ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಎಂದು ಗುರುತಿಸಿಕೊಂಡಿದ್ದ ಮಹಿಳೆಯೊಬ್ಬರು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದಾರೆ. 45 ಸಾವಿರ ರೂ. ಸಾಲಕ್ಕೆ 3.45 ಲಕ್ಷ ರೂ. ವಸೂಲಿ ಮಾಡಿದ್ದರೂ, ಸಾಲಗಾರನನ್ನು ಹಿಂಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಬೆಂಗಳೂರು (ಜ.22): ಸಿಲಿಕಾನ್ ಸಿಟಿ ಬೆಂಗಳೂರಿನ ಕಮಲಾನಗರ, ನಾಗರಬಾವಿ, ವಿಜಯನಗರ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ನಾಯಕಿ ಎಂದು ಗುರುತಿಸಿಕೊಂಡಿದ್ದ ಮಹಿಳೆ ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಕಳೆದ ಮೂರು ವರ್ಷಗಳ ಹಿಂದೆ ಕೇವಲ 45 ಸಾವಿರ ರೂ. ಸಾಲ ಕೊಟ್ಟಿದ್ದರು. ಆದರೆ, ಈ ಸಾಲಕ್ಕೆ ಶೇ.45 ಪರ್ಸೆಂಟ್ ಬಡ್ಡಿ ಹಾಕಿದ್ದು ಕಳೆದ ಮೂರು ವರ್ಷಗಳಿಂದ ಸಾಲಗಾರನ ಬಳಿ 3.45 ಲಕ್ಷ ರೂ. ಸಾಲ ವಸೂಲಿ ಮಾಡಿದ್ದಾರೆ. ಆದರೂ, ಸಾಲಕ್ಕೆ ಬಡ್ಡಿ ಕಟ್ಟುವಂತೆ ಸಾಲಗಾರನನ್ನು ಹಿಂಸಿಸಿ ಮನೆಗೆ ರೌಡಿಗಳನ್ನು ಕಳಿಸಿ ಧಮ್ಕಿ ಹಾಕುತ್ತಿದ್ದಾರೆ.

ಈ ಘಟನೆ ಚಂದ್ರಾಲೇಔಟ್‌ನ ಕಮಲಾ ನಗರದಲ್ಲಿ ನಡೆದಿದೆ. ತಾಯಿ ಮುಮ್ತಾಜ್ ಹಾಗೂ ಮಗಳು ಸೀಮಾ ಎಂಬುವವರು ಕೆಲವು ಪುಡಿ ರೌಡಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುವ ಮೂಲಕ ಬಡ ಕಾರ್ಮಿಕರ ರಕ್ತ ಹೀರುತ್ತಿದ್ದಾರೆ. 

ರಾಜಕೀಯ ನಾಯಕರ ಜೊತೆ ಗುರ್ತಿಸಿಕೊಂಡಿರೋ ತಾಯಿ-ಮಗಳು, ವಾರದ ಲೆಕ್ಕದಲ್ಲಿ ಸಾಲವನ್ನು ಕೊಟ್ಟು, ಅವರ ಕೊಟ್ಟ ಸಾಲಕ್ಕೆ ಕಾನೂನು ಬಾಹಿರವಾಗಿ ಶೇ.45 ಪರ್ಸೆಂಟ್‌ನಂತೆ ಬಡ್ಡಿ ಪಡೆಯುತ್ತಿದ್ದರು. ಬಡ್ಡಿ ಕಟ್ಟದಿದ್ದರೆ, ಕೆಲವೇ ತಿಂಗಳಿಗೆ ಸಾಲ, ಬಡ್ಡಿಗೆ ಚಕ್ರಬಡ್ಡಿ ಹಾಕುತ್ತಿದ್ದರು. ಇನ್ನು ಸಾಲ ತೀರಿಸಲಾಗದೇ ತಾನಿದ್ದ ಸಣ್ಣ ಮನೆಯನ್ನು ಲೀಸ್‌ಗೆ ಹಾಕಿದ ಬಡಪಾಯಿ ವ್ಯಕ್ತಿ ಎಲ್ಲ ಹಣವನ್ನು ಈ ಬಡ್ಡಿಗಾಗಿ ರಕ್ತ ಹೀರುವ ತಾಯಿ-ಮಗಳಿಗೆ ಕೊಟ್ಟರೂ ಹಣದ ದಾಹ ತೀರಿರಲಿಲ್ಲ. ತನಗೆ ನೀನು ಇನ್ನೂ ಬಡ್ಡಿ ಹಣ ಪಾವತಿ ಮಾಡಬೇಕು ಎಂದು ಸಾಲ ಪಡೆದವನ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಬಂಗಾರಿ ಐಶ್ವರ್ಯ ಗೌಡ ವಿರುದ್ಧ ಮಂಡ್ಯದಲ್ಲಿ ಮತ್ತೊಂದು ಪ್ರಕರಣ

ಕಮಲಾನಗರದ ಮುಮ್ತಾಜ್ ಎನ್ನುವ ಮಹಿಳೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ತಾಹೀರ್ ಖರಾಮ್ ಎನ್ನುವ ವ್ಯಕ್ತಿಗೆ ಕಷ್ಟದಲ್ಲಿದ್ದಾಗ 45 ಸಾವಿರ ರೂ. ಸಾಲ ಕೊಟ್ಟಿದ್ದಳು. ಇದಕ್ಕೆ ದುಬಾರಿ ಬಡ್ಡಿ ಪಾವತಿ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಒಪ್ಪಿಕೊಂಡು ಬಡ್ಡಿ ಹಣ ಪಾವತಿ ಮಾಡುತ್ತಾ ಹೋಗುತ್ತಿದ್ದ ತಾಹೀರ್‌ಗೆ ಆತನ ದುಡಿಮೆಯ ಶೇ.80ಕ್ಕಿಂತ ಹೆಚ್ಚಿನ ಹಣವನ್ನು ಕಿತ್ತುಕೊಂಡು ಚಿತ್ರಹಿಂಸೆ ಕೊಡುತ್ತಿದ್ದಳು. ಈ ಸಾಲದಿಂದ ಮುಕ್ತಿ ಸಿಕ್ಕಿದರೆ ಸಾಕು ಹೇಗಾದರೂ ಜೀವನ ಮಾಡಬಹುದು ಎಂದರಿತ ತಾಹೀರ್ ತಾನಿದ್ದ ಸ್ವಂತ ಸಣ್ಣ ಮನೆಯನ್ನು ಬೇರೆಯವರಿಗೆ ಲೀಸ್‌ಗೆ ಕೊಟ್ಟು ಬಂದ ಹಣವನ್ನು ಸಾಲ ಪಾವತಿ ಮಾಡಿದ್ದಾರೆ. ತಾನು 2022ರಲ್ಲಿ ಪಡೆದ 45 ಸಾವಿರ ರೂ. ಹಣಕ್ಕೆ ಈವರೆಗೆ 3 ಲಕ್ಷದ 45 ಸಾವಿರ ರೂ. ಹಣವನ್ನು ವಾಪಸ್ ಕೊಟ್ಟಿದ್ದಾರೆ. ಆದರೂ, ಸಾಲ ತೀರಿಲ್ಲವೆಂದು ಅಮ್ಮ, ಮಗಳು ಸಾಲಗಾರನ ಮನೆಗೆ ರೌಡಿಗಳನ್ನು ಕಳುಹಿಸಿ ಹಲ್ಲೆ ಮಾಡಿಸಿದ್ದಾರೆ.

ಇನ್ನು ತಾಹೀರ್ ಖರಾಮ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಕೆಲವು ಹುಡುಗರನ್ನು ಕಳಹಿಸಿ ದಾಂಧಲೆ ಮಾಡಿಸಿ, ಹಲ್ಲೆ ಮಾಡಿಸಿದ್ದಾರೆ. ನಂತರಮ ಸ್ಥಳಕ್ಕೆ ಬಂದ ಮುಮ್ತಾಜ್ ಮತ್ತು ಆಕೆಯ ಮಗಳು ಸೀಮಾ ತಾಹೀರ್‌ಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಇದರಿಂದ ತಾಹೀರ್ ಪ್ರಜ್ಞೆ ತಪ್ಪಿಬಿದ್ದು ಆಸ್ಪತ್ರೆಗೆ ಸೇರಿದ್ದಾನೆ. ಇಷ್ಟಕ್ಕೆ ಸುಮ್ಮನಾಗಲೇ ಆಸ್ಪತ್ರೆಯಲ್ಲಿದ್ದ ತಾಹೀರ್‌ಗೆ ಪೋನ್ ಮಾಡಿ ಉರ್ದು ಭಾಷೆಯಲ್ಲಿ ಅಶ್ಲೀಲವಾಗಿ ನಿಂದಿಸಿ, ಹಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ತಾಹೀರನ ಹೆಂಡತಿ ಚಂದ್ರ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತನ್ನ ಆಟೋ ಹತ್ತಿದವರ ಮನೆ ದೋಚಿದವ ಅರಸ್ಟ್‌