ಬೆಂಗಳೂರು: ಬೈಯಪ್ಪನಹಳ್ಳಿ ಫ್ಲೈಓವರ್ ವೆಚ್ಚ ಭಾರಿ ಹೆಚ್ಚಳ!
ಕಳೆದ ಎರಡ್ಮೂರು ವರ್ಷದಿಂದ ಚರ್ಚೆಯಲ್ಲಿರುವ ಬೈಯಪನಹಳ್ಳಿ ರೋಟರಿ (ವೃತ್ತಾಕಾರ) ಮೇಲ್ಸೇತುವೆಯ ಯೋಜನಾ ವೆಚ್ಚವನ್ನು ಹಿಗ್ಗಿಸಿ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ, ಹೆಚ್ಚಾದ ಯೋಜನಾ ವೆಚ್ಚವನ್ನು 2024-25ನೇ ಸಾಲಿನಲ್ಲಿ ಪಡೆದುಕೊಳ್ಳುವಂತೆಯೂ ಸೂಚಿಸಿದೆ.
ಗಿರೀಶ್ ಗರಗ
ಬೆಂಗಳೂರು (ಫೆ.15): ಕಳೆದ ಎರಡ್ಮೂರು ವರ್ಷದಿಂದ ಚರ್ಚೆಯಲ್ಲಿರುವ ಬೈಯಪನಹಳ್ಳಿ ರೋಟರಿ (ವೃತ್ತಾಕಾರ) ಮೇಲ್ಸೇತುವೆಯ ಯೋಜನಾ ವೆಚ್ಚವನ್ನು ಹಿಗ್ಗಿಸಿ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ, ಹೆಚ್ಚಾದ ಯೋಜನಾ ವೆಚ್ಚವನ್ನು 2024-25ನೇ ಸಾಲಿನಲ್ಲಿ ಪಡೆದುಕೊಳ್ಳುವಂತೆಯೂ ಸೂಚಿಸಿದೆ.
ಬೈಯಪನಹಳ್ಳಿ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಬರುವ ವಾಹನ ಸವಾರರ ಅನುಕೂಲಕ್ಕಾಗಿ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆ ಯೋಜನೆ ಜಾರಿಗೆ ಬಿಜೆಪಿ ಸರ್ಕಾರವಿದ್ದಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ, ಯೋಜನೆಗೆ ಸಂಬಂಧಿಸಿದಂತೆ ಅನುದಾನ ನಿಗದಿ ಸೇರಿ ಇನ್ನಿತರ ಕಾರಣಗಳಿಂದಾಗಿ ಮೇಲ್ಸೇತುವೆ ನಿರ್ಮಾಣ ಸಾಧ್ಯವಾಗಿರಲಿಲ್ಲ. 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಮೀಸಲಿಡಲಾಗಿತ್ತಾದರೂ, ಯೋಜನೆ ಜಾರಿಯಾಗಿರಲಿಲ್ಲ. ಇದೀಗ ಯೋಜನೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದ್ದು, ಅದಕ್ಕಾಗಿ ₹117 ಕೋಟಿ ಯೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ.
ಆಡಳಿತ ಸುಧಾರಣೆಗೆ ಗ್ರಾಪಂಗಳಿಗೆ ರೇಟಿಂಗ್ ವ್ಯವಸ್ಥೆ: ಸಚಿವ ಪ್ರಿಯಾಂಕ್ ಖರ್ಗೆ
₹263 ಕೋಟಿಯಿಂದ ₹380 ಕೋಟಿಗೆ ಹೆಚ್ಚಳ: ಬೈಯಪನಹಳ್ಳಿ ರೈಲು ನಿಲ್ದಾಣದ ಬಳಿಯಲ್ಲಿ ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ 2021ರಂದು ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಮೇಲ್ಸೇತುವೆ ನಿರ್ಮಾಣ, ತಲಾ ಒಂದು ಸಬ್‌ವೇ, ರೈಲ್ವೆ ಕೆಳಸೇತುವೆ ನಿರ್ಮಾಣ, ಭೂಸ್ವಾಧೀನ ಸೇರಿದಂತೆ ಇನ್ನಿತರ ಕಾಮಗಾರಿ ಹಾಗೂ ಕ್ರಮಕ್ಕಾಗಿ ₹263 ಕೋಟಿ ವ್ಯಯಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಅಷ್ಟು ಮೊತ್ತದ ಹಣವನ್ನು ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು.
ಆದರೆ, 2023ರ ಜುಲೈನಲ್ಲಿ ಇಂಧಿನ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ನಡೆದ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ರೋಟರಿ ಮೇಲ್ಸೇತುವೆಯ ಇಳಿಯುವ ಸ್ಥಳವನ್ನು ಮುಕುಂದ ಚಿತ್ರಮಂದಿರದ ಬದಲು ಐಟಿಸಿ ಸಂಸ್ಥೆ ಇರುವಲ್ಲಿ ಇಳಿಯುವಂತೆ ವಿಸ್ತರಿಸಲು ತೀರ್ಮಾನಿಸಲಾಯಿತು. ಆ ಹಿನ್ನೆಲೆಯಲ್ಲಿ ಮೇಲ್ಸೇತುವೆಯ ಉದ್ದ 1.50 ಕಿ.ಮೀ. ಹೆಚ್ಚಾಗಿದ್ದಲ್ಲದೆ, ಅದರಿಂದ ಯೋಜನಾ ವೆಚ್ಚ ₹117 ಕೋಟಿ ಹೆಚ್ಚುವಂತಾಗಿದೆ.
ಯುಟಿಲಿಟಿ ಸ್ಥಳಾಂತರಕ್ಕೆ ಹೆಚ್ಚುವರಿ ₹5.90 ಕೋಟಿ: ಮೇಲ್ಸೇತುವೆಯ ಉದ್ದ ಹೆಚ್ಚಾದ ಕಾರಣದಿಂದಾಗಿ ಜಿಎಸ್‌ಟಿ ಮೊತ್ತ, ಯುಟಿಲಿಟಿ ಸ್ಥಳಾಂತರ, ಡಿಪಿಆರ್ ಶುಲ್ಕಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವಂತಾಗಿದೆ. ಮೇಲ್ಸೇತುವೆ ಕಾಮಗಾರಿಯ ಮೊತ್ತವನ್ನು ಈ ಹಿಂದೆ ₹148.67 ಕೋಟಿಗೆ ನಿಗದಿ ಮಾಡಲಾಗಿತ್ತು. ಆದರೀಗ ಅದನ್ನು ₹235.03 ಕೋಟಿಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ, ಮೇಲ್ಸೇತುವೆ ಕೆಳಭಾಗದಲ್ಲಿನ ರಸ್ತೆ ನಿರ್ಮಾಣದ ಮೊತ್ತವನ್ನು ₹15.27 ಕೋಟಿಯಿಂದ ₹21.18 ಕೋಟಿಗೆ ಹೆಚ್ಚಳ ಮಾಡಲಾಗಿದೆ.
ಅದರ ಜತೆಗೆ ಮೇಲ್ಸೇತುವೆ ನಿರ್ಮಾಣದ ಮಾರ್ಗದಲ್ಲಿನ ಒಳಚರಂಡಿ, ಕುಡಿಯುವ ನೀರಿನ ಪೈಪ್, ವಿದ್ಯುತ್ ತಂತಿ ಸೇರಿದಂತೆ ಇನ್ನಿತರ ಯುಟಿಲಿಟಿಗಳ ಸ್ಥಳಾಂತರಕ್ಕೆ ಈ ಹಿಂದೆ ₹6 ಕೋಟಿ ನಿಗದಿ ಮಾಡಲಾಗಿತ್ತು. ಆದರೀಗ ಅದು ₹11.90 ಕೋಟಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಡಿಪಿಆರ್ ಶುಲ್ಕ ₹5.16 ಕೋಟಿಯಿಂದ ₹7.46 ಕೋಟಿ, ಜಿಎಸ್‌ಟಿ ₹37.17 ಕೋಟಿಯಿಂದ ₹53.78 ಕೋಟಿಗೆ ಹೆಚ್ಚುವಂತಾಗಿದೆ.
ಕೊಪ್ಪಳ: ಹಾಲವರ್ತಿಯಲ್ಲಿ ದಲಿತರಿಗೆ ಹೊಟೇಲ್ ಪ್ರವೇಶವಿಲ್ಲ, ಕ್ಷೌರಕ್ಕೂ ನಕಾರ!
2024-25ಕ್ಕೆ ಹೆಚ್ಚುವರಿ ಅನುದಾನ: ಸದ್ಯ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಷರತ್ತು ಬದ್ಧವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅದರಂತೆ ಹೆಚ್ಚುವರಿ ₹117 ಕೋಟಿ ಅನುದಾನವನ್ನು 2024-25ನೇ ಸಾಲಿನ ಅನುದಾನದಲ್ಲಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆಯೇ, ಕಾಮಗಾರಿಗಳ ಪ್ರಗತಿಯನ್ನು ಪ್ರತಿ ತಿಂಗಳು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಅಧಿಕಾರಯುಕ್ತ ಸಮಿತಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.