ಕ್ಯಾಮೆರಾ:

ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಸಲುವಾಗಿ ನಿರ್ಭಯಾ ನಿಧಿಯಡಿ ‘ನಗರ ಸುರಕ್ಷಾ’ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮದಡಿ .670 ಕೋಟಿ ವೆಚ್ಚದಲ್ಲಿ ನಗರ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಮಟ್ಟದ 7200 ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಬೆಂಗಳೂರು ಪೊಲೀಸರು ನಿರ್ಧರಿಸಿದ್ದರು. ಈ ಯೋಜನೆ ಉಸ್ತುವಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ (ಎಲ್‌ಎಸ್‌ಸಿ) ರಚಿಸಲಾಗಿದೆ. ಈ ಸಮಿತಿಯಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರ ಪೊಲೀಸ್‌ ಆಯುಕ್ತರು ಹಾಗೂ ಹೆಚ್ಚುವರಿ ಆಯುಕ್ತರು (ಆಡಳಿತ) ಸದಸ್ಯರಾಗಿದ್ದಾರೆ. ಇದರಲ್ಲಿ ಟೆಂಡರ್‌ ಪ್ರಕ್ರಿಯೆ ನಿರ್ವಹಣೆಗೆ ಹೆಚ್ಚುವರಿ ಆಯುಕ್ತ (ಆಡಳಿತ)ರ ನೇತೃತ್ವದಲ್ಲಿ ಟೆಂಡರ್‌ ಆಹ್ವಾನ ಸಮಿತಿಯನ್ನು ಮುಖ್ಯ ಕಾರ್ಯದರ್ಶಿಗಳು ರಚಿಸಿದ್ದರು. ಈ ಯೋಜನೆಯ ಕಾಮಗಾರಿಗೆ ಎಲ್‌ಎಸ್‌ಸಿ ಸಮಿತಿಯೇ ಅಂತಿಮವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಪ್ತರಿಗೆ ಟೆಂಡರ್ ಕೊಡಿಸಲು ಲಾಬಿ ಮಾಡಿದ್ರಾ ಡಿ ರೂಪಾ.?

ಅಧಿಕಾರಿಗಳ ನಡುವೆ ವಿವಾದವೇನು?:

ನಗರ ಸುರಕ್ಷಾ ಯೋಜನೆಯಡಿ ಗುತ್ತಿಗೆ ಸಂಬಂಧಿಸಿದ ತಾಂತ್ರಿಕ ರೂಪರೇಷೆ ಸಿದ್ಧಪಡಿಸಲು ಈ ಅಂಡ್‌ ವೈ ಕಂಪನಿಗೆ ಟೆಂಡರ್‌ ಆಹ್ವಾನ ಸಮಿತಿ ಗುತ್ತಿಗೆ ನೀಡಿತ್ತು. ಇದಕ್ಕೆ 2 ಕೋಟಿ ವೆಚ್ಚ ಭರಿಸಲಾಗಿತ್ತು. ಆದರೆ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್‌ ಸಾರ್ವಜನಿಕ ಪ್ರಕಟಣೆಗೂ ಮುನ್ನವೇ ಮಾಹಿತಿ ಪಡೆಯಲು ಕೋರಿದ್ದರು ಎಂದು ಆಗಿನ ಗೃಹ ಕಾರ್ಯದರ್ಶಿ, ಐಪಿಎಸ್‌ ಅಧಿಕಾರಿ ಡಿ. ರೂಪಾ ವಿರುದ್ಧ ಟೆಂಡರ್‌ ಆಹ್ವಾನ ಸಮಿತಿ ಅಧ್ಯಕ್ಷ ಹಾಗೂ ಹೆಚ್ಚುವರಿ ಆಯುಕ್ತ (ಆಡಳಿತ) ಹೇಮಂತ್‌ ನಿಂಬಾಳ್ಕರ್‌ ಆರೋಪಿಸಿದ್ದರು. ಈ ಆರೋಪ ತಳ್ಳಿ ಹಾಕಿದ್ದ ರೂಪಾ, ಕಾನೂನು ಪ್ರಕಾರವೇ ಮಾಹಿತಿ ಕೋರಿದ್ದೆ ಎಂದಿದ್ದರು. ಈ ವಿವಾದವು ಅಧಿಕಾರಿಗಳ ನಡುವೆ ಬಹಿರಂಗ ಜಗಳಕ್ಕೆ ಸಹ ಕಾರಣವಾಗಿತ್ತು.
ನಗರ ಸುರಕ್ಷಾ ಯೋಜನೆಯಡಿ ಸಿಸಿಟಿವಿ ಅಳವಡಿಸುವ 670 ಕೋಟಿ ಮೊತ್ತದ ಕಾಮಗಾರಿ ಗುತ್ತಿಗೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಕೆಲವು ನಿಯಮಗಳನ್ನು ಮಾರ್ಪಡು ಮಾಡಲಾಗಿದೆ. ಹೀಗಾಗಿ ಪುನರ್‌ ಪರಿಶೀಲನೆಗೆ ಎಲ್‌ಎಲ್‌ಸಿ ಮುಂದೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.